Jagdeep Dhankhar: ನಾಳೆ ಧರ್ಮಸ್ಥಳಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆಗಮನ – ‘ಶ್ರೀ ಸಾನ್ನಿಧ್ಯ ಸಂಕೀರ್ಣ’ ಉದ್ಘಾಟನೆ
Jagdeep Dhankhar: ಉಪರಾಷ್ಟ್ರಪತಿಜಗದೀಪ್ ಧನಕರ್ ಅವರು ನಾಳೆ(ಜ.07) ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ
Sushmitha Jain
January 6, 2025
ಬೆಳ್ತಂಗಡಿ: ಉಪರಾಷ್ಟ್ರಪತಿ(Vice-President) ಜಗದೀಪ್ ಧನಕರ್(Jagdeep Dhankhar) ಅವರು ನಾಳೆ(ಜ.07) ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ(Dharmasthala) ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1.35ಕ್ಕೆ ಹೆಲಿಕಾಫ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆದು, ಮಧ್ಯಾಹ್ನ 2:00ಕ್ಕೆ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ನೂತನವಾಗಿ ನಿರ್ಮಿಸಲಾಗಿರುವ ಸುಸಜ್ಜಿತ ಸೌಕರ್ಯಗಳೊಂದಿಗೆ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಗಳನ್ನೊಳಗೊಂಡ 'ಶ್ರೀ ಸಾನ್ನಿಧ್ಯ ಸಂಕೀರ್ಣ'ವನ್ನು ಉದ್ಘಾಟನೆ ಮಾಡಲಿದ್ದಾರೆ.
ಬಳಿಕ ಇಲ್ಲಿನ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಸಕ್ತ ಸಾಲಿನ ಜ್ಞಾನದೀಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ, ಡಾ.ಡಿ.ವೀರೇಂದ್ರ ಹೆಗ್ಗಡೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶ್ರೀಮತಿ ಸುದೇಶ್ ಧನ್‌ಕರ್, ಜ್ಞಾನ ವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ವಿ ಹೆಗ್ಗಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ ಮತ್ತಿತರರು ಭಾಗವಹಿಸಲಿದ್ದಾರೆ.
ನೂತನ ಸಂಕೀರ್ಣದ ವಿಶೇಷತೆ ಏನು…?ಸಕಲ ಸೌಲಭ್ಯಗಳನ್ನೊಳಗೊಂಡ ಸರತಿ ಸಾಲಿನ ಸಮುಚ್ಚಯ 2,75,177 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದ್ದು, ಎರಡು ಅಂತಸ್ತು ಹೊಂದಿರುವ “ಶ್ರೀ ಸಾನ್ನಿಧ್ಯ” ಸರತಿಸಾಲಿನ ಸಂಕೀರ್ಣದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಭಕ್ತಾದಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಹದಿನಾರು ವಿಶಾಲ ಸಭಾಭವನಗಳಿದ್ದು, ಸರತಿಸಾಲಿನಲ್ಲಿ ಬಂದ ಭಕ್ತರು ಇಲ್ಲಿ ವಿಶ್ರಾಂತಿ ಪಡೆಯಬಹುದು. ಪ್ರತಿ ಸಭಾಭವನದಲ್ಲಿ ೮೦೦ ಮಂದಿ ಇರಲು ಅವಕಾಶವಿದೆ. ಮಕ್ಕಳ ಆರೈಕೆ ಕೊಠಡಿ, ಶೌಚಾಲಯ, ಕ್ಯಾಂಟಿನ್ ಸೌಲಭ್ಯವಿದೆ. ಅಲ್ಲಲ್ಲಿ ಸೂಚನಾಫಲಕ ಹಾಗೂ ಸಿ.ಸಿ.ಟಿ.ವಿ. ಅಳವಡಿಸಲಾಗಿದೆ. ಪ್ರವೇಶದ್ವಾರದ ಎದುರು ಧರ್ಮಸ್ಥಳದ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಆಕರ್ಷಕ ಕಲಾಕೃತಿಗಳು ಕಣ್ಮನ ಸೆಳೆಯುತ್ತದೆ.
ಇನ್ನು ಉಪರಾಷ್ಟ್ರಪತಿಗಳ ಭೇಟಿ ನೀಡುವ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸ ಆಗುವ ಸಂಭವವಿದ್ದು, ಭಕ್ತಾದಿಗಳು ಸಹಕರಿಸಬೇಕಾಗಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಅರೆಸ್ಟ್