Mangaluru News: ಮಂಗಳೂರಲ್ಲೊಂದು ಅಪರೂಪದ ಹೆರಿಗೆ; 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
Mangaluru News: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ತೆಲಂಗಾನ ಮೂಲದ ಮಹಿಳೆಯೊಬ್ಬರು 4 ಮಕ್ಕಳಿಗೆ ಜನ್ಮ ನೀಡಿದ್ದಾರೆ.
Ramesh B
January 6, 2025
ಮಂಗಳೂರು: ಏಕಕಾಲಕ್ಕೆ 2, 3 ಮಕ್ಕಳು ಜನಿಸಿರುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬರು ಮಹಿಳೆ 4 ಮಕ್ಕಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಇಂತಹ ಅಪರೂಪದ ಘಟನೆ ನಡೆದಿದೆ. ಸದ್ಯ ಅಮ್ಮ ಮತ್ತು ನಾಲ್ವರು ಮಕ್ಕಳು ಆರೋಗ್ಯದಿಂದಿದ್ದಾರೆ (Mangaluru News).
ಮಂಗಳೂರು ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಈ ವಿಶೇಷ ಹೆರಿಗೆ ನಡೆದಿದೆ. ತೆಲಂಗಾಣ ಮೂಲದ, ಸದ್ಯ ಮಂಗಳೂರಿನಲ್ಲಿ ಪತಿ ತೇಜ ಜತೆ ನೆಲೆಸಿರುವ ಬನೊತ್ ದುರ್ಗಾ 4 ಮಕ್ಕಳಿಗೆ ಜನ್ಮ ನೀಡಿದವರು.
ನವಜಾತ ಶಿಶುಗಳಲ್ಲಿ 2 ಹೆಣ್ಣು ಮತ್ತು 2 ಗಂಡು ಆಗಿದ್ದು, ಮಕ್ಕಳು ಕ್ರಮವಾಗಿ 1.1 ಕೆ.ಜಿ, 1.2 ಕೆ.ಜಿ, 800 ಗ್ರಾಂ ಹಾಗೂ 900 ಗ್ರಾಂ ತೂಕ ಹೊಂದಿವೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ಇದು 30 ವಾರಗಳ ಹೆರಿಗೆಯಾಗಿದ್ದು, ಪ್ರಸವ ಪೂರ್ವ ಜನನವಾದ್ದರಿಂದ ಸದ್ಯ ಮಕ್ಕಳಿಗೆ ಎನ್ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ವೈದ್ಯರು ಹೇಳಿದ್ದೇನು?
''4 ಮಕ್ಕಳ ಜನನ ಬಹಳ ಅಪರೂಪವಾಗಿದ್ದು, ಇದು 7 ಲಕ್ಷ ಗರ್ಭಧಾರಣೆಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುತ್ತವೆ'' ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸ್ತ್ರೀರೋಗ ತಜ್ಞೆ, ಡಾ. ಜೋಯ್ಲೀನ್ ಡಿಅಲ್ಮೇಡಾ ಗರ್ಭಿಣಿಯ ಪ್ರಸವಪೂರ್ವ ಆರೈಕೆ ನಡೆಸಿದರು. ಹೆರಿಗೆ ಸಂದರ್ಭ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಿಭಾಗದ ವೈದ್ಯಕೀಯ ತಂಡ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದೆ. ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಅಪರೂಪದ ಹೆರಿಗೆ ಪ್ರಕರಣ ಎನಿಸಿಕೊಂಡಿದೆ.
ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕಲು ಯೋಜನೆ ಜಾರಿ; ದಿನೇಶ್ ಗುಂಡೂರಾವ್
ಬೆಳಗಾವಿ: ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆಗಳನ್ನು (Cesarean Delivery) ನಿಯಂತ್ರಿಸುವ ನಿಟ್ಟಿನಲ್ಲಿ ಶೀಘ್ರ ನೂತನ ಕಾರ್ಯಕ್ರಮ ಜಾರಿಗೊಳಿಸುತ್ತಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಇತ್ತೀಚೆಗೆ ತಿಳಿಸಿದ್ದರು. ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನ ಪರಿಷತ್ ಕಲಾಪದಲ್ಲಿ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರ ಪ್ರಶ್ನೆಗೆ ಉತ್ತರಿಸುವ ವೇಳೆ ಸಚಿವರು ಈ ಮಾಹಿತಿ ನೀಡಿದ್ದರು.
ʼʼರಾಜ್ಯದಲ್ಲಿ ಪ್ರತಿ ವರ್ಷ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದೆ. 2021-2022 ರಲ್ಲಿ 35% ಇದ್ದ ಸಿಸೇರಿಯನ್ ಪ್ರಮಾಣ, 2022-23 ಕ್ಕೆ 38%ಕ್ಕೆ ಏರಿಕೆಯಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ 46% ಇದೆ. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 61 ರಷ್ಟು ಸಿಸೇರಿಯನ್‌ಗಳನ್ನ ಮಾಡಲಾಗುತ್ತಿದೆ. ಸಿಸೇರಿಯನ್‌ಗಳಿಂದ ಹೆಚ್ಚು ಆದಾಯ ಬರುತ್ತದೆ ಮತ್ತು ಸುಲಭವಾಗಿ ಸಿಸೇರಿಯನ್ ಮಾಡಬಹುದು ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಸಿಸೇರಿಯನ್ ಹೆರಿಗೆಗಳನ್ನೇ ಹೆಚ್ಚು ಮಾಡುತ್ತಿದ್ದಾರೆ. ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರನ್ನು ಸಹಜ ಹೆರಿಗೆ ಮಾಡಿಸಿಕೊಳ್ಳಲು ಮಾನಸಿಕವಾಗಿ ಸಜ್ಜುಗೊಳಿಸಿಬೇಕಿದೆ. ಇದಕ್ಕಾಗಿ ನೂತನ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆʼʼ ಎಂದು ವಿವರಿಸಿದ್ದರು.
ಈ ಸುದ್ದಿಯನ್ನೂ ಓದಿ: Bengaluru News: ಬೆಂಗಳೂರಿನ ವಿದ್ಯಾರ್ಥಿಗಳಿಗೆ ‘ನಾಸಾ’ ಆಶೋತ್ತರಗಳ ಪರಿಚಯ