Operation Sindoor: ಸೇನಾ ಕೇಂದ್ರ ನೆಲೆಯನ್ನೇ ಸ್ಥಳಾಂತರಿಸಲು ಮುಂದಾದ ಪಾಕ್
Operation Sindoor: ಪಾಕಿಸ್ತಾನದ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನದ ಡ್ರೋನ್ ಯುದ್ಧ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿತ್ತು. ಇದು ಇಸ್ಲಾಮಾಬಾದ್‌ಗೂ ಹತ್ತಿರದಲ್ಲಿದೆ. ಅದರ ಮೇಲೆ ದಾಳಿ ಮಾಡುವ ಮೂಲಕ ದಾಳಿ ನಡೆಸುವ ಪಾಕಿಸ್ತಾನದ ಸಾಮರ್ಥ್ಯವನ್ನೇ ಭಾರತ ಕೆಡಹಿತ್ತು.

ದಾಳಿಗೊಳಗಾದ ನೂರ್ ಖಾನ್ ವಾಯುನೆಲೆ

ನವದೆಹಲಿ: ಆಪರೇಶನ್ ಸಿಂದೂರದ (Operatin Sindoor) ಪರಿಣಾಮ ಬೆಚ್ಚಿಬಿದ್ದಿರುವ ಪಾಕಿಸ್ತಾನ, ಇದೀಗ ತನ್ನ ಸೈನ್ಯದ ಜನರಲ್ ಹೆಡ್‌ಕ್ವಾರ್ಟರ್ಸ್ (GHQ) ಅನ್ನು ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದೆ ಎಂದು ದೇಶದ ಗುಪ್ತಚರ ಮೂಲಗಳು ತಿಳಿಸಿವೆ. ರಾವಲ್ಪಿಂಡಿಯಲ್ಲಿರುವ ಸೇನಾ ಮುಖ್ಯ ನೆಲೆಯ ಮೇಲೆ ಭಾರತೀಯ ಸೇನೆ ನಡೆಸಿದ (India Pakistan war news) ಕ್ಷಿಪಣಿ ದಾಳಿ ಪಾಕಿಸ್ತಾನ ಸೇನೆಯನ್ನು ಕಂಗೆಡಿಸಿದೆ. ಭಾರತದ ಕ್ಷಿಪಣಿಗಳಿಗೆ ಸುಲಭವಾಗಿ ಎಟುಕಲಾಗದಷ್ಟು ದೂರದಲ್ಲಿ ಇದನ್ನು ಸ್ಥಾಪಿಸುವ ಬಗ್ಗೆ ಪಾಕ್ ಯೋಚಿಸುತ್ತಿದೆ.
ರಾವಲ್ಪಿಂಡಿಯ ಸುತ್ತಮುತ್ತಲಿನ ಚಕ್ಲಾಲಾದಲ್ಲಿ ಅಲ್ಲಿನ ಜಂಟಿ ಸಿಬ್ಬಂದಿ ಪ್ರಧಾನ ಕಚೇರಿ, ಪಾಕಿಸ್ತಾನ ಸೇನೆಯ ನೇರ ವರದಿ ಮತ್ತು ಕಮಾಂಡ್ ಪೋಸ್ಟ್ ಹಾಗೂ ನೂರ್ ಖಾನ್ ವಾಯುನೆಲೆಗಳು ಇವೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಭಾರತದ ಏರ್ ಮಾರ್ಷಲ್ ಎಕೆ ಭಾರ್ತಿ, ಚಕ್ಲಾಲಾ ವಾಯುನೆಲೆ (ನೂರ್ ಖಾನ್) ಸೇರಿದಂತೆ ಹಲವಾರು ಸ್ಥಳಗಳು ಭಾರತದ ದಾಳಿಯಲ್ಲಿ ಘಾಸಿಗೊಂಡುದನ್ನು ಚಿತ್ರಗಳ ಮೂಲಕ ತೋರಿಸಿದರು.
ರಾವಲ್ಪಿಂಡಿಯ ನೂರ್ ಖಾನ್ ನೆಲೆಯು ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿಯ ಪಕ್ಕದಲ್ಲಿದೆ. ಇದು ಇಸ್ಲಾಮಾಬಾದ್‌ಗೆ ಹತ್ತಿರದಲ್ಲಿದೆ ಮತ್ತು ಇದನ್ನು ಹೆಚ್ಚಾಗಿ ವಿಐಪಿ ಓಡಾಟ ಮತ್ತು ಮಿಲಿಟರಿ ಲಾಜಿಸ್ಟಿಕ್ಸ್‌ಗಾಗಿ ಬಳಸಲಾಗುತ್ತದೆ. ಇದನ್ನು ಧ್ವಂಸಗೊಳಿಸಿದ ಭಾರತದ ನಡೆ, ಸಂಘರ್ಷದ ಸಮಯದಲ್ಲಿ ಪಾಕಿಸ್ತಾನ ವಾಯುಪಡೆ (ಪಿಎಎಫ್) ನಾಯಕತ್ವ ಮತ್ತು ಅದರ ಕಾರ್ಯಾಚರಣೆಯ ಘಟಕಗಳ ನಡುವಿನ ನಿರ್ಣಾಯಕ ಸಂಪರ್ಕಗಳನ್ನು ಕಡಿದುಹಾಕಿತು ಎಂದು ಮೂಲಗಳು ತಿಳಿಸಿವೆ. ಇದು ಸಾಬ್ ಎರಿಯೇ ವಾಯುಗಾಮಿ ಅಲರ್ಟ್ ಸಿಸ್ಟಮ್, ಸಿ-130 ಸಾಗಣೆದಾರರು ಮತ್ತು ಐಎಲ್ -78 ಇಂಧನ ತುಂಬುವ ವಿಮಾನಗಳಂತಹ ಪ್ರಮುಖ ಉಪಕರಣಗಳನ್ನು ಹೊಂದಿದೆ. ಈ ವ್ಯವಸ್ಥೆಗಳು ಕಣ್ಗಾವಲು, ಲಾಜಿಸ್ಟಿಕ್ಸ್ ಮತ್ತು ವೈಮಾನಿಕ ಸಮನ್ವಯಕ್ಕೆ, ವಿಶೇಷವಾಗಿ ಗಡಿಯಾಚೆಗಿನ ಕಾರ್ಯಾಚರಣೆಗಳಲ್ಲಿ ಅತ್ಯಗತ್ಯ. ಈ ನೆಲೆಯು ಪಾಕಿಸ್ತಾನದ ಡ್ರೋನ್ ಯುದ್ಧ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿತ್ತು. ಅದರ ಮೇಲೆ ದಾಳಿ ಮಾಡುವ ಮೂಲಕ ದಾಳಿ ನಡೆಸುವ ಪಾಕಿಸ್ತಾನದ ಸಾಮರ್ಥ್ಯವನ್ನೇ ಭಾರತ ಕೆಡಹಿತ್ತು.
ನೂರ್ ಖಾನ್ ವಾಯುನೆಲೆಯ ಮೇಲೆ ಭಾರತೀಯ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಸ್ಥಳಾಂತರದ ಬಗ್ಗೆ ಚರ್ಚೆಗೆ ಕಾರಣವಾಗಿವೆ. "ರಾವಲ್ಪಿಂಡಿಯಲ್ಲಿ ಭಾರತೀಯ ಡ್ರೋನ್‌ಗಳ ಆಳವಾದ ದಾಳಿಯು ಅಲ್ಲಿ ದೊಡ್ಡ ಆಘಾತವನ್ನುಂಟುಮಾಡಿದೆ. ನಾಯಕತ್ವ ಮತ್ತು ಮಿಲಿಟರಿ ನೆಲೆಗಳನ್ನು ಒಂದು ದುರ್ಬಲ ಸ್ಥಳದಲ್ಲಿ ಕೇಂದ್ರೀಕರಿಸುವುದನ್ನು ತಪ್ಪಿಸಲು, ಸೇನೆಯು ಚೀನಾ ಸರಬರಾಜು ಮಾಡಿದ HQ-9 ಮತ್ತು LY-80 ವ್ಯವಸ್ಥೆಗಳನ್ನು ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದೆ" ಎಂದು ಮೂಲಗಳು ತಿಳಿಸಿವೆ.
ಭಾರತೀಯ ಡ್ರೋನ್‌ಗಳು ಕಡಿಮೆ ಎತ್ತರದ ಮಾರ್ಗಗಳಲ್ಲಿ ಹಾರಾಟ ನಡೆಸುವ ಮೂಲಕ ಅಥವಾ ರಹಸ್ಯ ತಂತ್ರಜ್ಞಾನವನ್ನು ಬಳಸುವ ಮೂಲಕ ಪತ್ತೆಹಚ್ಚುವಿಕೆಯನ್ನು ತಪ್ಪಿಸಿಕೊಂಡವು ಎಂದು ವರದಿಯಾಗಿದೆ. ಇದಕ್ಕೂ ಮೊದಲು, ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ದಾಳಿಯ ಸಮಯದಲ್ಲಿ GHQ ಬಂಕರ್‌ಗೆ ಸ್ಥಳಾಂತರಿಸಿದ ಬಗ್ಗೆ ಸಿಎನ್‌ಎನ್ ವರದಿ ಮಾಡಿದೆ. "ಬಲೂಚಿಸ್ತಾನ ಅಥವಾ ಖೈಬರ್ ಪಖ್ತುಂಖ್ವಾದ ಪರ್ವತಗಳಂತಹ ಭೌಗೋಳಿಕ ರಕ್ಷಣೆಯನ್ನು ಹೊಂದಿರುವ ಕಡೆಗೆ ಅದು ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ" ಎಂದು ಮೂಲಗಳು ತಿಳಿಸಿವೆ.
ರಾವಲ್ಪಿಂಡಿಯಲ್ಲಿ ಈಗಿರುವ GHQ ಜನನಿಬಿಡ ನಗರ ಪ್ರದೇಶದಲ್ಲಿದೆ. ಇದಕ್ಕೆ ಪರ್ವತಗಳು ಅಥವಾ ಕಾಡುಗಳಂತಹ ನೈಸರ್ಗಿಕ ಭೌಗೋಳಿಕ ರಕ್ಷಣೆಗಳಿಲ್ಲ. ಇಸ್ಲಾಮಾಬಾದ್‌ಗೆ (10 ಕಿಮೀ) ಹತ್ತಿರವಿರುವ ಕಾರಣ ಇದು ಹೆಚ್ಚಿನ ಮೌಲ್ಯದ ಗುರಿಯಾಗಿದೆ. ಈ ನೆಲೆಯು ಮುನೀರ್ ಸೇರಿದಂತೆ ಪಾಕಿಸ್ತಾನದ ಉನ್ನತ ಮಿಲಿಟರಿ ನಾಯಕತ್ವವನ್ನು ಹೊಂದಿದೆ. ಇದು ಪರಮಾಣು ಕಮಾಂಡ್, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಂತಹ ನಿರ್ಣಾಯಕ ಕಾರ್ಯಾಚರಣೆಗಳನ್ನು ಸಹ ಸಂಯೋಜಿಸುತ್ತದೆ.
ನೂರ್ ಖಾನ್ ಖಾನ್ ವಾಯುನೆಲೆಯ ದಾಳಿಯ ಸಮಯದಲ್ಲಿ, ಭಾರತೀಯ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಪಾಕಿಸ್ತಾನದ ವಾಯು ರಕ್ಷಣಾ ರಾಡಾರ್‌ಗಳು ಮತ್ತು ಚೀನಾದ HQ-9 ವ್ಯವಸ್ಥೆಗಳ ಕಣ್ತಪ್ಪಿಸಿವೆ. ಭಾರತೀಯ ಸೇನೆಯು ನೂರ್ ಖಾನ್ ನೆಲೆಯ ಬಳಿ ಡ್ರೋನ್‌ಗಳನ್ನು ಕಳುಹಿಸುವ ಮೂಲಕ ಎಚ್ಚರಿಕೆ ನೀಡಿದೆ. ಇದು ಎರಡೂ ದೇಶಗಳ ರಾಡಾರ್ ವ್ಯಾಪ್ತಿ ಮತ್ತು ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯಗಳಲ್ಲಿನ ಅಂತರಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಭಾರತೀಯ ಸರ್ಕಾರಿ ಮೂಲಗಳು ಹೇಳುವಂತೆ, ಪಾಕ್‌ನ ಜಿಎಚ್‌ಕ್ಯೂ ಸ್ಥಳಾಂತರ ಅದರ ಹತಾಶೆಯನ್ನು ಸೂಚಿಸಿದೆ. ಇದು ಮಿಲಿಟರಿಯ ವರ್ಚಸ್ಸನ್ನು ಹಾಳು ಮಾಡಲಿದೆ. "ಜಿಎಚ್‌ಕ್ಯೂನ ಕಮಾಂಡ್-ಅಂಡ್-ಕಂಟ್ರೋಲ್ ವ್ಯವಸ್ಥೆಗಳನ್ನು ಸ್ಥಳಾಂತರಿಸಲು ಹಲವು ವರ್ಷಗಳು ಮತ್ತು ಶತಕೋಟಿ ಡಾಲರ್‌ಗಳು ಬೇಕಾಗಬಹುದು. ಸಾಲದ ಹೊರೆಯಿಂದ ಬಳಲುತ್ತಿರುವ ಪಾಕ್‌ನ ಆರ್ಥಿಕತೆಗೆ ಇದು ಒಂದು ಸವಾಲಾಗಲಿದೆ ಎಂದು ಭಾರತೀಯ ಸರ್ಕಾರಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Operation Sindoor: ಭಾರತ- ಪಾಕ್ ಸೇನಾ ಜನರಲ್‌ಗಳ ಸಭೆ; ಗಡಿಯಲ್ಲಿ ಸೇನಾಪಡೆ ಕಡಿತಕ್ಕೆ ಒಪ್ಪಿಗೆ