Gruha Lakshmi Scheme: ಗದಗದ ಅತ್ತೆ-ಸೊಸೆ ಕಾರ್ಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶ್ಲಾಘನೆ
Gruha Lakshmi Scheme: ಗದಗ ಜಿಲ್ಲೆಯ ಗಜೇಂದ್ರಗಡದ ಅತ್ತೆ, ಸೊಸೆ ಕಾರ್ಯ ನೋಡಿ ತುಂಬಾ ಖುಷಿ ಆಯಿತು. ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೊ, ಸೊಸೆಗೊ ಎಂದು ಹೇಳುವ ಮೂಲಕ ವಿರೋಧ ಪಕ್ಷದವರು ಜಗಳ ಹಚ್ಚುವ ಕೆಲಸ ಮಾಡುತ್ತಿದ್ದರು. ಈಗ ಅತ್ತೆ, ಸೊಸೆ ಇಬ್ಬರೂ ಕೂಡಿಟ್ಟ ಹಣದಿಂದ ಬೊರವೆಲ್ ಕೊರೆಸಿ, ಮಾದರಿಯಾಗಿದ್ದಾರೆ ಎಂದರು.
Rakshita Karkera
December 15, 2024
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ(Gruha Lakshmi Scheme) ಹಣ ನೀಡುವ ಮೂಲಕ ಸರ್ಕಾರ ಅತ್ತೆ-ಸೊಸೆ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದ ವಿಪಕ್ಷಗಳಿಗೆ ಗದಗ(Gadag News)ದ ಅತ್ತೆ-ಸೊಸೆ ಗೃಹಲಕ್ಷ್ಮೀ ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿ ಉತ್ತರ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಭಾನುವಾರ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಗದಗದ ಅತ್ತೆ, ಸೊಸೆ ಎಲ್ಲರಿಗೂ ಮಾದರಿ ಆಗಿದ್ದಾರೆ ಎಂದರು.
ಗದಗ ಜಿಲ್ಲೆಯ ಗಜೇಂದ್ರಗಡದ ಅತ್ತೆ, ಸೊಸೆ ಕಾರ್ಯ ನೋಡಿ ತುಂಬಾ ಖುಷಿ ಆಯಿತು. ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೊ, ಸೊಸೆಗೊ ಎಂದು ಹೇಳುವ ಮೂಲಕ ವಿರೋಧ ಪಕ್ಷದವರು ಜಗಳ ಹಚ್ಚುವ ಕೆಲಸ ಮಾಡುತ್ತಿದ್ದರು. ಈಗ ಅತ್ತೆ, ಸೊಸೆ ಇಬ್ಬರೂ ಕೂಡಿಟ್ಟ ಹಣದಿಂದ ಬೊರವೆಲ್ ಕೊರೆಸಿ, ಮಾದರಿಯಾಗಿದ್ದಾರೆ ಎಂದರು.
ಬೋರ್ ವೆಲ್ ನಿಂದ ನೀರು ಹರಿಸಿ, ವ್ಯವಸಾಯ ಮಾಡುತ್ತಿದ್ದಾರೆ. ಗದಗದ ಅತ್ತೆ, ಸೊಸೆ ನಿಜವಾಗಿಯೂ ಆದರ್ಶವಾದಿಗಳು ಆಗಿದ್ದಾರೆ. ಮಹಿಳೆಯರ ಆರ್ಥಿಕ ಸಬಲೀಕರಣ ಮಾಡುವ ಸಲುವಾಗಿ ಎರಡು ಸಾವಿರ ಹಣ ಕೊಡಲಾಗುತ್ತಿದೆ. ಈ ರೀತಿಯ ಹಣವನ್ನ ಕೂಡಿಟ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಐತಿಹಾಸಿಕ ಗಾಂಧಿ ಭಾರತ ಕಾರ್ಯಕ್ರಮ
ಇದೇ 26,27 ರಂದು ಬೆಳಗಾವಿಯಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಮಹಾತ್ಮಗಾಂಧಿ ಅವರ ಸಾರಥ್ಯದಲ್ಲಿ ನಡೆದ ಏಕೈಕ ಅಧಿವೇಶನ ಅದಾಗಿತ್ತು. ಆ ಅಧಿವೇಶನ 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಎರಡು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಈ ಸುದ್ದಿಯನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮಿ ಹಣದಿಂದ ಬೋರ್‌ವೆಲ್ ಕೊರೆಸಿದ ಅತ್ತೆ-ಸೊಸೆ; ಡಿಸಿಎಂ ಡಿಕೆಶಿ ಮೆಚ್ಚುಗೆ
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಮಾಬುಬೀ ಮತ್ತು ಸೊಸೆ ರೋಷನ್ ಬೇಗಂ ಅವರು ಪ್ರತಿ ತಿಂಗಳು ತಮಗೆ ಬರುತ್ತಿದ್ದ ಗೃಹ ಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು, ಸುಮಾರು 44 ಸಾವಿರ ರೂ.ಗಳನ್ನು ಬಳಸಿಕೊಂಡು ಬೋರ್‌ವೆಲ್ ಕೊರೆಸಿದ್ದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣದಿಂದ ಬೋರ್‌ವೆಲ್ ಕೊರೆಸಿದ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಅತ್ತೆ-ಸೊಸೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ಗ್ಯಾರಂಟಿಗಳಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುವ ಸಾರ್ಥಕತೆ ಇದೆ ಎಂದು ತಿಳಿಸಿದ್ದಾರೆ.