ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka High Court: ಇನ್ನು ಮುಂದೆ ʼಜಾಡಮಾಲಿʼ ಪದ ಬಳಸುವಂತಿಲ್ಲ: ಹೈಕೋರ್ಟ್‌ ಆದೇಶ

“ಸಮಾಜದಲ್ಲಿ ಅಮೂಲ್ಯ ಸೇವೆ ಸಲ್ಲಿಸುವ ಒಂದು ವರ್ಗದ ನೌಕರರನ್ನು ಉದ್ದೇಶಿಸುವ ಪದ ಗೌರವದಿಂದ ಕೂಡಿರಬೇಕು. ಹೀಗಾಗಿ, ಸರ್ಕಾರ ಇನ್ನು ಮುಂದೆ ಜಾಡಮಾಲಿ ಪದದ ಬಳಕೆಯ ಬದಲಾಗಿ ‘ಸ್ವಚ್ಛತಾ ನೌಕರ’ ಎಂಬುದಾಗಿಯೇ ಬಳಸಬೇಕು” ಎಂದು ನ್ಯಾಯಾಂಗ ಆದೇಶ ಹೊರಡಿಸಿದೆ.

ಇನ್ನು ಮುಂದೆ ʼಜಾಡಮಾಲಿʼ ಪದ ಬಳಸುವಂತಿಲ್ಲ: ಹೈಕೋರ್ಟ್‌ ಆದೇಶ

ಕರ್ನಾಟಕ ಹೈಕೋರ್ಟ್

ಹರೀಶ್‌ ಕೇರ ಹರೀಶ್‌ ಕೇರ Apr 9, 2025 10:27 AM

ಬೆಂಗಳೂರು: ಇನ್ನು ಮುಂದೆ ‘ಜಾಡಮಾಲಿ’ (Jadamali) ಎಂಬ ಪದವನ್ನು ಬಳಸಬಾರದು. ಇದಕ್ಕೆ ಪರ್ಯಾಯವಾಗಿ ‘ಸ್ವಚ್ಛತಾ ಸಹಾಯಕ’ (Cleaning assistant) ಎಂದು ಸಂಬೋಧಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ (Karnataka high court) ರಾಜ್ಯ ಸರ್ಕಾರಕ್ಕೆ (Karnataka government) ಮಂಗಳವಾರ (ಏ.8) ಆದೇಶಿಸಿದೆ. ತಮ್ಮ ಸೇವೆ ಕಾಯಂಗೊಳಿಸಬೇಕು ಎಂದು ಕೋರಿ ತುಮಕೂರು ಜಿಲ್ಲಾ ಮೀಸಲು ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್‌ ಬಾಬು ಸೇರಿದಂತೆ ರಾಜ್ಯದ ವಿವಿಧೆಡೆಯ 31 ಠಾಣೆಗಳಲ್ಲಿನ ಸ್ವಚ್ಛತಾ (Sweeping) ನೌಕರ ಪೊಲೀಸ್‌ ವರ್ಗ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ರಾಮಚಂದ್ರ ಡಿ.ಹುದ್ದಾರ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌.ಎ ಅಹಮದ್‌ ಅವರು “ಸರ್ಕಾರ ಜಾಡಮಾಲಿ ಪದ ಬಳಸುತ್ತಿರುವುದು ಸರಿಯಲ್ಲ. ಆದ್ದರಿಂದ, ಈ ಪದಕ್ಕೆ ಪರ್ಯಾಯವಾಗಿ ಸ್ವಚ್ಛತಾ ನೌಕರ ಎಂಬುದನ್ನು ಬಳಸುವಂತೆ ಪೀಠ ಆದೇಶಿಸಬೇಕು” ಎಂದು ಕೋರಿದ್ದಾರೆ. ಈ ಮನವಿ ಪುರಸ್ಕರಿಸಿ, ಅದಕ್ಕೆ ಶ್ಲಾಘಿಸಿದ ಪೀಠ “ಸಮಾಜದಲ್ಲಿ ಅಮೂಲ್ಯ ಸೇವೆ ಸಲ್ಲಿಸುವ ಒಂದು ವರ್ಗದ ನೌಕರರನ್ನು ಉದ್ದೇಶಿಸುವ ಪದ ಗೌರವದಿಂದ ಕೂಡಿರಬೇಕು. ಹೀಗಾಗಿ, ಸರ್ಕಾರ ಇನ್ನು ಮುಂದೆ ಜಾಡಮಾಲಿ ಪದದ ಬಳಕೆಯ ಬದಲಾಗಿ ‘ಸ್ವಚ್ಛತಾ ನೌಕರ’ ಎಂಬುದಾಗಿಯೇ ಬಳಸಬೇಕು” ಎಂದು ನ್ಯಾಯಾಂಗ ಆದೇಶ ಹೊರಡಿಸಿದೆ.

ಅರ್ಜಿದಾರರು ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕಳೆದ ಹಲವು ದಶಕಗಳಿಂದ ಸ್ವೀಪರ್‌/ಜಾಡಮಾಲಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, 2018ರಲ್ಲಿ ಅವರನ್ನು ಸೇವೆಯಿಂದ ತೆಗೆದು ಹಾಕಲಾಗಿತ್ತು. ಅವರ ಜಾಗಕ್ಕೆ ಗುತ್ತಿಗೆ ಆಧಾರದಲ್ಲಿ ಅರೆಕಾಲಿಕ ನೌಕರರನ್ನು ನೇಮಿಸಲು ಪೊಲೀಸ್‌ ಇಲಾಖೆ ನಿರ್ಧರಿಸಿತ್ತು.

ಈ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣವು 2021ರಲ್ಲಿ ವಜಾಗೊಳಿಸಿತ್ತು. ಹಾಗಾಗಿ, ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು. ತಮ್ಮ ಸೇವೆ ಕಾಯಂಗೊಳಿಸಲು ಮತ್ತು ಸೇವಾ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು. ಈ ಹಿಂದೆ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅರ್ಜಿದಾರರನ್ನು ಕೆಲಸದಿಂದ ತೆಗೆದು ಹಾಕುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಅವರು ಕೆಲಸ ಮುಂದುವರಿಸಲು ಅನುಮತಿಸಬೇಕು ಮತ್ತು ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.