ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

EV charging station: ಬೆಂಗಳೂರಲ್ಲಿ ದೇಶದ ಪ್ರಥಮ ಸೌರಶಕ್ತಿ ಸೆಕೆಂಡ್ ಲೈಫ್ ಬ್ಯಾಟರಿ ಸಂಯೋಜಿತ 'ಇವಿ ಹಬ್' ಲೋಕಾರ್ಪಣೆ

EV charging station: ಬೆಸ್ಕಾಂ, ಜರ್ಮನ್ ಕಾರ್ಪೊರೇಷನ್ ಫಾರ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ (ಜಿ.ಐ.ಝಡ್.) ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಇವಿ ಚಾರ್ಜಿಂಗ್ ಹಬ್‌ನಲ್ಲಿ 23 ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ. ಈ ಸ್ಟೇಷನ್‌ನಲ್ಲಿ ಸೌರ ವಿದ್ಯುತ್ತನ್ನು ಹಳೆಯ ಕಾರ್ ಬ್ಯಾಟರಿಗಳಲ್ಲಿ ಶೇಖರಣೆ ಮಾಡಲಾಗುತ್ತದೆ. ಹಗಲಿನಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದಿಸಿ ಅದನ್ನು ಬ್ಯಾಟರಿ ವ್ಯವಸ್ಥೆಯ ಸಹಾಯದಿಂದ ದಿನದ 24 ಗಂಟೆಯೂ ಇವಿ ವಾಹನಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.

ಸೌರಶಕ್ತಿ ಸೆಕೆಂಡ್ ಲೈಫ್ ಬ್ಯಾಟರಿ ಸಂಯೋಜಿತ 'ಇವಿ ಹಬ್' ಲೋಕಾರ್ಪಣೆ

Profile Siddalinga Swamy Jun 2, 2025 7:56 PM

ಬೆಂಗಳೂರು: ವಿದ್ಯುತ್ ವಾಹನ ಮೂಲ ಸೌಕರ್ಯ ಅಭಿವೃದ್ದಿಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಸುಸ್ಥಿರ ಇಂಧನ ಬಳಕೆಯ ಮಾದರಿಯಲ್ಲೂ ನಮ್ಮದೇ ಮೊದಲ ಹೆಜ್ಜೆಯಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ (KJ George) ಹೇಳಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ಬಳಿ ಬೆಸ್ಕಾಂ ಸ್ಥಾಪಿಸಿರುವ ದೇಶದ ಪ್ರಥಮ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲೈಫ್ ಬ್ಯಾಟರಿ ಇವಿ ಚಾರ್ಜಿಂಗ್ ಕೇಂದ್ರವನ್ನು (EV charging station) ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಇವಿ ಬೇಡಿಕೆಗೆ ಅನುಕೂಲವಾಗುವಂತೆ ಚಾರ್ಜಿಂಗ್ ಕೇಂದ್ರಗಳು ಹಾಗೂ ಮೂಲ ಸೌಕರ್ಯ ಅಭಿವೃದ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದೆ. ಅಲ್ಲದೇ, ಇದಕ್ಕೆ ನಮ್ಮ ರಾಜ್ಯದ ʼಇವಿ ನೀತಿʼ ಹೆಚ್ಚಿನ ಬಲ ತುಂಬಿದೆ. ಇದೀಗ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಇವಿ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಲಾಗಿದ್ದು, ಇದರಿಂದ ಕ್ಯಾಬ್‌ ಚಾಲಕರು, ಇವಿ ಬಳಕೆ ಮಾಡುತ್ತಿರುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

KJ George

ಬೆಸ್ಕಾಂ, ಜರ್ಮನ್ ಕಾರ್ಪೊರೇಷನ್ ಫಾರ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ (ಜಿ.ಐ.ಝಡ್.) ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಇವಿ ಚಾರ್ಜಿಂಗ್ ಹಬ್‌ನಲ್ಲಿ 23 ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ. ಈ ಸ್ಟೇಷನ್‌ನಲ್ಲಿ ಸೌರ ವಿದ್ಯುತ್ತನ್ನು ಹಳೆಯ ಕಾರ್ ಬ್ಯಾಟರಿಗಳಲ್ಲಿ ಶೇಖರಣೆ ಮಾಡಲಾಗುತ್ತದೆ. ಹಗಲಿನಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದಿಸಿ ಅದನ್ನು ಬ್ಯಾಟರಿ ವ್ಯವಸ್ಥೆಯ ಸಹಾಯದಿಂದ ದಿನದ 24 ಗಂಟೆಯೂ ಇವಿ ವಾಹನಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ದೇಶದಲ್ಲೇ ವಿದ್ಯುತ್ ವಾಹನ ಮೂಲ ಸೌಕರ್ಯ ಅಭಿವೃದ್ದಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಒಟ್ಟು 5,880 ಇವಿ ಚಾರ್ಜಿಂಗ್‌ ಸ್ಟೇಷನ್‌ಗಳಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 4,462 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಈ ವರ್ಷ ಹೊಸದಾಗಿ 140 ಚಾರ್ಜರ್‌ಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಚಾರ್ಜಿಂಗ್‌ ಸ್ಟೇಷನ್‌ ವಿಶೇಷತೆಗಳೇನು?

ಇವಿ ಹಬ್‌ನ ವಿಶೇಷತೆಯನ್ನು ವಿವರಿಸಿದ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್‌, 24 ಗಂಟೆಗಳ ಕಾಲ ಇವಿ ಚಾರ್ಜಿಂಗ್‌ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್‌ ಸ್ಟೇಷನ್‌ ಇದಾಗಿದೆ. ಈ ಹಬ್‌ನಲ್ಲಿ 45 ಕಿ.ವ್ಯಾ. ಸೌರ ವಿದ್ಯುತ್ ವ್ಯವಸ್ಥೆ ಮತ್ತು 100 ಕಿ.ವ್ಯಾ.ಎಚ್. ಸೆಕೆಂಡ್-ಲೈಫ್ ಬ್ಯಾಟರಿ ಸಂಗ್ರಹಣೆ ಸಾಮರ್ಥ್ಯದೊಂದಿಗೆ ಏಕಕಾಲದಲ್ಲಿ 18 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು 5 ಸ್ಲೋ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಒಟ್ಟು 23 ಚಾರ್ಜಿಂಗ್ ಪಾಯಿಂಟ್‌ಗಳಿವೆ. ನಮ್ಮ ಬೆಸ್ಕಾಂ ಕೈಗೆಟುಕುವ ದರದಲ್ಲಿ ಇವಿ ಚಾರ್ಜಿಂಗ್‌ ಸೌಲಭ್ಯ ಒದಗಿಸುತ್ತಿದೆ. ಖಾಸಗಿಯವರ ಚಾರ್ಚಿಂಗ್‌ ದರ ನಮ್ಮ ಸ್ಟೇಷನ್‌ಗೆ ಹೋಲಿಸಿದರೆ 2-3 ಪಟ್ಟು ಹೆಚ್ಚಿದೆ ಎಂದು ಮಾಹಿತಿ ನೀಡಿದರು.

ಚಾರ್ಜ್ ಮಾಡುವುದು ಹೇಗೆ?

ಬೆಸ್ಕಾಂನ ಇವಿ ಮಿತ್ರ ಅಪ್ಲಿಕೇಷನ್‌ನಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಸ್ಥಳ, ದರ, ಲಭ್ಯವಿರುವ ಸ್ಲಾಟ್‌ಗಳು ಎಂಬ ಮಾಹಿತಿ ಪಡೆಯಬಹುದು. ಅಥವಾ ಸ್ಟೇಷನ್‌ನಲ್ಲಿರುವ ಕ್ಯೂರ್‌ಕೋಡ್‌ ಸ್ಕ್ಯಾನ್ ಮಾಡಿ, ವಾಟ್ಸಪ್‌ ಮೂಲಕವೂ ಹಣ ಪಾವತಿಸಿ ಚಾರ್ಜ್‌ ಮಾಡಬಹುದು.

Google Play Store: https://play.google.com/store/apps/details?id=com.bescom.evmithra&pcampaignid=web_share Apple Play Store:https://apps.apple.com/us/app/bescom-ev-mithra/id6633439725?uo=2

ದರ ಎಷ್ಟು?

ಎಸಿ-001-ಪ್ರತಿ ಯೂನಿಟ್‌ಗೆ 7.02 ರೂ.

ಡಿಸಿ-001-ಪ್ರತಿ ಯೂನಿಟ್‌ಗೆ 7.16 ರೂ.

ಸಿಸಿಎಸ್‌-2-ಪ್ರತಿ ಯೂನಿಟ್‌ಗೆ 7.83 ರೂ.

ಈ ಸುದ್ದಿಯನ್ನೂ ಓದಿ | HPCL Recruitment 2025: ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿಮಿಟೆಡ್‌ನಲ್ಲಿದೆ 411 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅಪ್ಲೈ ಮಾಡಿ

image

ʼಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುತ್ತಿರುವ ಕ್ಯಾಬ್‌ ಚಾಲಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಹೊಸ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಿರುವುದು ಸಂತಸದ ವಿಷಯ. ವಿಮಾನ ನಿಲ್ದಾಣದಿಂದ ನಿತ್ಯ 10,000 ಕ್ಯಾಬ್‌ಗಳು ಬೆಂಗಳೂರಿಗೆ ಓಡಾಡುತ್ತವೆ. ಈ ಪೈಕಿ ಸಾವಿರಾರು ಎಲೆಕ್ಟ್ರಿಕ್‌ ಕಾರ್‌ಗಳಿದ್ದು, ಅವುಗಳ ಚಾರ್ಚಿಂಗ್‌ಗೆ ಸರ್ಕಾರದಿಂದ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ. ದೇಶದಲ್ಲಿ ನಮ್ಮ ರಾಜ್ಯ ಇಂಥ ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ಸಂಗತಿʼ.

ಕೃಷ್ಣ ಬೈರೇಗೌಡ, ಕಂದಾಯ ಸಚಿವರು