Bomb Threat: ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ಕೆನಡಾ ಪ್ರಜೆಯ ಬಂಧನ
ಉತ್ತರ ಪ್ರದೇಶದ ವಾರಣಾಸಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಕೆನಡಾ ಪ್ರಜೆಯೊಬ್ಬ ಬಾಂಬ್ ಬೆದರಿಕೆ ಹಾಕಿದ್ದು, ಆತನನ್ನು ಬಂಧಿಸಲಾಗಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು ಹೆಚ್ಚಿನ ವಿಚಾರಣೆಗಾಗಿ ಕೆನಡಾ ಪ್ರಜೆಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆತ ತಾನು ವಿಮಾನದಲ್ಲಿ ಬಾಂಬ್ ಹೊತ್ತೊಯ್ಯುತ್ತಿರುವುದಾಗಿ ಹೇಳಿ ಪ್ರಯಾಣಿಕರಲ್ಲಿ ಬೆದರಿಕೆ ಮೂಡಿಸಿದ್ದ.


ಲಖನೌ: ಉತ್ತರ ಪ್ರದೇಶದ ವಾರಣಾಸಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ (IndiGo Airlines) ವಿಮಾನಕ್ಕೆ ಕೆನಡಾ ಪ್ರಜೆಯೊಬ್ಬ ಹುಸಿ ಬಾಂಬ್ ಬೆದರಿಕೆ (Bomb Threat) ಹಾಕಿದ್ದು, ಆತನನ್ನು ಬಂಧಿಸಲಾಗಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು ಹೆಚ್ಚಿನ ವಿಚಾರಣೆಗಾಗಿ ಕೆನಡಾ ಪ್ರಜೆಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆತ ತಾನು ವಿಮಾನದಲ್ಲಿ ಬಾಂಬ್ ಹೊತ್ತೊಯ್ಯುತ್ತಿರುವುದಾಗಿ ಹೇಳಿ ಪ್ರಯಾಣಿಕರಲ್ಲಿ ಬೆದರಿಕೆ ಮೂಡಿಸಿದ್ದ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಇಂಡಿಗೋ ಸಿಬ್ಬಂದಿ ವಾಯು ಸಂಚಾರ ನಿಯಂತ್ರಣಕ್ಕೆ (ATC) ತಿಳಿಸಿದ್ದಾರೆ. ಬಳಿಕ ವಿಮಾನವನ್ನು ತುರ್ತು ಲ್ಯಾಂಡ್ ಮಾಡಿ ಆತನನ್ನು ಬಂಧಿಸಲಾಗಿದೆ.
ಬೆಂಗಳೂರಿಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಹೊತ್ತೊಯ್ಯುತ್ತಿರುವುದಾಗಿ ಹೇಳಿ ಪ್ರಯಾಣಿಕರಲ್ಲಿ ಭೀತಿ ಮೂಡಿಸಿದ್ದಕ್ಕಾಗಿ ಕೆನಡಾ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಶನಿವಾರ ರಾತ್ರಿ ಆರೋಪಿಯು ತಾನು ಬಾಂಬ್ ಹೊತ್ತೊಯ್ಯುತ್ತಿರುವುದಾಗಿ ಸಹ ಪ್ರಯಾಣಿಕರಿಗೆ ತಿಳಿಸಿದ್ದ. ಇದರಿಂದ ಇಂಡಿಗೋ ಪ್ರಯಾಣಿಕರು ಭಯಭೀತರಾಗಿದ್ದರು.
ಮಾಹಿತಿ ತಿಳಿದ ತಕ್ಷಣ ಇಂಡಿಗೋ ಸಿಬ್ಬಂದಿ ವಾಯು ಸಂಚಾರ ನಿಯಂತ್ರಣಕ್ಕೆ (ಎಟಿಸಿ) ತಿಳಿಸಿದ್ದು, ಇದರಿಂದ ವಿಮಾನವನ್ನು ಸಂಪೂರ್ಣ ಪರಿಶೀಲನೆ ನಡೆಸಲು ಐಸೋಲೇಷನ್ ಬೇಗೆ ಸ್ಥಳಾಂತರಿಸಲಾಯಿತು. ಇದು ಸುಳ್ಳು ಬೆದರಿಕೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ತಿಳಿಸಿದ್ದಾರೆ.
ವಿಮಾನವನ್ನು ಸ್ಟ್ಯಾಂಡರ್ಡ್ ಭದ್ರತಾ ಪ್ರೋಟೋಕಾಲ್‌ಗಳ ಪ್ರಕಾರ ನೆಲಕ್ಕೆ ಇಳಿಸಿ ತನಿಖೆ ನಡೆಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿವರವಾದ ತನಿಖೆಯೂ ನಡೆಯುತ್ತಿದೆ. ಭದ್ರತಾ ಸಂಸ್ಥೆಗಳಿಂದ ಅನುಮತಿ ಪಡೆದ ಅತರ ವಿಮಾನ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಿತು.
ಈ ಕುರಿತು ಮಾಹಿತಿ ನೀಡಿರುವ ವಾರಣಾಸಿಯ ಗೋಮತಿ ವಲಯದ ಡಿಸಿಪಿ ಆಕಾಶ್ ಪಟೇಲ್, ಪ್ರಕರಣಕ್ಕೆ ಸಂಬಂಧಿಸಿ ಕೆನಡಾ ನಾಗರಿಕ ನಿಶಾಂತ್ ಎಂಬಾತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಭದ್ರತಾ ಸಂಸ್ಥೆಗಳು ಆತನ ವಿಚಾರಣೆ ನಡೆಸಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ವಿಳಂಬಗೊಳಿಸಲು ಆತ ಸುಳ್ಳು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ಸೂಕ್ತ ವಿಭಾಗಗಳ ಅಡಿಯಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಕೆನಡಾ ಹೈ ಕಮಿಷನ್‌ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ
ಈ ಮೊದಲು ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ರಾಜ್ಯ ರಾಜಧಾನಿಯ ಹಲವಾರು ಹೊಟೇಲ್‌ಗಳಿಗೆ ಇದೇ ರೀತಿಯ ಬೆದರಿಕೆ ಬಂದಿದ್ದು ಬಳಿಕ ಈ ಘಟನೆ ನಡೆದಿದೆ.
ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿದೆ. ಎಲ್ಲ ಟರ್ಮಿನಲ್‌ಗಳ ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ತಿಳಿಸಿದ್ದಾರೆ.
ಇದನ್ನೂ ಓದಿ: Pakistani Nationals: ದಿಲ್ಲಿಯಲ್ಲಿರುವ 5,000 ಪಾಕಿಸ್ತಾನಿ ಪ್ರಜೆಗಳಿಗೆ ದೇಶ ಬಿಡಲು ಆದೇಶ
ಸುಳ್ಳು ಬೆದರಿಕೆಗಳು
ದೇಶಾದ್ಯಂತ ವಿಮಾನಯಾನ ಸಂಸ್ಥೆಗಳು 2024ರಲ್ಲಿ ಒಟ್ಟು 728 ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿ 13 ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ದತ್ತಾಂಶದ ಪ್ರಕಾರ ಇಂಡಿಗೋಗೆ ಗರಿಷ್ಠ ಬಾಂಬ್ ವಂಚನೆ ಕರೆಗಳು ಬಂದಿವೆ. ಇದು 216 ಕರೆಗಳನ್ನು ಸ್ವೀಕರಿಸಿವೆ. ಏರ್ ಇಂಡಿಯಾ 179, ವಿಸ್ತಾರಾ 153, ಆಕಾಶ ಏರ್ 72, ಸ್ಪೈಸ್‌ಜೆಟ್ 35, ಅಲೈಯನ್ಸ್ ಏರ್ 26, ಏರ್ ಇಂಡಿಯಾ ಎಕ್ಸ್‌ಪ್ರೆಸ್ 19, ಮತ್ತು ಸ್ಟಾರ್ ಏರ್ 5 ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಕಳೆದ ಫೆಬ್ರವರಿಯಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದರು.