94 ದಿನಗಳ ರೈತರ ಧರಣಿ ಸತ್ಯಾಗ್ರಹ ವಾಪಸ್
94 ದಿನಗಳ ರೈತರ ಧರಣಿ ಸತ್ಯಾಗ್ರಹ ವಾಪಸ್
Vishwavani News
June 14, 2022
ಚಿತ್ರದುರ್ಗ: ನೀರಿಗಾಗಿ ಆಗ್ರಹಿಸಿ, ಹಿರಿಯೂರು ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಸುತ್ತಿದ್ದ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ರೈತರ ಧರಣಿ ಸತ್ಯಾಗ್ರಹಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ.
ಭದ್ರಾ ಜಲಾಶಯದಿಂದ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 10 ಟಿಎಂಸಿ ನೀರು ಮೀಸಲು, ಧರ್ಮಪುರ ಹಾಗೂ ಜವನಗೊಂಡನಹಳ್ಳಿ ಹೋಬಳಿಯ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು ಜೊತೆಗೆ ಹಿರಿಯೂರು ಸಕ್ಕರೆ ಕಾರ್ಖಾನೆ ಪುನಶ್ಚೇತ ನಕ್ಕೆ ಆಗ್ರಹಿಸಿ ಹಿರಿಯೂರು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯ ಕರ್ತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಬರೋಬ್ಬರಿ 94 ದಿನಗಳ ನಂತರ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್ ಮಣ್ಣೀಕೆರಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮನವಿ ಮಾಡಿದ ನಂತರ ರೈತರು ಧರಣಿ ವಾಪಸ್ ಪಡೆದಿದ್ದಾರೆ.
94 ದಿನಗಳ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ನಡೆಸಲು ಸಹಕರಿಸಿದ ರೈತ ಸಂಘದ ಕಾರ್ಯಕರ್ತರಿಗೂ, ಪೋಲಿಸ್ ಇಲಾಖೆ ಅಧಿಕಾರಿಗಳಿಗೂ ಮತ್ತು ಹೋರಾಟಕ್ಕೆ ಸಹ ಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಪ್ಪೇಸ್ವಾಮಿ ಅರ್ಪಿಸಿದರು.
ಧರಣಿ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್ ಮಣ್ಣೀಕೆರಿ ಅವರು ಕಳೆದ ಶುಕ್ರವಾರ ನಾವು ರೈತರ ಧರಣಿಯ ಬೇಡಿಕೆಗಳ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಲಾಯಿತು. ಪ್ರಸ್ತಾವನೆ ಸಲ್ಲಿಕೆ ಸಿದ್ದಗೊಂಡಿದೆ. ಅದನ್ನು ತಿದ್ದುಪಡಿ ಮಾಡಿ ಸರ್ಕಾರಕ್ಕೆ ನಿಮ್ಮ ಮನವಿಯನ್ನು ಸಲ್ಲಿಸಲಾಗುವುದು. ರೈತರ ಜೊತೆಗೆ ಸಭೆಯನ್ನು ಕರೆಯಲು ಪತ್ರವನ್ನು ಸರ್ಕಾರಕ್ಕೆ ಕಳಿಸಲಾಗುತ್ತದೆ. ಈಗ ಮಳೆಗಾಲ ಆರಂಭವಾಗಿದ್ದು, ರೈತರಿಗೆ ಕೃಷಿ ಕೆಲಸಗಳಿರುತ್ತವೆ. ಆಗಾಗಿ ಧರಣಿ ಯನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.
ಧರಣಿ ಕುರಿತು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ಜೂ.4 ರಂದು ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ ಅವರು ನಮ್ಮ ತಾಲ್ಲೂಕಿಗೆ ಬಂದಾಗ ವಾಣಿ ವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರು ಹಂಚಿಕೆ ಮಾಡಲಾ ಗುವುದು ಎಂದು ಭರವಸೆ ನೀಡಿ ಹೋಗಿದ್ದಾರೆ.
ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಹ ಈ ವಿಚಾರವಾಗಿ ಸರ್ಕಾರದ ಜೊತೆ ಸಭೆ ನಡೆಸಿ ಬೇಗ ಇದನ್ನು ಇತ್ಯರ್ಥ ಮಾಡುವ ಜವಾಬ್ದಾರಿ ನಮ್ಮದು ಎಂದಾಗ ಜಿಲ್ಲಾ ಕಮಿಟಿಯವರು ಒಪ್ಪಿ ಧರಣಿಯನ್ನು ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದರು.
ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ ಬರಬೇಕಾಗಿರುವ ನೀರಿನ ಕೊರತೆಯನ್ನು ನೀಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.
ಕಳೆದ ಜೂನ್ 4 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹಿರಿಯೂರು ತಾಲ್ಲೂಕಿನ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಾಗ ವಿವಿ ಸಾಗರಕ್ಕೆ 10 ಟಿಎಂಸಿ ನೀರು ಮೀಸಲಿಡಬೇಕು ಎಂದು ಮನವಿ ಮಾಡಿದ್ದರು. ರೈತರ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.