ಶಿರಾಳಕೊಪ್ಪದಲ್ಲಿ ಭೂಕಂಪನ
ಶಿರಾಳಕೊಪ್ಪದಲ್ಲಿ ಭೂಕಂಪನ
Vishwavani News
October 6, 2022
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿದೆ.
3:55ರ ಹೊತ್ತಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ. ಶಿರಾಳ ಕೊಪ್ಪ ಪಟ್ಟಣ ಮತ್ತು ಸುತ್ತಮುತ್ತಲೂ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂ ಕಂಪನದ ಅನುಭವವಾಗಿದೆ ಎಂದು ಜನರು ತಿಳಿಸಿದ್ದಾರೆ.
ಕಂಪನದ ಅನುಭವ ಆಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬಂದಿದ್ದು, ಕೆಲವರು ಜೋರು ಶಬ್ದವಾಯಿತು ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದವರು ಭೂಮಿ ಕಂಪನದ ಅನುಭವದಿಂದ ಆತಂಕಗೊಂಡಿದ್ದರು.
ಈ ಕುರಿತು ಮಾತನಾಡಿದ ತಹಶೀಲ್ದಾರ್ ಕವಿರಾಜ್ ಅವರು, 'ಶಿರಾಳಕೊಪ್ಪ ಪಟ್ಟಣದ ಒಂದು ಕಿಲೋ ಮೀಟರ್ ಸುತ್ತಳತೆಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಜನರು ತಿಳಿಸಿದ್ದಾರೆ. ಇದು ಭೂಕಂಪನವೋ ಅಥವಾ ಬೇರೆ ಏನಾದರು ಕಾರಣವೋ ಅನ್ನುವ ಕುರಿತು ಇನ್ನು ತಿಳಿದುಕೊಳ್ಳಬೇಕಿದೆ. ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇವೆ. ಬೆಂಗಳೂರಿನಿಂದ ಅಧಿಕೃತ ವರದಿ ಬರಬೇಕಿದೆ' ಎಂದು ತಿಳಿಸಿದರು.
ಶಿರಾಳಕೊಪ್ಪದಲ್ಲಿ ಭೂಕಂಪನ ಸಂಭವಿಸಿದೆ ಎಂದು ಮೊಬೈಲ್‌ನಲ್ಲಿನ ಸ್ಕ್ರೀನ್ ಶಾಟ್ ಹರಿದಾಡುತ್ತಿದೆ. ಶಿರಾಳಕೊಪ್ಪದಲ್ಲಿ 4.1 ತೀವ್ರತೆಯ ಭೂಕಂಪನ ಆಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ.
2019ರ ಫೆಬ್ರವರಿ 3ರಂದು ತೀರ್ಥಹಳ್ಳಿ ತಾಲೂಕು ವಿಠಲ ನಗರದಲ್ಲಿ ಭೂಕಂಪನ ಸಂಭವಿಸಿತ್ತು. ಆಗ ರಿಕ್ಟರ್ ಮಾಪನದಲ್ಲಿ 2.2 ತೀವ್ರತೆ ಭೂಮಿ ಕಂಪಿಸಿದ್ದ ಬಗ್ಗೆ ದಾಖಲಾಗಿತ್ತು. ಇನ್ನು ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸ್ಫೋಟ ಸಂಭವಿಸಿ, ಜಿಲ್ಲೆಯಾದ್ಯಂತ ಕಂಪನದ ಅನುಭವ ಉಂಟಾಗಿತ್ತು.