Kannada Sahitya sammelana: ಕನ್ನಡಕ್ಕೆ ಡಿಜಿಟಲ್ ಪ್ರಾಧಿಕಾರ ಬೇಕು; ವಿದ್ಯುನ್ಮಾನ ಗೋಷ್ಠಿಯಲ್ಲಿ ಹಕ್ಕೊತ್ತಾಯ
Kannada Sahitya sammelana: ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ 1ರಲ್ಲಿ ʼಸೃಜನಶೀಲತೆ - ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳುʼ ಗೋಷ್ಠಿಯನ್ನು ಶನಿವಾರ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ ಅವರು, ಕನ್ನಡ ವರ್ಚುವಲ್ ಯುನಿವರ್ಸಿಟಿ ಹಾಗೂ ಡಿಜಿಟಲ್ ಪ್ರಾಧಿಕಾರ ಸ್ಥಾಪಿಸಬೇಕು ಎಂದು ತಿಳಿಸಿದರು.
Prabhakara R
December 21, 2024
ಮಂಡ್ಯ: ತಂತ್ರಜ್ಞಾನ ಯುಗದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಡಿಜಿಟಲ್ ಪ್ರಾಧಿಕಾರವನ್ನು ರೂಪಿಸಿಕೊಂಡು ಪ್ರಯತ್ನ ಮಾಡಬೇಕಾಗಿದೆ ಎಂದು ʼಸೃಜನಶೀಲತೆ - ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳುʼ ಗೋಷ್ಠಿಯಲ್ಲಿ (Kannada Sahitya sammelana) ಸರ್ಕಾರವನ್ನು ಒತ್ತಾಯಿಸಲಾಯಿತು.
ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ 1ರಲ್ಲಿ ʼಸೃಜನಶೀಲತೆ - ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳುʼ ಗೋಷ್ಠಿಯನ್ನು ಶನಿವಾರ ಆಯೋಜಿಸಲಾಗಿತ್ತು. ಎಐ, ಸೃಜನಶೀಲತೆ ಎಲ್ಲವೂ ಮನುಷ್ಯನ ಮಿತ್ರನಾಗಬೇಕೇ ಹೊರತು ಶತ್ರು ಆಗಬಾರದು. ಮಾನವನ ಆಸ್ತಿ ಸೃಜನಶೀಲತೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ತಂತ್ರಜ್ಞಾನವನ್ನು ಬಳಸಿಕೊಳ್ಳುವ, ಮನುಷ್ಯನನ್ನು ಬೆಳೆಸುವ ಕೆಲಸ ಆಗಬೇಕು. ಕಲೆ, ವಿಜ್ಞಾನ, ಶಿಕ್ಷಣ ಎಲ್ಲ ಕಡೆಯೂ ತಂತ್ರಜ್ಞಾನದ ಬೆಳವಣಿಗೆ ಸಾಕಷ್ಟಿದೆ. ತಂತ್ರಜ್ಞಾನ ಬೆಳೆದಂತೆ ಮನುಷ್ಯನ ನೈತಿಕತೆಗೂ ಧಕ್ಕೆಯಾಗುವ ಭಯ ಇದೆ. ಕನ್ನಡ ವರ್ಚುವಲ್ ಯುನಿವರ್ಸಿಟಿ ಹಾಗೂ ಡಿಜಿಟಲ್ ಪ್ರಾಧಿಕಾರ ಸ್ಥಾಪಿಸಿ ಮುಂದುವರಿಯಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ ನುಡಿದರು.
ಇವತ್ತಿನ ಕನ್ನಡ ಮುದುಕರ ಕನ್ನಡವಾಗುತ್ತಿದೆ. ಕನ್ನಡ ಮನೆಮನಗಳಿಂದ ಮರೆಯಾಗುತ್ತಿದೆ. ಮಕ್ಕಳು ಕನ್ನಡವನ್ನು ಬಳಸುತ್ತಿಲ್ಲ. ಹೀಗಾಗಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಪಾರಮ್ಯವನ್ನು ಸಾಧಿಸುವುದು ಅತ್ಯಗತ್ಯವಾಗಿದೆ ಎಂದು ಗೋಷ್ಠಿಯ ಆಶಯ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ಜಿ.ಎನ್ ಮೋಹನ್ ನುಡಿದರು. ಮೊದಲು ಶ್ರೀಮಂತ ಹಾಗೂ ಬಡವರು ಎಂಬ ಭೇದವಿತ್ತು. ಇಂದು ಮಾಹಿತಿ ಶ್ರೀಮಂತರು- ಮಾಹಿತಿ ಬಡವರು ಎಂಬ ಭೇದವಿದೆ. ಜೊತೆಗೆ ಇಂಟರ್‌ನೆಟ್ ಪೂರ್ವ ಯುಗ, ಇಂಟರ್‌ನೆಟ್ ಯುಗ ಎಂದೂ ವಿಭಾಗಿಸಬಹುದು. ಸಿಟಿಜೆನ್‌ಗಳೆಲ್ಲ ನೆಟಿಜೆನ್‌ಗಳಾಗುತ್ತಿದ್ದಾರೆ. ಇಂದು ತಂತ್ರಜ್ಞಾನದ ನಡುವೆ ಹೊರಜಗತ್ತನ್ನು ಕಾಣುವ ಕಿಟಕಿ ಎಂದರೆ ವಿಂಡೋಸ್ ಎಂದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ಸಮ್ಮೇಳನದ ಸ್ವಾರಸ್ಯಗಳು: ಸಮಾನಾಂತರ ವೇದಿಕೆಯೂ ಕಬ್ಬಿನ ಗದ್ದೆಯೂ!
ನಾವು ಕಂಪ್ಯೂಟರ್‌ನಲ್ಲಿ ಎಷ್ಟು ಕನ್ನಡ ಪದಗಳನ್ನು ಬಳಸುತ್ತಿದ್ದೇವೆ, ಅದಕ್ಕೆ ಸರಿಯಾಗಿ ಕನ್ನಡ ಕಲಿಸಿದ್ದೇವೆಯೇ ಎಂದು ನೋಡಬೇಕಿದೆ. ಮುಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಕನ್ನಡ ಉಳಿಯಬೇಕು. ಕನ್ನಡ ತಂತ್ರಾಂಶ ರೂಪಿಸಬೇಕು. ಹಂಪಿ ಯೂನಿವರ್ಸಿಟಿಯವರು ರೂಪಿಸಿದ ಕುವೆಂಪು ತಂತ್ರಾಂಶದ ಕತೆ ಏನಾಯಿತೋ ಗೊತ್ತಿಲ್ಲ. ಸರ್ಕಾರಕ್ಕೆ ಕನ್ನಡ ತಂತ್ರಾಂಶದ ಕಿವಿಯೇ ಇಲ್ಲ. ಇಂಟರ್‌ನೆಟ್ ಅನ್ನು ಮಾತ್ರ ಉಪಯೋಗಕ್ಕೆ ತಕ್ಕಷ್ಟು ಬಳಸುತ್ತಿದೆ. ಇದನ್ನೆಲ್ಲ ಸರಿಯಾಗಿ ನಿರ್ವಹಿಸಲು ಡಿಜಿಟಲ್ ಕನ್ನಡ ಪ್ರಾಧಿಕಾರ ಬೇಕು ಎಂದು ಅವರು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣʼ ಬಗ್ಗೆ ಐಟಿ ತಜ್ಞ ಓಂಶಿವಪ್ರಕಾಶ್ ಮಾತನಾಡಿದರು. ಸಾಮಾಜಿಕ ಜಾಲತಾಣ ಎಂದರೆ ಊರಲ್ಲಿನ ಅರಳಿಕಟ್ಟೆಯಂತೆ. ಇಲ್ಲಿ ಎಲ್ಲ ವಿಷಯಗಳಿಗೂ ಸ್ಥಾನವಿದೆ. ಆದರೆ ನಮ್ಮ ಕನ್ನಡ ಸಾಹಿತ್ಯಕ್ಕೆ ಸರ್ಕಾರ ಅಲ್ಲದೆ, ಜನಸಾಮಾನ್ಯರು ಏನೆಲ್ಲಾ ಮಾಡುತ್ತಿದ್ದೇವೆ ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು. ಸಮುದಾಯ ಸಾಮಾಜಿಕ ಜಾಲತಾಣಗಳಿಂದ ಇಂಟರ್‌ನೆಟ್ ಸಾಕಷ್ಟು ಕೊಡುಗೆ ಪಡೆದಿದೆ. ವಿಕಿಪೀಡಿಯ 300ಕ್ಕೂ ಹೆಚ್ಚು ಭಾಷೆಯಲ್ಲಿ ಇದೆ. ಕನ್ನಡದಲ್ಲೂ ಇದರಲ್ಲಿ ಸಾಕಷ್ಟು ಮಾಹಿತಿ ಇದೆ. ಇದು ಸಾಧ್ಯವಾದುದು ಸೋಶೀಯಲ್ ಮೀಡಿಯಾಗಳಿಂದ. ಎಲ್ಲರೂ ಮಾಹಿತಿಯನ್ನು ಹಂಚಿಕೊಂಡು ಆಕರ ಕೋಶವನ್ನು ಬೆಳೆಸಿದ್ದಾರೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಮುಂತಾದವು ಡಿಜಿಟಲೀಕರಣಗೊಂಡು ಇಂದು ಬೆರಳ ತುದಿಯಲ್ಲಿ ಲಭ್ಯವಿವೆ ಎಂದು ಅವರು ನುಡಿದರು.
ಕೃತಕ ಬುದ್ಧಿಮತ್ತೆಯಿಂದ ಮನುಷ್ಯನಿಗೆ ಅನುಕೂಲ ಎಷ್ಟಿದೆಯೋ ಅಷ್ಟೇ ಭವಿಷ್ಯದಲ್ಲಿ ಆತಂಕಗಳಿವೆ ಎಂದು ಸಾಹಿತಿ, ಸಾಫ್ಟ್‌ವೇರ್ ತಂತ್ರಜ್ಞ ವೈ.ಎನ್ ಮಧು ನುಡಿದರು. ಅವರು ಕೃತಕ ಬುದ್ಧಿಮತ್ತೆ ಹಾಗೂ ಚಾಟ್ ಜಿಪಿಟಿ ಸೃಷ್ಟಿಸಿರುವ ಸವಾಲುಗಳ ಬಗ್ಗೆ ಮಾತನಾಡಿದರು. ಕೃತಕ ಬುದ್ಧಿಮತ್ತೆ ಸದ್ಯದಲ್ಲೇ ಮನುಷ್ಯನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿದೆ. ನಾವು ಸ್ವತಂತ್ರ ಎಂದು ತಿಳಿದಿದ್ದೇವೆ. ಆದರೆ ಎಐ ಆಲ್ಗಾರಿದಂ ನಮ್ಮನ್ನು ಸತತವಾಗಿ ಗಮನಿಸಿ ನಮ್ಮ ವರ್ತನೆಗಳನ್ನು ನಿಯಂತ್ರಿಸುತ್ತಿರುತ್ತದೆ. ಎಐಯಿಂದ ನಾವು ಸೃಷ್ಟಿ ಮಾಡುವ ಕಂಟೆಂಟ್ ಮತ್ತೆ ಅದೇ ವ್ಯವಸ್ಥೆಯನ್ನು ಇಂಟರ್‌ನೆಟ್ ಮೂಲಕ ಸೇರಿಕೊಂಡು ಅದೇ ಗಾಳಿಯನ್ನು ಮತ್ತೆ ಮತ್ತೆ ಉಸಿರಾಡುವ ಎಕೋ ಚೇಂಬರ್‌ಗಳಾಗಿ ನಾವು ಬದಲಾಗಲಿದ್ದೇವೆ ಎಂದು ಮಧು ಎಚ್ಚರಿಸಿದರು.
ಎಐಗಳು ತಂತ್ರಜ್ಞಾನದ ವಸಾಹತುಶಾಹಿಗೆ ದಾರಿಯಾಗಲಿದೆ. ಅತ್ಯಧುನಿಕ ಎಐ ವ್ಯವಸ್ಥೆ ಹಾಗೂ ತಂತ್ರಜ್ಞಾನವನ್ನು ಯಾವ ದೇಶ ಸಾಕಷ್ಟು ಹೊಂದಿದೆಯೋ ಅದು ಬಲಿಷ್ಠವಾಗುತ್ತದೆ. ಸದ್ಯ ಅಮೆರಿಕ ಆ ಸ್ಥಾನದಲ್ಲಿದ್ದು, ಜಾಗತಿಕ ಪವರ್ ಆಗಿದೆ. ನಾವೆಲ್ಲರೂ ಕುರಿಹಿಂಡುಗಳಾಗಲಿದ್ದೇವೆ. ಇನ್ನೊಂದು ಅಪಾಯ ಎಂದರೆ ಮನುಷ್ಯನ ಭಾವನೆ- ಚಿಂತನೆ- ವರ್ತನೆಗಳು ಡಿಜಿಟಲೈಸ್ ಆಗುವ, ಅಮಾನವೀಯ ಆಗುವ ಭಯ. ನಾವು ಈಗಾಗಲೇ ಮಾತುಕತೆಗಳಿಂದ ಇಮೋಜಿಗಳಿಂದ ಬದಲಾಗಿದ್ದೇವೆ. ಮುಂದೆ ಎಐಯಿಂದಾಗಿ ಇದು ಇನ್ನೂ ಅಧಿಕವಾಗಲಿದೆ. ಉದ್ಯೋಗಗಳ ನಷ್ಟವಾಗುವ ಆತಂಕ ಹೇಗೂ ಇದ್ದೇ ಇದೆ ಎಂದರು. ಮನುಷ್ಯನ ಅಪರಿಪೂರ್ಣತೆಯಿಂದಾಗಿಯೇ ಆತನ ಕಲೆ, ಸೃಜನಶೀಲತೆಗೆ ಬೆಲೆ. ಇದನ್ನು ಎಐ ಕಸಿದುಕೊಳ್ಳಲಿದೆ. ಎಐ ಹೇಗೆ ಕೆಲಸ ಮಾಡುತ್ತದೆ ಅನ್ನುವುದು ಅದನ್ನು ರೂಪಿಸಿದವನಿಗೂ ಗೊತ್ತಿರುವುದಿಲ್ಲ. ಯಾವ ಪ್ರಶ್ನೆಗೆ ಇಂಥ ಉತ್ತರವನ್ನು ಯಾಕೆ ಕೊಟ್ಟಿತು ಅಂತ ಅದನ್ನು ಸೃಷ್ಟಿಸಿದವನಿಗೂ ಗೊತ್ತಾಗುವುದಿಲ್ಲ ಎಂದು ವಿವರಿಸಿದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ಸಾಹಿತಿಗಳು ರಾಜಕಾರಣವನ್ನು ಅಸ್ಪೃಶ್ಯತೆಯಿಂದ ಕಾಣುತ್ತಿರುವುದು ದುರ್ದೈವ: ಎಚ್.ಕೆ.ಪಾಟೀಲ್
ʼತಂತ್ರಜ್ಞಾನ ಯುಗದಲ್ಲಿ ಕನ್ನಡದ ಅನುಸಂಧಾನʼ ವಿಚಾರದಲ್ಲಿ ಮಾತನಾಡಿದ ಶಂಕರ್ ಸಿಹಿಮೊಗ್ಗೆ, ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ, ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕನ್ನಡವನ್ನು ಹೆಚ್ಚು ಬಳಸಬೇಕು ಹಾಗೂ ತಂದೆ - ತಾಯಂದಿರು ಮಕ್ಕಳ ಜೊತೆಗೆ ಹೆಚ್ಚು ಮಾತೃಭಾಷೆ ಕನ್ನಡವನ್ನು ಬಳಸಬೇಕು. ಹಾಗಾದರೆ ಮಾತ್ರ ಕನ್ನಡ ಆಧುನಿಕ ಯುಗದಲ್ಲಿ ಉಳಿಯಲು ಸಾಧ್ಯ ಎಂದರು.