Protest: ಕಲ್ಲೂರು ಗ್ರಾಪಂ ಮುಂದೆ ಜ.9ರಂದು ಪ್ರತಿಭಟನೆ : ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹ
Protest: ಕಲ್ಲೂರು ಗ್ರಾಪಂ ಮುಂದೆ ಜ.9ರಂದು ಪ್ರತಿಭಟನೆ : ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹ
Vishwavani News
January 6, 2025
ಗುಬ್ಬಿ: ಕಳೆದ 40 ವರ್ಷದ ಹಿಂದೆ ನಿವೇಶನ ರಹಿತರಿಗೆ ಮಂಜೂರಾದ ಭೂಮಿಯಲ್ಲಿ ಕಾನೂನು ಬದ್ದ 48 ನಿವೇಶನ ಹೊರತುಪಡಿಸಿ ಉಳಿದ ನಿವೇಶನ ಹಂಚಿಕೆ ಮಾಡಲು ವಿಳಂಬ ಅನುಸರಿಸುತ್ತಿರುವ ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜ.9 ರಂದು ಕಲ್ಲೂರು ಗ್ರಾಪಂ ಮುಂದೆ ನಡೆಸಲಾಗುವುದು ಎಂದು ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು ದಲಿತರಿಗೆ ನಿವೇಶನ ನೀಡಲು ಅಲ್ಲಿನ ಕೆಲ ಸವರ್ಣೀಯ ಗ್ರಾಮ ಪಂಚಾಯಿತಿ ಸದಸ್ಯರು ಅಡ್ಡಿಪಡಿಸಿದ್ದಾರೆ. ನಿಯಮಾನುಸಾರ ದಲಿತರಿಗೆ ನೀಡಬೇಕಾದ ನಿವೇಶನ ನೀಡಲು ಅಲ್ಲಿನ ಪಿಡಿಓ ಮಂಜುನಾಥ್ ಸಹ ಸ್ಪಂದಿಸಿಲ್ಲ. ಈ ವಿಳಂಬ ನೀತಿ ಹಾಗೂ ದಲಿತ ವಿರೋಧನೀತಿ ಖಂಡಿಸಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ರುದ್ರಪ್ರಕಾಶ್ ಮಾತನಾಡಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ನಿವೇಶನವನ್ನು ಬೇರೆ ಸಮುದಾಯಕ್ಕೆ ಹಕ್ಕುಪತ್ರ ನೀಡಿದ ಹಿಂದಿನ ಅಧ್ಯಕ್ಷರು ಪಿಡಿಓ ವಿರುದ್ಧ ಕಾನೂನು ನ್ಯಾಯಕ್ಕೆ ಮೊರೆ ಹೋಗಿದ್ದೇವೆ. ಆದರೆ ಬಡವರಿಗೆ ಅರ್ಹರಿಗೆ ನಿವೇಶನ ನೀಡುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸಿರುವುದು ಬಲಾಢ್ಯರ ಕುಮ್ಮಕ್ಕು ಎನಿಸುತ್ತಿದೆ. ಕೆಲ ಸದಸ್ಯರ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಬೇಕಾದ ಪಿಡಿಓ ಕರ್ತವ್ಯ ಲೋಪ ಕಾಣುತ್ತಿದೆ. ಮೀಸಲಿಟ್ಟ ನಿವೇಶನ ಕೂಡಲೇ ಹಂಚಿಕೆ ಮಾಡಬೇಕು. ಈ ಜೊತೆಗೆ ಎಸ್ಸಿ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿಟ್ಟ ನಿವೇಶನ ಅದಕ್ಕೆ ಎರಡು ಕೋಟಿ ನೀಡುವ ಭರವಸೆ ಶಾಸಕ ಕೃಷ್ಣಪ್ಪನವರು ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ದಲಿತರು ಇದೇ ತಿಂಗಳ 9 ರಂದು ಪ್ರತಿಭಟನೆ ನಡೆಸಲಿದ್ದಾರೆ. ಎಲ್ಲರೂ ಸಾಥ್ ನೀಡುವಂತೆ ಮನವಿ ಮಾಡಿದರು.
ದಸಂಸ ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ದಲಿತರಿಗೆ ತಾಲ್ಲೂಕಿನಲ್ಲಿ ನಿರಂತರ ದೌರ್ಜನ್ಯ ನಡೆಯುತ್ತಿದೆ. ಬದುಕು ದುಸ್ಥರ ಎನ್ನುವ ಸನ್ನಿವೇಶ ಬಂದಿದೆ. ಈ ಹಿಂದೆ ಅಭಿಷೇಕ್ ಪ್ರಕರಣ, ಪೆದ್ದನಹಳ್ಳಿ ಜೋಡಿ ಕೊಲೆ ಪ್ರಕರಣ ಹಾಗೂ ಈಚೆಗೆ ನಡೆದ ದಲಿತ ಯುವಕನ ಮೇಲೆ ಹಲ್ಲೆ ಮರ್ಮಾಂಗಕ್ಕೆ ಒದ್ದ ಪ್ರಕರಣ ಎಲ್ಲವೂ ಹತಾಶೆ ತಂದ ಸಮಯದಲ್ಲಿ ಕಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ದಲಿತರಿಗೆ ಅನ್ಯಾಯ ನಡೆಸಿದ್ದಾರೆ. ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಕಾನೂನು ಬದ್ಧವಾಗಿ ನಿವೇಶನವನ್ನು ದಲಿತರಿಗೆ ಒದಗಿಸುವ ಕೆಲಸಕ್ಕೆ ಎಲ್ಲರೂ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.
ದಸಂಸ ಮಾಜಿ ಸಂಚಾಲಕ ಪಾಂಡುರಂಗಯ್ಯ ಮಾತನಾಡಿ ಹರಿದೇವನಹಳ್ಳಿ ಸರ್ವೇ ನಂಬರ್ 40 ರಲ್ಲಿ ನಿವೇಶನಕ್ಕೆ ಹಂಚಿಕೆಯಾದ 120 ನಿವೇಶನದ ಪೈಕಿ 48 ನಿವೇಶನ ಹಕ್ಕುಪತ್ರ ನೀಡಲಾಗಿದೆ. ಹಕ್ಕುಪತ್ರ ಸಿಗದ ದಲಿತರಿಗೆ ನೀಡಬೇಕಾದ ನಿವೇಶನವನ್ನು ಸವರ್ಣನೀಯರಿಗೆ ಹಕ್ಕುಪತ್ರ ನೀಡಿ ಈಗಾಗಲೇ ಇ ಖಾತೆ ಮಾಡಲು ಮುಂದಾಗಿರುವುದು ಖಂಡನೀಯ. ದಲಿತರ ಮೇಲಿನ ಈ ದೌರ್ಜನ್ಯ ಖಂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಿಡಿಕಾರಿದರು.
ದಲಿತ ಮುಖಂಡ ಡಿ.ಮಂಜುನಾಥ್ ಮಾತನಾಡಿ 1991-92 ನೇ ಸಾಲಿನಲ್ಲಿ ಸರ್ಕಾರ ಖಾಸಗಿಯ ಜಮೀನು ಖರೀದಿಸಿ ಆಶ್ರಯ ಯೋಜನೆಯಡಿ ಹರಿದೇವನಹಳ್ಳಿ ಸನಂ.40 ಜಮೀನಿನಲ್ಲಿ 120 ನಿವೇಶನ ವಿಂಗಡಿಸಿ ಮೀಸಲಾತಿ ಅನ್ವಯ ನೀಡಲಾಗಿತ್ತು. 79 ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ಕೊಟ್ಟು ದಲಿತರಿಗೆ ಮಾತ್ರ ಹಕ್ಕುಪತ್ರ ನೀಡದೆ ಅಂದಿನಿಂದ ಕಾಲಹರಣ ಮಾಡಿದ್ದಾರೆ. ಈ ಮಧ್ಯೆ 2018-19 ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷರು, ಪಿಡಿಓ ದಲಿತರ ನಿವೇಶನವನ್ನು ಸವರ್ಣನಿಯರಿಗೆ ಹಕ್ಕುಪತ್ರವನ್ನು ಅಕ್ರಮವಾಗಿ ನೀಡಿದ್ದಾರೆ. ತಾಲ್ಲೂಕು ಪಂಚಾಯಿತಿ ಅನುಮತಿ ಇಲ್ಲದೆ ಹಂಚಿಕೆ ಮಾಡಿದ ನಿವೇಶನ ಹಕ್ಕುಪತ್ರ ವಜಾ ಮಾಡಿ ಅರ್ಹರಿಗೆ ನೀಡಲು ಆದೇಶವಿದ್ದರೂ ದಲಿತರಿಗೆ ನಿವೇಶನ ಮೊದಲು ಈಗಿನ ಪಿಡಿಓ ಹಿಂದೇಟು ಹಾಕಿದ್ದಾರೆ. ಅಲ್ಲಿನ ಕೆಲ ಸದಸ್ಯರ ಕುಮ್ಮಕ್ಕು ಕಾರಣವಾಗಿದ್ದು ಈ ದೌರ್ಜನ್ಯ ಖಂಡಿಸಿ ಮುಂದಿನ ಗುರುವಾರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಾಂತರಾಜು, ಶಿವಲಿಂಗಯ್ಯ, ಗೋವಿಂದರಾಜು, ಬಾರೆಮನೆ ವೆಂಕಟೇಶ್, ನಾರಾಯಣ್ ಇತರರು ಇದ್ದರು.