Caste Census: ಇಂದು ಮಹತ್ವದ ಸಂಪುಟ ಸಭೆ, ವಿರೋಧದ ನಡುವೆಯೂ ಜಾತಿ ಗಣತಿ ವರದಿ ಮಂಡನೆ
2015 ರ ಸಾಮಾಜಿಕ-ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ವರದಿ (Caste Census report) ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ. 2015ರ ವರದಿ ಇದಾಗಿದ್ದು, ಬಹಳ ಹಿಂದಿನಿಂದಲೂ ಬಾಕಿ ಇದೆ. ವರದಿ ಕುರಿತು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಿಂದಲೂ ವಿರೋಧ ಇದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಎಚ್. ಕಾಂತರಾಜ್ ಹಿಂದುಳಿದ ವರ್ಗಗಳ ಆಯೋಗದ (H. Kantharaj Commission) ಅಧ್ಯಕ್ಷರಾಗಿದ್ದಾಗ ನಡೆಸಲಾದ 2015 ರ ಸಾಮಾಜಿಕ-ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ವರದಿ (Caste Census report) ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ಸಂಪುಟದ ತೀರ್ಮಾನ ಕುರಿತು ತೀವ್ರ ಕುತೂಹಲ ಮೂಡಿಸಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಬರೋಬ್ಬರಿ 169 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ವರದಿ ಕುರಿತು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಿಂದ ವಿರೋಧ ವ್ಯಕ್ತವಾಗುತ್ತಿದ್ದು, ಸ್ವಪಕ್ಷೀಯ ನಾಯಕರಿಂದಲೂ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವ ನಡೆ ಅನುಸರಿಸಲಿದೆ ಎಂಬುದರ ಕುರಿತು ಕುತೂಹಲ ಮೂಡಿದೆ. ದುರ್ಬಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವುದು ಅಧ್ಯಯನದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಆ ನ್ಯಾಯದ ಹಾದಿಯು ಸವಾಲುಗಳಿಂದ ಕೂಡಿದೆ ಎಂದು ಇತರರು ಹೇಳುತ್ತಿದ್ದಾರೆ.
2015ರ ವರದಿ ಇದಾಗಿದ್ದು, ಬಹಳ ಹಿಂದಿನಿಂದಲೂ ಬಾಕಿ ಇದೆ. ಸರ್ಕಾರ ವಿಳಂಬ ಮಾಡುವುದನ್ನು ನಿಲ್ಲಿಸಿ ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಅವರು ಹೇಳಿದ್ದಾರೆ. ಏತನ್ಮಧ್ಯೆ, ಸಚಿವ ಸಂಪುಟದಲ್ಲಿ ವರದಿ ಮಂಡನೆ ಮಾಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕಾಂತರಾಜ್ ಅವರು ಹೇಳಿದ್ದಾರೆ.
2015ರ ಸಮೀಕ್ಷೆಯನ್ನು ಆಧರಿಸಿ 2024ರಲ್ಲಿ ಅಂತಿಮ ವರದಿಯನ್ನು ಸಲ್ಲಿಸಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಎಲ್ಲಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದೀಗ ನಿರ್ಣಯ ಕುರಿತು ಕಾಯುತ್ತಿದ್ದೇನೆ. ವರದಿಯನ್ನು ಮಂಡಿಸಿದ್ದೇ ಆದರೆ, ಸಂತೋಷವಾಗುತ್ತದೆ. ಚೆಂಡು ಸರ್ಕಾರದ ಅಂಗಳದಲ್ಲಿದೆ ಎಂದು ಹೇಳಿದ್ದಾರೆ.
ವೀರಶೈವ ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ಅವರು ಮಾತನಾಡಿ, ನಾವು ಕಾಂತರಾಜ್ ವರದಿಯನ್ನು ವಿರೋಧಿಸುತ್ತೇವೆ. ಇದು ಅವೈಜ್ಞಾನಿಕ. ಸರ್ಕಾರದ ವೀರಶೈವ-ಲಿಂಗಾಯತ ಸಚಿವರನ್ನು ಭೇಟಿ ಮಾಡಿ, ವರದಿಯಿಂದ ಎದುರಾಗುವ ಅಪಾಯಗಳ ಕುರಿತು ವಿವರಿಸಿದ್ದೇವೆ. ನಮ್ಮ ಸಮುದಾಯದ ಹಿತಾಸಕ್ತಿಗಳಿಗೆ ಹಾನಿಯಾದರೆ, ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
2016 ರಲ್ಲಿ ವರದಿಯ ವಿರುದ್ಧ ಪ್ರತಿಭಟನೆಗಳನ್ನು ಮುನ್ನಡೆಸಿದ್ದ ಒಕ್ಕಲಿಗ ಕ್ರಿಯಾ ಸಮಿತಿ ನಾಯಕ ಕೆ.ಜಿ. ಕುಮಾರ್ ಅವರು ಮಾತನಾಡಿ, ಈ ವರದಿಯು ಅವೈಜ್ಞಾನಿಕವಾಗಿದೆ. ಇದನ್ನು ಅಂಗೀಕರಿಸಿದರೆ, ನಾವು ಪ್ರತಿಭಟನೆಗಿಳಿಯಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಹಗರಣ: 1,808 ಪುಟಗಳ 2ನೇ ಮಧ್ಯಂತರ ವರದಿ ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಿದ ನಿವೃತ್ತ ನ್ಯಾ. ಜಾನ್ ಮೈಕೇಲ್ ಡಿ ಕುನ್ಹಾ