ವಚನ ಸಾಹಿತ್ಯ ಭಂಡಾರ ಹೆಚ್ಚಿಸಿದ ಡಾ.ಫ.ಗು.ಹಳಕಟ್ಟಿ ಸದಾಸ್ಮರಣೀಯರು
ವಚನ ಸಾಹಿತ್ಯ ಭಂಡಾರ ಹೆಚ್ಚಿಸಿದ ಡಾ.ಫ.ಗು.ಹಳಕಟ್ಟಿ ಸದಾಸ್ಮರಣೀಯರು
Vishwavani News
July 2, 2022
ಯಾದಗಿರಿ: ಶರಣರ ವಚನಗಳನ್ನು ಸಂಶೋಧಿಸಿ, ಸಂಗ್ರಹಿಸಿ ವಿಶ್ವಕ್ಕೆ ಪರಿಚಯಿಸಿದ ಮತ್ತು ವಚನ ಸಾಹಿತ್ಯ ಭಂಡಾರ ಹೆಚ್ಚಿಸಿದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರನ್ನು ಆಧುನಿಕ ಶ್ರೀ ಬಸವಣ್ಣರೆಂದೇ ಬಣ್ಣಿಸಬಹು ದೆಂದು ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಫ.ಗು.ಹಳಕಟ್ಟಿ ಅವರ ಜಯಂತ್ಯೋತ್ಸವ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹನ್ನೆರಡನೇಯ ಶತಮಾನದಲ್ಲಿ ಶ್ರೀ ಬಸವಣ್ಣನವರು ಶರಣರನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು. ಅದರಂತೆ ವಚನಕಾರರ ಸಾಹಿತ್ಯವನ್ನು ಇಪ್ಪತ್ತನೇಯ ಶತಮಾನದಲ್ಲಿ ಒಗ್ಗೂಡಿಸಲು ಪ್ರಯತ್ನಿಸಿದ ಡಾ.ಫ.ಗು.ಹಳಕಟ್ಟಿ ಅವರನ್ನು ಆಧುನಿಕ ಬಸವಣ್ಣರೆಂದೇ ಬಣ್ಣಿಸಬಹುದೆಂದು ಅಭಿಪ್ರಾಯಪಟ್ಟರು.
ಶರಣರ ವಚನಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಬೇಕೆಂಬ ಉದ್ದೇಶದೊಂದಿಗೆ ವಿವಿಧಕಡೆಗಳಲ್ಲಿ ಹಂಚಿ ಹೋಗಿದ್ದ ವಚನಗಳನ್ನು ಸಂಶೋಧಿಸಿ, ಸಂಗ್ರಹಿಸಿ ಸಮಾಜಕ್ಕೆ ಮತ್ತು ವಿಶ್ವಕ್ಕೆ ಪರಿಚಯಿಸಿದ್ದಾರೆ. ಹರಿಹರ ರಗಳೆ, ಆದಿಪುರಾಣ ಹಾಗೂ ವಚನ ಸಾಹಿತ್ಯದ ಸಾರವನ್ನು ಕೊಡುಗೆಯಾಗಿ ನೀಡಿದ್ದು, ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವಂತೆ ಅವರು ಕರೆ ನೀಡಿದರು.
ವಚನ ಸಂಗ್ರಹಕ್ಕಾಗಿ ಸಾಲ ಮಾಡಿ ಅನೇಕ ಕಷ್ಟಗಳ ಮಧ್ಯೆಯೂ ವಚನಗಳನ್ನು ಸಮಾಜಕ್ಕೆ ನೀಡಿದ್ದು, ಅವರ ನಿಸ್ವಾರ್ಥ ಸೇವೆ ಸ್ಮರಣೀಯವಾಗಿದೆ. ಅವರ ಗೌರವಾರ್ಥವಾಗಿ ಅವರ ಜಯಂತ್ಯೋತ್ಸವವನ್ನು ಸರಕಾರವು 'ವಚನ ಸಾಹಿತ್ಯ ಸಂರಕ್ಷಣಾ ದಿನ' ವನ್ನಾಗಿ ಆಚರಿಸುತ್ತಿರುವುದು, ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸುಭಾಷಚಂದ್ರ ಕೌಲಗಿ ಅವರು, ನಾಡಿನಾದ್ಯಂತ ಚದುರಿಹೋಗಿದ್ದ ವಚನಗಳನ್ನು ಜನರ ಮನೆಬಾಗಿಲಿಗೆ ಹೋಗಿ ಅವರ ಮನವೊಲಿಸಿ ಹರಸಾಹಸ ಪಟ್ಟು ಸಂಗ್ರಹಿಸಿ, ಪರಿಷ್ಕಿರಿಸಿ ಸಮಾಜಕ್ಕೆ ಮತ್ತು ವಿಶ್ವಕ್ಕೆ ಪರಿಚಯಿಸಿದ್ದು, ಇವೆಲ್ಲವು ಸಮಾಜಕ್ಕೆ ದಾರಿ ದೀಪವಾಗಿವೆ.
ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಭೌದ್ದಿಕವಾಗಿ ಸಮಾಜ ಸಬಲರಾಗಬೇಕೆಂಬ ಉದ್ದೇಶದಿಂದ ವಚನಗಳನ್ನು ಪರಿ ಚಯಿಸಿದ್ದು, ಅವರ ಗೌರವಾರ್ಥವಾಗಿ ಸರಕಾರ ವಚನ ಸಂರಕ್ಷಣಾ ದಿನವನ್ನು ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದು, ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಕಾರ್ಯಕ್ರಮ ಉದ್ಘಾಟಿಸಿದರು. ಗಣ್ಯರು ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಅಖಿಲ ಭಾರತ ಮಹಾಸಭಾ ಅಧ್ಯಕ್ಷ ಸೋಮಶೇಖರ ಮಣ್ಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕಿ ನಿರ್ದೇಶಕ ಉತ್ತರದೇವಿ, ಅಯ್ಯಣ್ಣ ಹುಂಡೇಕಾರ, ಅವಿನಾಶ ಜಗನ್ನಾಥ, ಬಂಡೆಪ್ಪ ಆಕಳ, ಬಸವಂತರಾಯಗೌಡ, ನೂರಂದಪ್ಪ ಲೇವಡಿ, ಬಸರಡ್ಡಿ, ಸುನೀಲ ಕಡೇಚೂರ, ಸಂಗಮೇಶ ಗಾಳಗಿ, ವೀರಭದ್ರಯ್ಯಸ್ವಾಮಿ, ವಿನೋದ ಗಂಗಾ, ಬಸಣ್ಣಗೌಡ ಕನ್ಯಾಕೊಳೂರ, ದೇವರಾಜ ಗೌಡ ಬೆಳಗೇರಿ ಇನ್ನಿತರರು ಉಪಸ್ಥಿತರಿದ್ದರು. ಪದವಿ ಕಾಲೇಜ ಉಪನ್ಯಾಸಕ ಸಿದ್ದರಾವ್‌ರಡ್ಡಿ ಕಾರ್ಯಕ್ರಮ ನಿರ್ವಹಿಸಿದರು.