HD Kumaraswamy: ಕಾಂಗ್ರೆಸ್ ಸಚಿವರಿಂದ ಶೇ. 60 ಕಮಿಷನ್ ಭ್ರಷ್ಟಾಚಾರ: ಎಚ್‌ಡಿ ಕುಮಾರಸ್ವಾಮಿ ಬಾಂಬ್
HD Kumaraswamy: ಕಾಂಗ್ರೆಸ್ ಸಚಿವರಿಂದ ಶೇ. 60 ಕಮಿಷನ್ ಭ್ರಷ್ಟಾಚಾರ: ಎಚ್‌ಡಿ ಕುಮಾರಸ್ವಾಮಿ ಬಾಂಬ್
ಹರೀಶ್ ಕೇರ
January 6, 2025
ಮೈಸೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೇ. 60ರಷ್ಟು ಕಮಿಷನ್ (commission) ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ (HD Kumaraswamy) ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿ (Mysuru News) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಸಚಿವರಿಗೆ ಇಂತಿಷ್ಟು ಕಮಿಷನ್ ನಿಗದಿಪಡಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗುತ್ತಿಗೆದಾರರೇ ಹೇಳುತ್ತಿರುವುದಾಗಿ ದೂರಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕೆಲ ಜನರಿಗೆ ಪ್ರಯೋಜನವಾಗುತ್ತಿರುವುದನ್ನು ಒಪ್ಪಿಕೊಂಡ ಕುಮಾರಸ್ವಾಮಿ, ಬಸ್ ಪ್ರಯಾಣ ದರ ಏರಿಕೆ ಮತ್ತಿತರ ಆರ್ಥಿಕ ಹೊಡೆತದ ಕ್ರಮಗಳು ಹಂತ ಹಂತವಾಗಿ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವ ಪ್ರಕ್ರಿಯೆಯ ಭಾಗವಾಗಿರಬಹುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ವ್ಯಕ್ತಿಯಾಗಿದ್ದು, ಅವರೇ ಹಣಕಾಸು ಖಾತೆ ಹೊಂದಿದ್ದಾರೆ, ಅವರ ಒಪ್ಪಿಗೆಯೊಂದಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಹೇಳಿದಂತೆ ನಡೆದುಕೊಳ್ಳುತ್ತಿದೆ ಎಂದು ಅವರೇ ಹೇಳುತ್ತಿದ್ದಾರೆ. ಆದರೆ ಮಾತಿನಂತೆ ನಡೆಯದ ಅವರು ಸಾಮಾನ್ಯರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಸ್ ದರ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಇದು ರೈತರು, ಕಾರ್ಮಿಕರು ಮತ್ತು ಕಾರ್ಮಿಕ ವರ್ಗದ ಮೇಲೆ ಪರಿಣಾಮ ಬೀರಿದೆ. ಶೇ. 15 ರಷ್ಟು ದರ ಹೆಚ್ಚಿಸುವ ಮೂಲಕ ಈ ಸರ್ಕಾರ ಏನು ಸಾಧಿಸಿದೆ? ಇಂತಹ ಕ್ರಮಗಳು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆಯೇ ಹೊರತು ಶ್ರೀಮಂತರು ಅಥವಾ ಮಂತ್ರಿಗಳ ಕುಟುಂಬಗಳ ಮೇಲೆ ಅಲ್ಲ. ಈ ಹೆಚ್ಚಳವು ಹಿಂದುಳಿದವರ ಸಂಕಷ್ಟಗಳ ಕಡೆಗೆ ಸರ್ಕಾರ ಸಂವೇದನೆ ಇಲ್ಲದಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿರುವ ಪರಿಷ್ಕೃತ ಬಸ್ ದರವನ್ನು ವಿರೋಧ ಪಕ್ಷಗಳು ಮತ್ತು ಸಮಾಜದ ವಿವಿಧ ವರ್ಗಗಳು ಟೀಕಿಸುತ್ತಿವೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ಅದೇ ಫಲಾನುಭವಿಗಳಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದೆ. ಸರ್ಕಾರ ಹಗಲು ದರೋಡೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರ ಏರಿಕೆ, ಸ್ಟ್ಯಾಂಪ್ ಸುಂಕ ಹೆಚ್ಚಳ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚಿನ ಸೆಸ್ ಮೂಲಕ ಜನರಿಂದ ಹಣ ಪಡೆದು ಗೃಹಲಕ್ಷ್ಮಿಯಂತಹ ಯೋಜನೆಗಳ ರೂಪದಲ್ಲಿ ವಾಪಸ್ ನೀಡುತ್ತಿದ್ದಾರೆ. ಇದು ಯಾವುದೇ ಸಾಧನೆಯಲ್ಲ. ಪ್ರಸ್ತುತ ಆಡಳಿತದಲ್ಲಿ ಭ್ರಷ್ಟಾಚಾರ ಅಭೂತಪೂರ್ವ ಮಟ್ಟಕ್ಕೆ ತಲುಪಿದೆ ಎಂದರು.
ಗುತ್ತಿಗೆದಾರರು ಮತ್ತು ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ ಕುರಿತು ಮಾತನಾಡಿದ ಕುಮಾರಸ್ವಾಮಿ, ಆಡಳಿತದಲ್ಲಿ ಮಿತಿ ಮೀರಿದ ಭ್ರಷ್ಟಾಚಾರವೇ ಇದಕ್ಕೆ ಕಾರಣ. ಸಿಎಂ ಸುತ್ತ ಇರುವವರು ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಆತ್ಮಸಾಕ್ಷಿಗೆ ಉತ್ತರಿಸಬೇಕು. ಈ ದುರಾಡಳಿತಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಅವರು ಹೇಳಿದರು.