ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

yaduveer wadiyar: ಯದುವೀರ ಒಡೆಯರ್​ ಮಗುವಿಗೆ ನಾಮಕರಣ, ಮೈಸೂರಿನ 2ನೇ ಯುವರಾಜನ ಹೆಸರು ಹೀಗಿದೆ!

ಅರಮನೆಯ ಪುರೋಹಿತರು ವಿವಿಧ ಶಾಸ್ತ್ರ ಹಾಗೂ ಧಾರ್ಮಿಕ ಕಾರ್ಯಗಳ ಬಳಿಕ, ಗುರು ಹಿರಿಯರು ಸೂಚಿಸಿದಂತೆ ಯದುವೀರ್​​ ಹಾಗೂ ತ್ರಿಷಿಕಾ ಕುಮಾರಿ ಅವರ ಎರಡನೇ ಪುತ್ರನಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ಕಿವಿಯಲ್ಲಿ ಮೂರು ಬಾರಿ ಹೇಳುವ ಮೂಲಕ ನಾಮಕರಣ ಮಾಡಲಾಯಿತು.

ಯದುವೀರ ಒಡೆಯರ್​ ಮಗುವಿಗೆ ನಾಮಕರಣ, ಮೈಸೂರಿನ 2ನೇ ಯುವರಾಜನ ಹೆಸರು ಹೀಗಿದೆ!

ಯದುವೀರ್-‌ ತ್ರಿಶಿಕಾ ದಂಪತಿ ಎರಡನೇ ಮಗನ ನಾಮಕರಣ

ಹರೀಶ್‌ ಕೇರ ಹರೀಶ್‌ ಕೇರ Feb 24, 2025 3:11 PM

ಮೈಸೂರು: ಮೈಸೂರು ಸಂಸದ (Mysuru MP) ಹಾಗೂ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Wadiyar) ಹಾಗೂ ತ್ರಿಷಿಕಾ ಕುಮಾರಿ ಒಡೆಯರ್‌ (Trishika Kumari Devi) ಅವರ ಎರಡನೇ ಗಂಡು ಮಗುವಿನ (Second son) ನಾಮಕರಣ ಶಾಸ್ತ್ರ (Naming ceremony) ಅರಮನೆಯ (mysuru palace) ಕನ್ನಡಿ ತೊಟ್ಟಿಯಲ್ಲಿ ಫೆಬ್ರವರಿ 19ರ ಬುಧವಾರ ನೆರವೇರಿದೆ. ಯದುವಂಶದ ಪರಂಪರೆಯಂತೆ ಎರಡನೇ ಮಗುವಿಗೆ ʼಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ʼ ಎಂದು ನಾಮಕರಣ ಮಾಡಲಾಗಿದೆ.

ಮೈಸೂರು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ನಾಮಕರಣ ಶಾಸ್ತ್ರ ಕಾರ್ಯಕ್ರಮ ನಡೆಯಿತು. ಅರಮನೆಯ ಪುರೋಹಿತರು ವಿವಿಧ ಶಾಸ್ತ್ರ ಹಾಗೂ ಧಾರ್ಮಿಕ ಕಾರ್ಯಗಳ ಬಳಿಕ, ಗುರು ಹಿರಿಯರು ಸೂಚಿಸಿದಂತೆ ಯದುವೀರ್​​ ಹಾಗೂ ತ್ರಿಷಿಕಾ ಕುಮಾರಿ ಅವರ ಎರಡನೇ ಪುತ್ರನಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ಕಿವಿಯಲ್ಲಿ ಮೂರು ಬಾರಿ ಹೇಳುವ ಮೂಲಕ ನಾಮಕರಣ ಮಾಡಲಾಯಿತು.

ನಾಮಕರಣ ಶಾಸ್ತ್ರ ರಾಜವಂಶಸ್ಥರ ಖಾಸಗಿ ಕಾರ್ಯಕ್ರಮವಾಗಿದ್ದು, ಕೆಲವೇ ಕೆಲವು ಮಂದಿ ಸಂಬಂಧಿಕರಿಗೆ ಮಾತ್ರ ಆಹ್ವಾನವಿತ್ತು. ಬಿಗಿ ಭದ್ರತೆಯಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಅರಮನೆ ಸಿಬ್ಬಂದಿಗಳಿಗೂ ಅವಕಾಶವಿರಲಿಲ್ಲ.

2024ರ ಅ. 11 ರಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಆಯುಧ ಪೂಜೆ ನೇರವೇರಿಸಿ ಕಂಕಣ ವಿಸರ್ಜನೆ ಮಾಡಿದ್ದರು. ಅಂದೇ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ದ್ವಿತೀಯ ಪುತ್ರನಿಗೆ ನಾಮಕರಣ ಮಾಡಲಾಗಿದೆ. ಮೊದಲ ಪುತ್ರನಿಗೆ ಆದ್ಯವೀರ ಒಡೆಯರ್ ಎಂದು ನಾಮಕರಣ ಮಾಡಲಾಗಿತ್ತು.

ಈ ಹೆಸರಿನ ಅರ್ಥ ಏನು?

ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಹೆಸರಿನ ಮಹತ್ವದ ಬಗ್ಗೆ ಪುರೋಹಿತರು ವಿಶ್ಲೇಷಣೆ ಮಾಡಿದ್ದಾರೆ. ಹೆಸರನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿ, ಅರ್ಥ ವಿವರಿಸಲಾಗಿದೆ. ಯುಗ ಎಂದರೆ ಯುಗದ ಅಧಿಪತಿ. ಸನಾತನ ಧರ್ಮದಲ್ಲಿ ನಾಲ್ಕು ಯುಗಗಳ ಉಲ್ಲೇಖವಿದೆ. ಅವುಗಳು ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ. ಅಧ್ಯಕ್ಷ ಪದದ ಅರ್ಥ ಸಮರ್ಥ, ತಜ್ಞ, ಕೌಶಲ್ಯ ಅಥವಾ ಪ್ರಾಮಾಣಿಕ ಎಂಬ ಅರ್ಥ ಬರುತ್ತದೆ. ಹಾಗಾಗಿ ಒಂದು ಗುಂಪಿನ ನಾಯಕ, ಅಧ್ಯಕ್ಷ ಎಂತಲೂ ವಿಶ್ಲೇಷಿಸಲಾಗಿದೆ.

ಕೃಷ್ಣ ಎಂದರೆ ಕಪ್ಪು ಅಥವಾ 'ಸರ್ವ ಆಕರ್ಷಕ' ಎಂದರ್ಥ. ಈ ಹೆಸರು ಸಂಸ್ಕ್ರತ ಪದ ಕೃಷ್ಣದಿಂದ ಬಂದಿದೆ. ಇದನ್ನು ಹೆಚ್ಚಾಗಿ ಕೃಷ್ಣ ದೇವರಿಗೆ ಭಕ್ತಿಯ ಇತಿಹಾಸ ಹೊಂದಿರುವ ಕುಟುಂಬದಲ್ಲಿ ಜನಿಸಿದ ಹುಡುಗರಿಗೆ ಹೆಸರಿಡಲಾಗುತ್ತದೆ. ಕೃಷ್ಣ ಹೆಸರಿನ ಮಗುವನ್ನು ದೇವರಂತೆ. ದಯೆ ಮತ್ತು ಕರುಣಾಮಯಿ ವ್ಯಕ್ತಿಯಾಗಿ ಬೆಳೆಯುವ ಭರವಸೆಯನ್ನು ಪ್ರತಿಬಿಂಬಿಸುತ್ತದೆ. ಒಡೆಯರ್ ಎಂದರೆ ದೊರೆಗಳು, ಯದುವಂಶ ಅಥವಾ ಯಾದವ ವಂಶಕ್ಕೆ ಸೇರಿದವರು. ಕೃಷ್ಣರಾಜ ಎಂಬುದು ಈ ಹಿಂದಿನ ಜನಪ್ರಿಯ ದೊರೆಗಳ ಹೆಸರು ಕೂಡ ಹೌದು.

ಇದನ್ನೂ ಓದಿ: Mysore News: ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ- ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್