Chincholi Hospital: ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ಎಂಆರ್‌ಪಿ ಮುದ್ರಿತ ಸಿರಪ್ ವಿತರಣೆ; ಕಾಳಸಂತೆಯಲ್ಲಿ ಔಷಧ ಮಾರಾಟ?
Chincholi Hospital: ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ಎಂಆರ್‌ಪಿ 110 ರೂ. ಎಂದು ಮುದ್ರಿಸಿರುವ ಸಿರಪ್ ಅನ್ನು ರೋಗಿಯೊಬ್ಬರಿಗೆ ವಿತರಣೆ ಮಾಡಿದ್ದು, ಇದನ್ನು ಕಂಡು ರೋಗಿ ಅಚ್ಚರಿಗೊಂಡಿದ್ದಾರೆ.
Prabhakara R
December 5, 2024
ಚಿಂಚೋಳಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳು ಇಲ್ಲ ಎಂದು ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಖರೀದಿಸಿ ತರಲು ವೈದ್ಯರು ಶಿಫಾರಸು ಮಾಡುತ್ತಿರುವುದು ಹಲವೆಡೆ ಕಂಡುಬರುತ್ತಿದೆ. ಈ ನಡುವೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ (Chincholi Hospital) ಸರ್ಕಾರಿ ಆಸ್ಪತ್ರೆಯಲ್ಲಿ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಮುದ್ರಿತ ಔಷಧಗಳನ್ನು ವಿತರಿಸುತ್ತಿರುವುದು ಕಂಡುಬಂದಿದ್ದು, ಕೆಲ ಔಷಧಗಳ ಮೇಲೆ ಸರ್ಕಾರದ ಮುದ್ರೆ ಇಲ್ಲದ ಕಾರಣ ಕಾಳಸಂತೆಯಲ್ಲಿ ಔಷಧಗಳು ಮಾರಾಟವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ಎಂಆರ್‌ಪಿ 110 ರೂ. ಎಂದು ಮುದ್ರಿಸಿರುವ ಸಿರಪ್ ಅನ್ನು ರೋಗಿಯೊಬ್ಬರಿಗೆ ವಿತರಣೆ ಮಾಡಿದ್ದು, ಇದನ್ನು ಕಂಡು ರೋಗಿ ಅಚ್ಚರಿಗೊಂಡಿದ್ದಾರೆ. ರೋಗಿಗೆ ಉಚಿತವಾಗಿಯೇ Amrox-LS 100 ml ಸಿರಪ್ ನೀಡಲಾಗಿದೆ, ಯಾವುದೇ ಹಣ ಪಡೆದಿಲ್ಲ. ಆದರೆ, ಸರ್ಕಾರಿ ಮುದ್ರೆ ಇರದ ಕಾರಣ ಔಷಧಗಳನ್ನು ಆಸ್ಪತ್ರೆಯವರು ಕಾಳಸಂತೆಯಲ್ಲಿ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಮಾರಾಟ ಮಾಡುವುದರಿಂದ ಔಷಧಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ರೋಗಿಗಳು ಹಾಗೂ ಸಾರ್ವಜನಿಕರು ಹೇಳಿದ್ದಾರೆ.
ಇನ್ನು ಕಾಳಸಂತೆಯಲ್ಲಿ ಔಷಧಗಳು ಮಾರಾಟ ಮಾಡುವುದರಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸಿಗದೆ ಸಮಸ್ಯೆಯಾಗುತ್ತದೆ. ಇದರಿಂದ ವೈದ್ಯರು ಹೊರಗೆ ಔಷಧಗಳನ್ನು ತರಲು ಶಿಫಾರಸು ಮಾಡುತ್ತಾರೆ. ಹೀಗಾಗಿ ಔಷಧಗಳ ಸರಬರಾಜು ಹಾಗೂ ವಿತರಣೆ ಮೇಲೆ ಸಂಬಧಪಟ್ಟ ಅಧಿಕಾರಿಗಳು ನಿಗಾ ಇಡಬೇಕು ಎಂದು ರೋಗಿಗಳು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Muda Case: ಮುಡಾ ಹಗರಣ; ಸಿಎಂ ಮೇಲ್ಮನವಿ ವಿಚಾರಣೆ ಜ.25ಕ್ಕೆ ಮಂದೂಡಿಕೆ, ದೂರುದಾರರಿಗೆ ಹೈಕೋರ್ಟ್ ನೋಟಿಸ್