Attari check post: ಅಟ್ಟಾರಿ- ವಾಘಾ ಗಡಿಯಲ್ಲಿ ಬಿಎಸ್ಎಫ್-ಪಾಕಿಸ್ತಾನ ರೇಂಜರ್ಗಳ ನಡುವೆ ಹಸ್ತಲಾಘವ ಇಲ್ಲದೇ ನಡೆಯಿತು ಕವಾಯತು
ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿ ಭಾಗಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕದನ ವಿರಾಮ ಘೋಷಣೆಯಾದ ಬಳಿಕ ಎರಡು ದೇಶಗಳ ಗಡಿ ಭಾಗದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗವಾದ ಅಟ್ಟಾರಿಯಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ಪುನರಾರಂಭಿಸಲಾಗಿದ್ದು, ಈ ವೇಳೆ ಎರಡು ದೇಶಗಳ ಸೈನಿಕರು ಹಸ್ತಲಾಘವವನ್ನು ನಡೆಸಲಿಲ್ಲ.



ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳು ಹಾಗೂ ವಾಯುನೆಲೆಗಳ ಮೇಲೆ ನಿಖರವಾಗಿ ದಾಳಿ ನಡೆಸಿತ್ತು. ಇದಾದ ಬಳಿಕ ಬಿಎಸ್ಎಫ್ ಪಂಜಾಬ್ನ ಅಮೃತಸರದಲ್ಲಿರುವ ಅಟ್ಟಾರಿ- ವಾಘಾ, ಫಿರೋಜ್ಪುರದ ಹುಸೇನಿವಾಲಾ ಮತ್ತು ಫಜಿಲ್ಕಾದ ಸದ್ಕಿಯಲ್ಲಿನ ಎಲ್ಲ ಜಂಟಿ ಚೆಕ್ಪೋಸ್ಟ್ಗಳಲ್ಲಿ ಸೈನಿಕರ ಕವಾಯತು ಸಮಾರಂಭಗಳನ್ನು ಸ್ಥಗಿತಗೊಳಿಸಿತ್ತು.

ಸುಮಾರು ಎರಡು ವಾರಗಳ ಅನಂತರ ಭಾರತ- ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಜಂಟಿ ಚೆಕ್ ಪೋಸ್ಟ್ನಲ್ಲಿ ಸೈನಿಕರ ಕವಾಯತು ಸಮಾರಂಭವನ್ನು ಪುನರಾರಂಭಿಸಲಾಗಿದೆ. ಆದರೆ ಈ ಧ್ವಜ ಇಳಿಸುವ ಸಮಾರಂಭದ ಸಮಯದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಪಾಕಿಸ್ತಾನ ರೇಂಜರ್ಗಳ ನಡುವೆ ಯಾವುದೇ ಹಸ್ತಲಾಘವ ನಡೆಯಲಿಲ್ಲ.

ಅಟ್ಟಾರಿ-ವಾಘಾ ಜಂಟಿ ಚೆಕ್ ಪೋಸ್ಟ್ನಲ್ಲಿ ಸೈನಿಕರ ಕವಾಯತು ಸಮಾರಂಭದಲ್ಲಿ ಪಾಲ್ಗೊಳ್ಳಲು ಸಂದರ್ಶಕರಿಗೆ ಅವಕಾಶವಿದ್ದರೂ ಅತ್ಯಂತ ಕಡಿಮೆ ಜನರು ಮಾತ್ರ ಪಾಲ್ಗೊಂಡಿದ್ದರು. ಪ್ರೇಕ್ಷಕರ ಗ್ಯಾಲರಿಗಳಲ್ಲಿ ಸರಾಸರಿ ಶೇ. 20ರಷ್ಟು ಮಂದಿ ಮಾತ್ರ ಇದ್ದರು. ಪಾಕಿಸ್ತಾನದ ಕಡೆಯಿಂದ ಚೆಕ್ ಪೋಸ್ಟ್ನಲ್ಲಿ ಕೆಲಸ ಮಾಡುವ ಕಾರ್ಮಿಕರು, ಬೆರಳೆಣಿಕೆಯ ಜನರು ಮಾತ್ರ ಗ್ಯಾಲರಿಗಳಲ್ಲಿ ಕುಳಿತಿದ್ದರು. ಯಾವುದೇ ಸಂದರ್ಶಕರು ಇರಲಿಲ್ಲ.

ಅಟ್ಟಾರಿ-ವಾಘಾ ಜಂಟಿ ಚೆಕ್ ಪೋಸ್ಟ್ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಪಾಕಿಸ್ತಾನ ರೇಂಜರ್ಗಳ ನಡುವೆ ಯಾವುದೇ ಹಸ್ತಲಾಘವ ನಡೆಯಲಿಲ್ಲ. ಶೂನ್ಯ ರೇಖೆಯ ಗೇಟ್ಗಳು ಸಹ ಮುಚ್ಚಲಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಸುಮಾರು ಎರಡು ವಾರಗಳ ಹಿಂದೆ ಸ್ಥಗಿತಗೊಂಡಿದ್ದ ಸೈನಿಕರ ಕವಾಯತು ಸಮಾರಂಭವನ್ನು ಮತ್ತೆ ಪ್ರಾರಂಭಿಸಲಾಯಿತು.

ಅಟ್ಟಾರಿಯಲ್ಲಿ 1959ರಿಂದ ಪ್ರತಿದಿನ ಬೆಳಗ್ಗೆ ಸೂರ್ಯೋದಯದ ಅನಂತರ ದ್ವಾರಗಳನ್ನು ತೆರೆಯುವುದರೊಂದಿಗೆ ಬಿಎಸ್ಎಫ್ ಗಾರ್ಡ್ ಕಮಾಂಡರ್ಗಳು ಮತ್ತು ಪಾಕಿಸ್ತಾನ ರೇಂಜರ್ಗಳು ಸಾಂಕೇತಿಕ ಹಸ್ತಲಾಘವವು ನಡೆಸುವುದು ಸಮಾರಂಭದ ಪ್ರಮುಖ ಅಂಶವಾಗಿತ್ತು. ಇಲ್ಲಿನ ಎರಡು ಸ್ಥಳಗಳಲ್ಲಿ ಸೈನಿಕರ ಕವಾಯತು ಸಮಾರಂಭವು ಅನಂತರದ ವರ್ಷಗಳಲ್ಲಿ ಪ್ರಾರಂಭವಾಗಿತ್ತು. ದೇಶಭಕ್ತಿಯ ಘೋಷಣೆಗಳನ್ನು ಕೂಗಿದ ಪ್ರೇಕ್ಷಕರ ಪ್ರೋತ್ಸಾಹದ ನಡುವೆ ಮಂಗಳವಾರ ಬಿಎಸ್ಎಫ್ ಜವಾನರು ಅದೇ ಉತ್ಸಾಹದಿಂದ ಮೆರವಣಿಗೆ ನಡೆಸಿದರು.