CM Siddaramaiah: ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ; ಸಿದ್ದರಾಮಯ್ಯ ಹೇಳಿಕೆ
ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಅಭಿಮಾನ ಬಹಳ ಮುಖ್ಯ. ಜನರ ಪ್ರೀತಿ, ಅಭಿಮಾನವನ್ನು ಗಳಿಸದೇ ಹೋದರೆ ರಾಜಕೀಯದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
Vishwavani News
December 7, 2024
ಚಾಮರಾಜನಗರ: ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ. ಜಾತಿಯಿಂದ ಯಾರೂ ಪ್ರತಿಭಾವಂತರಾಗುವುದಿಲ್ಲ. ಎಲ್ಲರಲ್ಲಿಯೂ ಪ್ರತಿಭೆಯಿದ್ದು ಅದು ಹೊರಬರಲು ಅವಕಾಶಗಳು ಸಿಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಸತ್ತೇಗಾಲದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮಮ್ಮ ಸೋಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪ್ರಬಲವಾದ ಅಸ್ತ್ರ
ಎರಡು ಕೋಟಿ ರೂ.ಗಳನ್ನು ವೆಚ್ಚ ಮಾಡಿ ನಿರ್ಮಾಣವಾಗಿರುವ ಶಾಲೆಯಲ್ಲಿ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ಮರಿಸ್ವಾಮಿ ಸ್ವಂತ ಶ್ರಮದಿಂದ ಐಪಿಎಸ್ ಆಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರಕುವಂತೆ ಮಾಡಿದ್ದಾರೆ. ಸ್ವಾತಂತ್ಯ್ರಕ್ಕೂ ಮುನ್ನ ಶೂದ್ರರು, ದಲಿತರಿಗೆ ಅವಕಾಶಗಳೇ ಇರಲಿಲ್ಲ. ಅಂಬೇಡ್ಕರ್ ಅವರು ಕಷ್ಟಪಟ್ಟು ವಿದ್ಯಾವಂತರಾದರು. ಶಿಕ್ಷಣ ಪ್ರಬಲವಾದ ಅಸ್ತ್ರ. ಶಿಕ್ಷಣದಿಂದ ವಂಚಿತರಾದವರು ಸ್ವಾಭಿಮಾನದಿಂದ, ಗೌರವದಿಂದ ಬದುಕುವುದು ಕಷ್ಟವಾಗುತ್ತದೆ. ಅದಕ್ಕಾಗಿ ಎಲ್ಲರೂ ವಿದ್ಯಾವಂತರಾಗಲೇಬೇಕು ಎಂದು ಕರೆ ನೀಡಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಬಾಣಂತಿಯರ ಸರಣಿ ಸಾವು; ಸಮಿತಿ ವರದಿ ಬಂದ ನಂತರ ಸೂಕ್ತ ಕ್ರಮ; ಸಿದ್ದರಾಮಯ್ಯ
ಶಾಲಾ ನಿರ್ಮಾಣ ಕಾರ್ಯದಲ್ಲಿ ತೊಡಗಿದವರನ್ನು ಅಭಿನಂದಿಸಿದ ಸಿಎಂ
ಮರಿಸ್ವಾಮಿಯವರು ಈ ಊರಿನಲ್ಲಿ ಹುಟ್ಟಿ ಐಪಿಎಸ್ ಅಧಿಕಾರಿಯಾಗಿ, ಪೊಲೀಸ್ ಮಹಾನಿರ್ದೇಶಕರಾಗಿ ಈ ಊರಿಗೆ ಹಾಗೂ ಈ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ಊರಿನ ಜನ ಹೆಮ್ಮೆ ಪಡುವಂತೆ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಸತ್ತೇಗಾಲ ಗ್ರಾಮದ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಈ ಶಾಲೆಯ ನಿರ್ಮಾಣಕ್ಕೆ ಆಸಕ್ತಿ ತಳೆದು ಇತರರ ಸಹಾಯವನ್ನು ಪಡೆದು ಶಾಲೆಯನ್ನು ನಿರ್ಮಾಣ ಮಾಡಿರುವುದನ್ನು ಮುಖ್ಯಮಂತ್ರಿಗಳು ಮೆಚ್ಚಿದರು. ಚಾಮರಾಜನಗರದಲ್ಲಿ ಒಟ್ಟು 1102 ಪ್ರಾಥಮಿಕ ಶಾಲೆಗಳಿದ್ದು ಈ ಪೈಕಿ 805 ಸರ್ಕಾರಿ ಶಾಲೆಗಳಿವೆ. ಸರ್ಕಾರವೇ ಎಲ್ಲವನ್ನೂ ಅಭಿವೃದ್ಧಿ ಪಡೆಸುವುದು ಕಷ್ಟವಾಗುತ್ತದೆ. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ. ನಾವು ಓದಿದ ಶಾಲೆ ಹೊಸದಾಗಿ ನಿರ್ಮಾಣವಾಗಿ ಉದ್ಘಾಟನೆಯಾಗುತ್ತಿರುವಾಗ ಈ ಕೆಲಸ ಮಾಡಿದವರಿಗೆ ಆಗುವ ಖುಷಿ, ಸಮಾಧಾನ ಬೇರೆಯಾರಿಗೂ ಆಗಲು ಸಾಧ್ಯವಿಲ್ಲ. ಮರಿಸ್ವಾಮಿ ಹಾಗೂ ಅವರ ಕುಟುಂಬದವರಲ್ಲದೇ ಶಾಲಾ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ 63 ಜನರನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಗುರಿ ಇಟ್ಟುಕೊಂಡು ಸಾಧನೆ ಮಾಡಿ
ನಾವು ವಿದ್ಯಾರ್ಥಿಗಳಾಗಿದ್ದಾಗ ಬರಿಗಾಲಿನಲ್ಲಿ ಶಾಲೆಗೆ ತೆರಳುತ್ತಿದ್ದೆವು. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಶೂ, ಸಾಕ್ಸ್ ಹಾಗೂ ಸಮವಸ್ತ್ರವನ್ನು ಹಾಕಿಕೊಳ್ಳಬೇಕೆಂದು ಶೂಭಾಗ್ಯ ಕಾರ್ಯಕ್ರಮವನ್ನು ಜಾರಿ ಮಾಡಿದ್ದೆ. ಈಗ ಹಾಲು, ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕವನ್ನು ಕೊಡುತ್ತಿದ್ದೇವೆ. ಹಾಗಾಗಿ ಮಕ್ಕಳು ಓದಬೇಕು. ವಿದ್ಯೆಯಿಂದ ವಂಚಿತರಾಗಬಾರದು ಎಂದರು.
ನಾನು ಓದದೇ ಹೋಗಿದ್ದರೆ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ರಾಚಯ್ಯನವರು ಕಾನೂನು ಓದಿದ್ದರಿಂದ ಸಚಿವರು ಹಾಗೂ ರಾಜ್ಯಪಾಲರಾದವರು. ಮರಿಸ್ವಾಮಿಯವರು ಓದಿದ್ದರಿಂದ ಐ.ಪಿ.ಎಸ್ ಅಧಿಕಾರಿಯಾದರು. ಅದಕ್ಕೆ ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಈ ಸುದ್ದಿಯನ್ನೂ ಓದಿ | DK Shivakumar: ಕೋವಿಡ್ ಅಕ್ರಮ; ಹಣ ತಿಂದವರನ್ನು ಬಿಡುವುದಿಲ್ಲ ಎಂದ ಡಿಕೆಶಿ
ಆರ್ಥಿಕ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳು
ಗೃಹಲಕ್ಷ್ಮೀ ಹಣದಿಂದ ಬಂಗಾರದಂತಹ ಬೆಳೆ ಬೆಳೆದಿರುವ ಬಗ್ಗೆ ಪತ್ರಿಕಾ ತುಣುಕನ್ನು ಸಿಎಂ ಪ್ರಸ್ತಾಪಿಸಿ, 1 ಕೋಟಿ 22 ಲಕ್ಷ ಕುಟುಂಬದ ಯಜಮಾನಿಯರಿಗೆ ತಿಂಗಳಿಗೆ 2 ಸಾವಿರ ರೂ.ಗಳನ್ನು ಕೊಡಲಾಗುತ್ತಿದೆ ಎಂದು ತಿಳಿಸಿದ ಸಿಎಂ, ಐದು ಕೆಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯ ಮೂಲಕ ಉಚಿತವಾಗಿ ಕೊಡುವ ಕೆಲಸವನ್ನು ಸಿದ್ದರಾಮಯ್ಯ ಜಾರಿಮಾಡಿದ್ದು ಎಂದರು. ಅಕ್ಕಿಗೆ 34 ರೂ.ಗಳನ್ನು ಕೊಡುತ್ತೇವೆ ಎಂದಾಗ ನರೇಂದ್ರ ಮೋದಿ ನಿರಾಕರಿಸಿದರು. ಪ್ರತಿ ವ್ಯಕ್ತಿಗೆ 34 ರೂ.ಗಳಂತೆ 170 ರೂ.ಗಳನ್ನು ನೀಡಲಾಗುತ್ತಿದೆ. 4.50 ಕೋಟಿ ಜನರಿಗೆ ಈ ಸೌಲಭ್ಯ ತಲುಪಿಸಲಾಗುತ್ತಿದೆ. 1 ಕೋಟಿ 62 ಲಕ್ಷ ಜನರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ನಾನು ಹಳ್ಳಿಯಲ್ಲಿ ಹುಟ್ಟಿ ಕಷ್ಟ ಗೊತ್ತಿರುವುದರಿಂದ ಈ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದರು.
ಮುಖ್ಯಮಂತ್ರಿ ಸ್ಥಾನ ಇನ್ನೂ ಗಟ್ಟಿಯಾಯಿತು
ಮೊದಲು ಮೈಸೂರು ಜಿಲ್ಲೆಗೆ ಸೇರಿದ್ದ ಚಾಮರಾಜನಗರವನ್ನು ದಿವಂಗತ ಬಿ. ರಾಚಯ್ಯನವರ ಕಾಲದಲ್ಲಿ ಮೈಸೂರು ಮತ್ತು ಚಾಮರಾಜನಗರ ಎಂಬ ಜಿಲ್ಲೆಗಳಾದವು. ನಾನು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೊಸ ಜಿಲ್ಲೆಯನ್ನು ಘೋಷಣೆ ಮಾಡಿದೆವು. ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಕೆಲವು ಶಾಸಕರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿ ಅವರು ಜಿಲ್ಲೆಗೆ ಭೇಟಿ ನೀಡದಂತೆ ಮಾಡಿದ್ದರು. ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳುತ್ತಾರೆ ಎಂಬ ಕಳಂಕ ಜಿಲ್ಲೆಯ ಮೇಲೆ ಹೊರಿಸಲಾಗಿದೆ. ನಾನು ರಾಚಯ್ಯನವರು ಇಲ್ಲಿಗೆ ಬಂದು ಹೊಸ ಜಿಲ್ಲೆಯನ್ನು ಉದ್ಘಾಟನೆ ಮಾಡಿದೆವು. ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ರಾಚಯ್ಯ ಹಾಗೂ ನಾನು ಮೌಢ್ಯವನ್ನು ನಂಬುತ್ತಿರಲಿಲ್ಲವಾದ್ದರಿಂದ ಇಲ್ಲಿಗೆ ಬಂದೇ ಘೋಷಣೆಯನ್ನು ಮಾಡಿದೆವು.
ಜೆ.ಎಚ್. ಪಟೇಲರು ಹಾಗೂ ವಾಟಾಳ್ ನಾಗರಾಜ್ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ತೆರಳಿ ಘೋಷಣೆ ಮಾಡಿದರು. ಅದಾದ ನಂತರ ಇಪ್ಪತ್ತು ಸಾರಿಯಾದರೂ ಚಾಮರಾಜನರಕ್ಕೆ ನಾನು ಆಗಮಿಸಿದ್ದೇನೆ. ಮುಖ್ಯಮಂತ್ರಿ ಸ್ಥಾನ ಹೋಗುವ ಬದಲು ಅದು ಇನ್ನೂ ಗಟ್ಟಿಯಾಯಿತು ಎಂದರು.
ಜನರ ಪ್ರೀತಿ, ಅಭಿಮಾನ ಗಳಿಸದೇ ಹೋದರೆ ರಾಜಕೀಯದಲ್ಲಿ ಉಳಿಯಲು ಸಾಧ್ಯವಿಲ್ಲ
ನೀವು ಮೂರನೇ ಬಾರಿ ಮುಖ್ಯಮಂತ್ರಿಯಾಗುತ್ತೀರಿ ಎಂದು ಅಭಿಮಾನಿಯೊಬ್ಬರು ಕೂಗಿದಾಗ ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಅಭಿಮಾನ ಬಹಳ ಮುಖ್ಯ. ಜನರ ಪ್ರೀತಿ, ಅಭಿಮಾನವನ್ನು ಗಳಿಸದೇ ಹೋದರೆ ರಾಜಕೀಯದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಭಾಗದಲ್ಲಿ ರಾಚಯ್ಯನವರು ಬಹಳ ಎತ್ತರದ ರಾಜಕಾರಣಿ. ನಾನು ರಾಜಕೀಯವಾಗಿ ಬೆಳೆಯಲು ಅವರ ಸಹಾಯವೂ ಇದೆ ಎನ್ನುವುದನ್ನು ಮೆರೆಯಲು ಸಾಧ್ಯವಿಲ್ಲ ಎಂದು ಅವರು ಸ್ಮರಿಸಿದರು.
ಈ ಸುದ್ದಿಯನ್ನೂ ಓದಿ | Lakshmi Hebbalkar: ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಜೀವನಾಧಾರ; ಲಕ್ಷ್ಮೀ ಹೆಬ್ಬಾಳಕರ್
ಈ ವೇಳೆ ಚಾಮರಾಜನಗರ ಜಿಲ್ಲಾ ಉಸ್ತುವರಿ, ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಶಾಸಕ ಎಂ.ಆರ್. ಮಂಜುನಾಥ್, ಮಾಜಿ ಸಚಿವರು, ಎಂಎಸ್‌ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಶಾಸಕ ಕೃಷ್ಣಮೂರ್ತಿ, ಗಣೇಸ್ ಪ್ರಸಾದ್, ಮಾಜಿ ಶಾಸಕರಾದ ನರೇಂದ್ರ, ನಂಜುಂಡಸ್ವಾಮಿ, ಮಾಜಿ ಸಚಿವ ಲಿಂಗಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಶಾಲಾ ಕಟ್ಟಡದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳು ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್. ಮರಿಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.