Cylinder blast: ಸಿಲಿಂಡರ್ ಸ್ಫೋಟ- ಸಾವಿನ ಸಂಖ್ಯೆ 5ಕ್ಕೆ ಏರಿಕೆ; ಚಿಕಿತ್ಸೆ ಫಲಿಸದೇ ಮತ್ತೊರ್ವ ಅಯ್ಯಪ್ಪ ಮಾಲಾಧಾರಿ ಸಾವು
Cylinder blast: ಎಲ್‌ಪಿಜಿ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ್ದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊರ್ವ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿದ್ದಾರೆ.
Rakshita Karkera
December 29, 2024
ಹುಬ್ಬಳ್ಳಿ: ಎಲ್‌ಪಿಜಿ ಸಿಲಿಂಡರ್ (LPG cylinder) ಸೋರಿಕೆಯಾಗಿ ಸಂಭವಿಸಿದ್ದ ಸ್ಫೋಟದಲ್ಲಿ (Cylinder blast) ಗಂಭೀರವಾಗಿ ಗಾಯಗೊಂಡಿದ್ದ ಮತ್ತೊರ್ವ ಅಯ್ಯಪ್ಪ ಮಾಲಾಧಾರಿ (Ayyappa swamy) ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಂಕರ ಚವ್ಹಾಣ ಉರ್ಫ್ ಊರ್ಬಿ(29) ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಆ ಮೂಲಕ ಈ ಭೀಕರ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ.
ಧಾರವಾಡ ತಾಲೂಕಿನ ಸತ್ತೂರ ಗ್ರಾಮದ ಶಂಕರ ಚವ್ಹಾಣ ಉರ್ಫ್ ಊರ್ಬಿ ಎಂಬ 29 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಕಳೆದ 13 ವರ್ಷದಿಂದ ಕಿಮ್ಸನಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಂಕರ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಯಾಗಿದ್ದರು. ಘಟನೆಯಲ್ಲಿ ಈಗಾಗಲೇ ನಿಜಲಿಂಗಪ್ಪ ಬೇಪುರಿ ( 58 ವರ್ಷ), ಸಂಜಯ್ ಸವದತ್ತಿ ( 20 ವರ್ಷ), ರಾಜು ಮೂಗೇರಿ (21 ವರ್ಷ), ಲಿಂಗರಾಜು ಬೀರನೂರ (24 ವರ್ಷ) ಸಾವಿಗೀಡಾಗಿದ್ದರು.
ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ್ ವಾಗ್ಮೋಡೆ (22 ವರ್ಷ), ಪ್ರಕಾಶ್ ಬಾರಕೇರ್ ( 42 ವರ್ಷ) ಹಾಗೂ ತೇಜಸ್ವರ್ ಸಾತರೆ (26), ವಿನಾಯಕ್ ಬಾರಕೇರ (12 ವರ್ಷ) ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಹುಬ್ಬಳ್ಳಿ ನಗರದ ಸಾಯಿನಗರದ ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, 10 ಅಯ್ಯಪ್ಪ ಮಾಲಾಧಾರಿಗಳು ತೀವ್ರ ಗಾಯಗೊಂಡಿದ್ದರು. ಅಯ್ಯಪ್ಪ ಮಾಲೆ ಧರಿಸಿ ವ್ರತ ಆಚರಿಸುತ್ತಿದ್ದ ಇವರು, ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್‌ಗೆ ತಾಗಿ ಉರುಳಿದೆ. ಪರಿಣಾಮ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿ, ದೇವಸ್ಥಾನದಲ್ಲಿ ಹಚ್ಚಿದ್ದ ದೀಪಕ್ಕೆ ತಗುಲಿದೆ. ಆಗ ಒಮ್ಮೆಲೆ ದೇವಸ್ಥಾನದ ಪ್ರಾಂಗಣದಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಎಸಿಪಿ ಶಿವಪ್ರಕಾಶ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಚನ್ನು ಹೊಸಮನಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಘಟನೆ ಮಾಹಿತಿ ಪಡೆದಿದ್ದಾರೆ.
ಮಧ್ಯರಾತ್ರಿ ಬೆಂಕಿ ಬಿದ್ದಿರುವುದು ಹಾಗೂ ಅಯ್ಯಪ್ಪ ಮಾಲಾಧಾರಿಗಳು ಕಿರುಚಾಡುತ್ತಿದ್ದುದನ್ನು ಗಮನಿಸಿದ ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿದರೆ, ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಲು ನೆರವಾದರು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದವರು, ಪರಿಚಯಸ್ಥರು ಆಸ್ಪತ್ರೆ ಬಳಿ ಧಾವಿಸಿದ್ದರು.
ಈ ಸುದ್ದಿಯನ್ನೂ ಓದಿ: ಆಸ್ಪತ್ರೆಯಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆ