Rohan Murthy Interview: 2,500 ವರ್ಷಗಳ ಭಾರತೀಯ ಸಾಹಿತ್ಯಕ್ಕೆ ಜಾಗತಿಕ ವೇದಿಕೆ
ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯವರ ಮಗ ರೋಹನ್ ನಾರಾಯಣ ಮೂರ್ತಿಯವರು ಕನ್ನಡ ಸೇರಿದಂತೆ ಭಾರತದ ಪ್ರಾಚೀನ ಭಾಷೆಗಳ ಶಾಸ್ತ್ರೀಯ ಮತ್ತು ಅಭಿಜಾತ ಕೃತಿಗಳನ್ನು, ಮಹಾ ಕಾವ್ಯಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿಸಿ ಇಡೀ ಜಗತ್ತಿಗೆ ಪ್ರಾಚೀನ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವ ಅತ್ಯಪರೂಪದ ಸಾಧನೆಯನ್ನು ಕಳೆದ ಹತ್ತು ವರ್ಷಗಳಿಂದಲೂ ಸದ್ದಿಲ್ಲದೆ ಮಾಡುತ್ತಿದ್ದಾರೆ.
- ವಿಶೇಷ ಸಂದರ್ಶನ: ಕೇಶವ ಪ್ರಸಾದ್ ಬಿ.
ಬೆಂಗಳೂರು: ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯವರ ಮಗ ರೋಹನ್ ನಾರಾಯಣ ಮೂರ್ತಿಯವರು, ತಂದೆಯಂತೆ ಐಟಿ ಇಂಡಸ್ಟ್ರಿಯಲ್ಲಿ ಉದ್ಯಮಿಯಾಗಿರಬಹುದು ಎಂದು ಯಾರಾದರೂ, ಭಾವಿಸಿದರೆ ಸ್ವಾಭಾವಿಕ. ವಿಶೇಷವೇನೆಂದರೆ, ಅವರು ಕಂಪ್ಯೂಟರ್ ವಿಜ್ಞಾನಿ ಮತ್ತು ಟೆಕ್ ಉದ್ಯಮಿ ಮಾತ್ರವಲ್ಲದೆ, ಕನ್ನಡ ಸೇರಿದಂತೆ ಭಾರತದ ಪ್ರಾಚೀನ ಭಾಷೆಗಳ ಶಾಸ್ತ್ರೀಯ ಮತ್ತು ಅಭಿಜಾತ ಕೃತಿಗಳನ್ನು, ಮಹಾ ಕಾವ್ಯಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿಸಿ ಇಡೀ ಜಗತ್ತಿಗೆ ದೇಶದ ಎರಡು ಸಾವಿರಕ್ಕೂ ಹೆಚ್ಚು ಪ್ರಾಚೀನ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವ ಅತ್ಯಪರೂಪದ ಸಾಧನೆಯನ್ನು ಕಳೆದ ಹತ್ತು ವರ್ಷಗಳಿಂದಲೂ ಸದ್ದಿಲ್ಲದೆ ಮಾಡುತ್ತಿದ್ದಾರೆ!
ರೋಹನ್ ಮೂರ್ತಿಯವರು 2005ರಲ್ಲಿ ಸ್ಥಾಪಿಸಿದ "ಮೂರ್ತಿ ಕ್ಲಾಸಿಕಲ್ ಲೈಬ್ರೆರಿ ಆಫ್ ಇಂಡಿಯಾ (Murty Classical Library of India) ಸಂಸ್ಥೆಗೆ ಈಗ ಹತ್ತನೇ ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಅವರು ಮೂರ್ತಿ ಕ್ಲಾಸಿಕಲ್ ಲೈಬ್ರೆರಿ ಆಫ್ ಇಂಡಿಯಾದ ಬಗ್ಗೆ ತಿಳಿಸಿದ್ದಾರೆ.
ಮೂರ್ತಿ ಕ್ಲಾಸಿಕಲ್ ಲೈಬ್ರೆರಿ ಆಫ್ ಇಂಡಿಯಾ ಕಳೆದ 10 ವರ್ಷಗಳಲ್ಲಿ ನಡೆದು ಬಂದಿರುವ ಹಾದಿಯ ಬಗ್ಗೆ ತಿಳಿಸುತ್ತೀರಾ?
ರೋಹನ್ ಮೂರ್ತಿ: ಕಳೆದ ಎರಡೂವರೆ ಸಾವಿರ ಹೆಚ್ಚು ವರ್ಷಗಳಿಂದ ಭಾರತೀಯ ಭಾಷೆಗಳಲ್ಲಿ ರಚಿಸಲಾಗಿರುವ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಯೋಜನೆಯನ್ನು ಮೂರ್ತಿ ಕ್ಲಾಸಿಕಲ್ ಲೈಬ್ರೆರಿ ಅಫ್ ಇಂಡಿಯಾ ಮಾಡುತ್ತಿದೆ. ವಿಶ್ವ ಸಾಹಿತ್ಯ ಪರಂಪರೆಯ ಭಾಗವಾಗಿರುವ ಭಾರತೀಯ ಪ್ರಾಚೀನ ಅಭಿಜಾತ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವುದರಿಂದ ಹೊಸ ಪೀಳಿಗೆಯ ಜನರಿಗೂ ಓದಲು ಮತ್ತು ಮನನ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಸಂಸ್ಕೃತ, ಕನ್ನಡ, ಬಂಗಾಳಿ, ಹಿಂದಿ, ಮರಾಠಿ, ಪಾಲಿ, ಪಂಜಾಬಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಯ ಪ್ರಾಚೀನ ಕೃತಿಗಳನ್ನು ಅನುವಾದಿಸಲಾಗಿದೆ. ಈ ನಿಟ್ಟಿನಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯದ ಸಹಭಾಗಿತ್ವವನ್ನೂ ಪಡೆಯಲಾಗಿದೆ. ಭಾರತೀಯ ಸಾಹಿತಿಗಳ ಜತೆಗೆ ಬ್ರಿಟನ್, ಅಮೆರಿಕ, ಜರ್ಮನಿ, ಆಫ್ರಿಕಾ ಸೇರಿದಂತೆ ವಿದೇಶಗಳ ಸಾಹಿತಿಗಳೂ, ಅನುವಾದಕರು ಈ ಕೆಲಸದಲ್ಲಿ ಕೈಜೋಡಿಸಿದ್ದಾರೆ.
ಈ ಹಿಂದೆ ಕ್ಲಾಸಿಕ್ಸ್ ಎಂದರೆ ಗ್ರೀಕ್ ಸಾಹಿತ್ಯ ಎಂಬುದೇ ವಾಡಿಕೆಯಾಗಿತ್ತು. ಆದರೆ ಭಾರತದಲ್ಲಿ ಕನ್ನಡ, ತಮಿಳು, ಸಂಸ್ಕೃತ, ಪಾಲಿ ಸೇರಿದಂತೆ ಹತ್ತಾರು ಭಾಷೆಗಳಲ್ಲಿ ಸಾವಿರಾರು ವರ್ಷಗಳಿಂದ ಅಭಿಜಾತ ಕೃತಿಗಳು ರಚನೆಯಾಗಿವೆ. ಪುರಾತನ ಜೈನ ಸಾಹಿತ್ಯ ಗ್ರಂಥಗಳೂ ಇವೆ. ಇಂಥ ಕ್ಲಾಸಿಕ್ ಕೃತಿಗಳೂ ವಿಶ್ವ ಸಾಹಿತ್ಯದಲ್ಲಿ ಓದುಗರನ್ನು ತಲುಪಬೇಕು. ಈ ನಿಟ್ಟಿನಲ್ಲಿ ಮೂರ್ತಿ ಕ್ಲಾಸಿಕಲ್ ಲೈಬ್ರೆರಿ 14 ಭಾರತೀಯ ಭಾಷೆಗಳ ಕೃತಿಗಳ ಐವತ್ತು ಸಂಪುಟಗಳನ್ನು ಅನುವಾದಿಸಿ ಬಿಡುಗಡೆಗೊಳಿಸಿದೆ. ಈ ಕೃತಿಗಳು ಅಮೆಜಾನ್ ಆನ್‌ಲೈನ್ ತಾಣದಲ್ಲಿ ಓದುಗರಿಗೆ ಲಭ್ಯವಿದೆ. ಹದಿಮೂರನೇ ಶತಮಾನದ, ಕನ್ನಡದ ಪ್ರಾಚೀನ ಕೃತಿ ಹರಿಶ್ಚಂದ್ರ ಕಾವ್ಯವನ್ನು ವನಮಾಲಾ ವಿಶ್ವನಾಥ ಅವರು ಅನುವಾದಿಸಿದ್ದಾರೆ.
ನೀವು ಮೂಲತಃ ಕಂಪ್ಯೂಟರ್ ವಿಜ್ಞಾನಿ ಹಾಗೂ ಟೆಕ್ ಉದ್ಯಮಿಯಾಗಿದ್ದರೂ, ಪ್ರಾಚೀನ ಸಾಹಿತ್ಯ ಕೃತಿಗಳ ಬಗ್ಗೆ ಆಸಕ್ತಿ ಹೇಗೆ ಉಂಟಾಯಿತು? ಪ್ರೇರಣೆ ನೀಡಿದವರು ಯಾರು?
ರೋಹನ್ ಮೂರ್ತಿ: ನನ್ನ ತಾಯಿ ಸುಧಾಮೂರ್ತಿಯವರು ಸಾಹಿತ್ಯದ ಬಗ್ಗೆ ಬಹಳ ಆಸಕ್ತಿ ಉಳ್ಳವರು. ಹಲವಾರು ಕೃತಿಗಳನ್ನು ಬರೆದಿದ್ದಾರೆ. ಕ್ಲಾಸಿಕ್ ಸಾಹಿತ್ಯದ ಕಡೆಗೆ ಮೊದಲಿನಿಂದಲೂ ನನ್ನಲ್ಲಿ ಆಸಕ್ತಿ ಉಂಟಾಗಲು ತಾಯಿ ಸುಧಾಮೂರ್ತಿಯವರ ಪ್ರೇರಣೆಯೂ ಇದೆ. ನನ್ನ ಪತ್ನಿಯೂ ಸಾಹಿತ್ಯವನ್ನು ಓದಲು ಇಷ್ಟಪಡುತ್ತಾಳೆ. ಮೂರ್ತಿ ಕ್ಲಾಸಿಕಲ್ ಲೈಬ್ರರಿಯ ಬಹುತೇಕ ಎಲ್ಲ ಕೃತಿಗಳನ್ನು ಓದಿದ್ದಾಳೆ. ತಂದೆ ನಾರಾಯಣ ಮೂರ್ತಿಯವರು ಸಾಮಾನ್ಯವಾಗಿ ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವವರು. ಹೀಗಿದ್ದರೂ, ಅವರ ಬೆಂಬಲವಿದೆ.
ಹಳೆಯ ಅಮೂಲ್ಯ ಕೃತಿಗಳ ಅಧ್ಯಯನದಿಂದ ಮುಂದಿನ ಯುವ ಪೀಳಿಗೆ ಹೊಸ ಸ್ಪೂರ್ತಿಯನ್ನು, ಆಲೋಚನೆಗಳನ್ನು ಮತ್ತು ಮುಖ್ಯವಾಗಿ ಪೂರ್ವಿಕರ ಬದುಕಿನ ಮೌಲ್ಯಗಳನ್ನು ಅರಿತುಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬಹುದು. ಹಳೆಯ ಕ್ಲಾಸಿಕ್ ಕೃತಿಗಳೆಂದರೆ ಮ್ಯೂಸಿಯಂನಲ್ಲಿ ಇಡಬೇಕಾದ ವಸ್ತುಗಳಲ್ಲ. ಅದರಲ್ಲಿ ಅಡಕವಾಗಿರುವ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು.
ಮೂರ್ತಿ ಕ್ಲಾಸಿಕಲ್ ಲೈಬ್ರೆರಿಯ ಭವಿಷ್ಯದ ದೂರದೃಷ್ಟಿಯ ಯೋಜನೆಗಳೇನು?
ರೋಹನ್ ಮೂರ್ತಿ: ಸಂಸ್ಥೆ ಈ ವರ್ಷ ಹತ್ತನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಮುಂದಿನ ನೂರಾರು ವರ್ಷಗಳ ದೂರದೃಷ್ಟಿಯನ್ನು ಈ ಲೈಬ್ರೆರಿ ಒಳಗೊಂಡಿದೆ. ದೇಶ-ವಿದೇಶಗಳ ಅನುವಾದಕರನ್ನು ಸಂಪರ್ಕಿಸುವ ಕೆಲಸ ನಡೆಯುತ್ತಿದೆ. ಭಾರತದ ಪ್ರಾಚೀನ ಮತ್ತು ಸಮೃದ್ಧ ಸಾಹಿತ್ಯ ಕೃತಿಗಳ ಅನುವಾದ ನಿರಂತರವಾಗಿ ಮುಂದುವರಿಯಲಿದೆ ಮತ್ತು ಯುವ ಪೀಳಿಗೆಗೆ ಅದರ ಪ್ರಯೋಜನ ಸಿಗುವ ವಿಶ್ವಾಸ ಇದೆ.
ಮೂರ್ತಿ ಕ್ಲಾಸಿಕಲ್ ಲೈಬ್ರೆರಿಯ ಕೃತಿಗಳ ವೈವಿಧ್ಯ ಏನು?
ರೋಹನ್ ಮೂರ್ತಿ: " ಟೆನ್ ಇಂಡಿಯನ್ ಕ್ಲಾಸಿಕ್ಸ್ʼ ಎಂಬ ಕೃತಿಯನ್ನು ಮೂರ್ತಿ ಕ್ಲಾಸಿಕಲ್ ಲೈಬ್ರೆರಿಯು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಇದರಲ್ಲಿ ಭಾರತದ 2,500 ವರ್ಷಗಳ ಪರಂಪರೆಯ ಸಾಹಿತ್ಯವನ್ನು ಪರಿಚಯಿಸಲಾಗಿದೆ. ರೊಮ್ಯಾಂಟಿಕ್ ಗಝಲ್‌ಗಳು, ಭಕ್ತಿ ಭಾವದ ಚತುಷ್ಪದಿಗಳು, ಮಧ್ಯಕಾಲೀನ ಯುದ್ಧಗಳು, ಭಗ್ನ ಪ್ರೇಮಿಗಳು, ನಿರ್ವಾಣದ ಕಡೆಗೆ ನಡೆದ ಬೌದ್ಧ ಮಹಿಳೆ, ರಾಮಾಯಣ ಕಥನ ಇತ್ಯಾದಿ ವಿಷಯ ವಸ್ತುಗಳು ಈ ಕೃತಿಯಲ್ಲಿವೆ. ಕ್ರಿಸ್ತಪೂರ್ವ ಆರನೇ ಶತಮಾನದಿಂದ ಹದಿನೆಂಟನೇ ಶತಮಾನದ ತನಕ ಈ ಸಾಹಿತ್ಯ ಸೃಷ್ಟಿಯಾಗಿದೆ. ಹಿಂದಿ, ಕನ್ನಡ, ಪಾಲಿ, ಪಂಜಾಬಿ, ಪರ್ಷಿಯನ್, ಸಂಸ್ಕೃತ, ತೆಲುಗು ಮತ್ತು ಉರ್ದು ಭಾಷೆಯ ತಜ್ಞ ಅನುವಾದಕರು ಮತ್ತು ಸಾಹಿತಿಗಳು ಅನುವಾದಿಸಿದ್ದಾರೆ. ಖ್ಯಾತ ಕವಿ ಮತ್ತು ಅನುವಾದಕ ರಂಜಿತ್ ಹೊಸಕೋಟೆಯವರ ಮುನ್ನಡಿ ಇದೆ. ವಿಶ್ವಾದ್ಯಂತ ಓದುಗರಿಗೆ ಆಧುನಿಕ ದಕ್ಷಿಣ ಏಷ್ಯಾದ ಸಂಸ್ಕೃತಿಯನ್ನು ರೂಪಿಸಿದ ಪ್ರಾಚೀನ ಸಾಹಿತ್ಯ ಪರಂಪರೆಯ ಪರಿಚಯವನ್ನು ಕೃತಿ ಮಾಡುತ್ತದೆ.
ತುಳಸಿದಾಸರ ರಾಮಚರಿತ ಮಾನಸವು ಹದಿನಾರನೇ ಶತಮಾನದ ಅಭಿಜಾತ ಕೃತಿಯಾಗಿದೆ. ಇಂದಿಗೂ ಲಕ್ಷಾಂತರ ಮಂದಿಗೆ ಪ್ರೇರಣಾದಾಯಿ ಕೃತಿಯಿದು. ಉತ್ತರ ಭಾರತದಲ್ಲಿ ಪ್ರಾಚೀನ ರಾಮಾಯಣದ ಕಥನವನ್ನು ಮನೆಮನೆಗೆ ತಲುಪಿಸಿದ ಮಹಾನ್ ಕೃತಿಯೇ ತುಳಸಿದಾಸರ ರಾಮಚರಿತ ಮಾನಸ. ರಾಮನ ವನವಾಸ, ಸೀತಾಪಹರಣ, ಕಪಿ ಸೈನ್ಯ, ಹನುಮಂತನ ವೀರೋಚಿತ ಸೀಮೋಲ್ಲಂಘನ, ರಾಮ-ರಾವಣ ಯುದ್ಧ, ರಾಮನ ಜೀವನ ಯಾತ್ರೆ, ಮೌಲ್ಯಗಳನ್ನು ಇದು ಸಾರುತ್ತದೆ. ದ ಸೀ ಆಫ್ ಸೆಪರೇಶನ್ ಎಂಬ ಶೀರ್ಷಿಕೆಯಲ್ಲಿ ಫಿಲಿಪ್ ಲುಟ್ಗೆನ್‌ಡೋರ್ಫ್ ಅವರು ತುಳಿಸಿದಾಸರ ರಾಮಚರಿತ ಮಾನಸವನ್ನು ಅನುವಾದಿಸಿದ್ದಾರೆ.
ಕನ್ನಡದ ಅಭಿಜಾತ ಕೃತಿಯಾದ, ಕನ್ನಡದ ಮಹಾಭಾರತವಾದ ಕುಮಾರವ್ಯಾಸ ಮಹಾ ಭಾರತ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದೆ. ವನಮಾಲಾ ವಿಶ್ವನಾಥ್ ಅವರು ರಾಘವಾಂಕನ ಹರಿಶ್ಚಂದ್ರ ಕಾವ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಹರಿಶ್ಚಂದ್ರ ಮಹಾರಾಜನ ಜೀವನ ಕಥೆಯನ್ನು ಈ ಕೃತಿ ತಿಳಿಸುತ್ತದೆ.
ಹಿಂದಿಯ ಪ್ರಸಿದ್ಧ ಕವಿ ಸುರ್‌ದಾಸ್ ಅವರ ಅಭಿಜಾತ ಕೃತಿಯನ್ನು ಇಂಗ್ಲಿಷ್‌ಗೆ ಜಾನ್ ಸ್ಟಾಟ್ಟೊನ್ ಅವರಿ ಅನುವಾದಿಸಿದ್ದಾರೆ. ಹದಿನಾರನೇ ಶತಮಾಮದ ಕವಿ ಸುರ್‌ದಾಸ್ ಅವರು ಅಂಧರಾಗಿದ್ದರೂ, ಅವರು ರಚಿಸಿದ ಸಾಹಿತ್ಯ ಸಾರ್ವಕಾಲಿಕ ಮನ್ನಣೆಗೆ ಪಾತ್ರವಾಗಿದೆ. ಸುರ್‌ದಾಸ್ ಅವರ ಅಭಿಜಾತ ಕೃತಿ ಸುರ್ ಸಾಗರ್‌ನಲ್ಲಿ ಕವಿಯ ಕೀರ್ತನೆಗಳ ಸಂಗ್ರಹವಿದೆ. ಹಿಂದಿ ಕವಿ ಬಿಹಾರಿಲಾಲ್ ಅವರ ಸತ್‌ಸಾಯಿ ಎಂಬ ಏಳ್ನೂರು ಕವನಗಳ ಸಂಕಲನವನ್ನು ರುಪರ್ಟ್ ಸ್ನೆಲ್ ಅನುವಾದಿಸಿದ್ದಾರೆ. ಹೀಗೆ ದೇಶ-ವಿದೇಶಗಳ ಅನುವಾದಕರು ಭಾಗವಹಿಸಿರುವುದು ವಿಶೇಷ.