Tahawwur Rana: ಮುಂಬೈ ದಾಳಿಯಲ್ಲಿ ತಹವ್ವುರ್ ರಾಣಾ ಪಾತ್ರ ಬೆಳಕಿಗೆ ಬಂದಿದ್ದು ಹೇಗೆ?
Tahawwur Rana: ಮುಂಬೈ ತಾಜ್ ಹೊಟೇಲ್ ಮೇಲಿನ ದಾಳಿಯಲ್ಲಿ ತಹವ್ವುರ್ ಹುಸೇನ್ ರಾಣಾ ಭಾಗಿಯಾಗಿರುವುದು ಆತನ ಬಾಲ್ಯದ ಸ್ನೇಹಿತ ಮತ್ತು ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿಯ ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿತ್ತು. ಇದು ನಡೆದಿದ್ದು 2016 ರಲ್ಲಿ.


ನವದೆಹಲಿ: ಮುಂಬೈ (26/11 Mumbai Terror attack) ತಾಜ್ ಹೊಟೇಲ್ ಮೇಲಿನ ದಾಳಿಯಲ್ಲಿ ತಹವ್ವುರ್ ರಾಣಾ (Tahawwur Rana) ಭಾಗಿಯಾಗಿರುವುದು ಆತನ ಬಾಲ್ಯದ ಸ್ನೇಹಿತ ಮತ್ತು ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿಯ (David Coleman Headley) ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿತ್ತು. ಇದು ನಡೆದಿದ್ದು 2016 ರಲ್ಲಿ. ಈ ಸಂದರ್ಭದಲ್ಲಿ 26/11ರ ಮುಂಬೈ ಭಯೋತ್ಪಾದಕ ದಾಳಿಯ ವಿಚಾರಣೆಗಾಗಿ ಅಮೆರಿಕದ ಗೌಪ್ಯ ಸ್ಥಳದಿಂದ ಹೆಡ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈನ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಮತ್ತು ವಕೀಲ ವಹಾಬ್ ಖಾನ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದನು.
ರಾಣಾನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಹೆಡ್ಲಿ ತನ್ನ ಚಟುವಟಿಕೆಗಳಿಗೆ ಮುಂಬೈನಲ್ಲಿ ಕಚೇರಿ ತೆರೆಯಲು ರಾಣಾ ಸಹಾಯ ಪಡೆದಿರುವುದಾಗಿ ವಿಚಾರಣೆ ವೇಳೆ ಹೇಳಿದ್ದ. ರಾಷ್ಟ್ರೀಯ ತನಿಖಾ ಸಂಸ್ಥೆಯ ಆರೋಪಪಟ್ಟಿಯ ಪ್ರಕಾರ ಡೇವಿಡ್ ಹೆಡ್ಲಿ ಮತ್ತು ಸಂಚಿನಲ್ಲಿ ಭಾಗಿಯಾಗಿರುವ ಇತರರಿಗೆ ರಾಣಾ ಮಾರ್ಗದರ್ಶನ ಮಾಡಿರುವುದು ಮತ್ತು ಹಣಕಾಸು ಸಹಾಯ ನೀಡಿರುವುದಾಗಿ ತಿಳಿದುಬಂದಿದೆ.
ರಾಣಾಗೆ ಅಮೆರಿಕದಲ್ಲಿ ಶಿಕ್ಷೆ
ಮುಂಬೈ ದಾಳಿಯ ಸಂಚನ್ನು ಪಾಕಿಸ್ತಾನದಲ್ಲಿ ರೂಪಿಸಿದ್ದು, ಇದರಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಕೈವಾಡ ಇರುವುದು ದೃಢಪಟ್ಟಿದೆ. ಈ ಸಂಘಟನೆ ಜೊತೆ ಸಂಪರ್ಕ ಹೊಂದಿರುವುದಕ್ಕೆ ರಾಣಾಗೆ ಈಗಾಗಲೇ ಅಮೆರಿಕದಲ್ಲಿ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಮುದ್ರಿಸಿದ ಡ್ಯಾನಿಶ್ ಪತ್ರಿಕಾ ಕಚೇರಿ ಮೇಲೆ ದಾಳಿಗೆ ಸಂಚು ರೂಪಿಸಲು ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಅಮೆರಿಕದ ನ್ಯಾಯಾಲಯವು ಆತನನ್ನು ದೋಷಿ ಎಂದು ತೀರ್ಮಾನಿಸಿತ್ತು. 26/11 ಮುಂಬೈ ದಾಳಿಯ ಆರೋಪದಿಂದ ಈ ಮೊದಲು ಆತನನ್ನು ಮುಕ್ತಗೊಳಿಸಿದ್ದರೂ ಹೆಡ್ಲಿಯ ವಿಚಾರಣೆಯಿಂದ ರಾಣಾ ಕೂಡ ಆರೋಪಿ ಎಂಬುದು ದೃಢಪಟ್ಟಿದೆ.
ಎಫ್‌ಬಿಐ ಹೇಳಿದ್ದೇನು ?
ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಪ್ರಕಾರ ರಾಣಾಗೆ ಲಷ್ಕರ್ ಒಂದು ಭಯೋತ್ಪಾದಕ ಸಂಘಟನೆ ಎಂದು ತಿಳಿದಿತ್ತು ಎಂದು 2009 ರಲ್ಲಿ ರಾಣಾ ಒಪ್ಪಿಕೊಂಡಿದ್ದ. ಅಲ್ಲದೇ ಹೆಡ್ಲಿ ಪಾಕಿಸ್ತಾನದಲ್ಲಿ ಲಷ್ಕರ್ ಕಾರ್ಯನಿರ್ವಹಿಸುತ್ತಿದ್ದ ತರಬೇತಿ ಶಿಬಿರಗಳಿಗೆ ಹಾಜರಾಗಿರುವುದಾಗಿ ತಿಳಿಸಿದ್ದಾನೆ. 2002 ಮತ್ತು 2005ರ ನಡುವೆ ಐದು ಬಾರಿ ಹೆಡ್ಲಿ ತರಬೇತಿ ಶಿಬಿರಗಳಿಗೆ ಹಾಜರಾಗಿರುವುದಾಗಿ ಹೆಡ್ಲಿ ಒಪ್ಪಿಕೊಂಡಿದ್ದಾನೆ. 2005ರ ವರ್ಷಾಂತ್ಯದಲ್ಲಿ ಲಷ್ಕರ್ ಸೂಚನೆ ಮೇರೆಗೆ ಹೆಡ್ಲಿ ಭಾರತದ ಮೇಲೆ ಕಣ್ಗಾವಲು ನಡೆಸಲು ಬಂದಿರುವುದಾಗಿ ಹೇಳಿದ್ದು, ಇದಕ್ಕಾಗಿ ಆತ ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದ. ಇದಾಗಿ ಮೂರು ವರ್ಷಗಳ ಅನಂತರ ನಡೆದ ಮುಂಬೈ ದಾಳಿಯಲ್ಲಿ 160 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು ಮತ್ತು ನೂರಾರು ಮಂದಿ ಗಾಯಗೊಂಡಿದ್ದರು ಎಂದು ತಿಳಿಸಿದೆ.
2006ರ ಬೇಸಿಗೆಯ ಆರಂಭದಲ್ಲಿ ಹೆಡ್ಲಿ ಮತ್ತು ಇಬ್ಬರು ಲಷ್ಕರ್ ಸದಸ್ಯರು ಮುಂಬೈನಲ್ಲಿ ವಲಸೆ ಕಚೇರಿ ತೆರೆಯುವ ಬಗ್ಗೆ ಚರ್ಚಿಸಿದರು. ಇದಕ್ಕಾಗಿ ಹೆಡ್ಲಿ ಚಿಕಾಗೋಗೆ ತೆರಳಿ ಪಾಕಿಸ್ತಾನದಲ್ಲಿ ಹೈಸ್ಕೂಲ್‌ನಲ್ಲಿ ಒಟ್ಟಿಗೆ ಓದುತ್ತಿದ್ದ ತನ್ನಬಾಲ್ಯದ ಸ್ನೇಹಿತ ರಾಣಾ ಸಲಹೆ ಪಡೆದಿದ್ದ. ಚಿಕಾಗೋ ಮತ್ತು ಇತರೆಡೆಗಳಲ್ಲಿ ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್‌ನ ಮಾಲೀಕನಾಗಿದ್ದ ರಾಣಾ ತನ್ನ ಚಟುವಟಿಕೆಗಳಿಗೆ ಬೆಂಬಲವಾಗಿ ಮುಂಬೈನಲ್ಲಿ ಫಸ್ಟ್ ವರ್ಲ್ಡ್ ಕಚೇರಿಯನ್ನು ತೆರೆಯಲು ಅನುಮೋದನೆ ಪಡೆದಿದ್ದಾನೆ. ಹೆಡ್ಲಿಯ ಹೆಸರಿನಲ್ಲಿ ದಾಖಲೆಗಳನ್ನು ಸಿದ್ಧಪಡಿಸಲು ರಾಣಾ ಫಸ್ಟ್ ವರ್ಲ್ಡ್‌ನೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗೆ ನಿರ್ದೇಶನ ನೀಡಿದ್ದಾನೆ. ವಿಶೇಷ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿಯುವಾಗ ಹೆಡ್ಲಿ ಇದನ್ನು ತಿಳಿಸಿದ್ದಾನೆ ಎನ್ನಲಾಗಿದೆ.
ಲಷ್ಕರ್ ಮುಂಬೈ ದಾಳಿಯನ್ನು ಯೋಜನೆ ರೂಪಿಸಿತ್ತು. 2008ರ ನವೆಂಬರ್‌ನಲ್ಲಿ ಮುಂಬೈ ಮೇಲೆ ದಾಳಿ ಮಾಡಿದ ಹತ್ತು ಭಯೋತ್ಪಾದಕರ ಗುಂಪು ಅದೇ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಗರದ ಮೇಲೆ ದಾಳಿ ಮಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿತ್ತು. ದಾಳಿಗೂ ಮೊದಲು ಮತ್ತು ಅನಂತರ ಎಂಟು ಬಾರಿ ಭಾರತಕ್ಕೆ ಭೇಟಿ ನೀಡಿರುವುದಾಗಿ ಡೇವಿಡ್ ಹೆಡ್ಲಿ ತನಿಖೆ ವೇಳೆ ತಿಳಿಸಿದ್ದಾನೆ.
ಎರಡು ವರ್ಷಗಳ ಕಾಲ ಭಾರತದ ಮೇಲೆ ದಾಳಿಗೆ ಸಂಶೋಧನೆ ನಡೆಸಿರುವುದಲ್ಲದೆ ಮುಂಬೈ ನಗರದ ಬಂದರಿನ ಸುತ್ತಲೂ ದೋಣಿ ವಿಹಾರ ನಡೆಸಿರುವುದಾಗಿಯೂ ಹೆಡ್ಲಿ ತಿಳಿಸಿದ್ದಾನೆ. ಅಲ್ಲದೇ ಬಾಲಿವುಡ್ ತಾರೆಯರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾಗಿಯೂ ಹೇಳಿಕೊಂಡಿದ್ದಾನೆ.
ಲಷ್ಕರ್ ನೇಮಕ ಮಾಡಿರುವ ಸಾಜಿದ್ ಮಿರ್ ಅವರೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಐಎಸ್‌ಐ ಅಧಿಕಾರಿಗಳಾದ ಮೇಜರ್ ಅಲಿ ಮತ್ತು ಮೇಜರ್ ಇಕ್ಬಾಲ್ ಅವರನ್ನು ಹೆಡ್ಲಿ ಭೇಟಿಯಾಗಿದ್ದ. 2002ರಲ್ಲಿ ಲಷ್ಕರ್‌ಗೆ ಸೇರಿಕೊಂಡು 26/11 ದಾಳಿಯ ಪ್ರಮುಖ ಸಂಚುಕೋರರಾದ ಹಫೀಜ್ ಸಯೀದ್ ಮತ್ತು ಝಾಕಿ-ಉರ್ ರೆಹಮಾನ್ ಲಖ್ವಿ ಅವರ ಅಡಿಯಲ್ಲಿ ತಾನು ತರಬೇತಿ ಪಡೆದಿರುವುದಾಗಿ ಹೆಡ್ಲಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: Tahawwur Rana: ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರ; ತಿಹಾರ್ ಜೈಲಿಗೆ ಶಿಫ್ಟ್ ಸಾಧ್ಯತೆ
ವಿಚಾರಣೆ ಸಮಯದಲ್ಲಿ 2008 ರ ದಾಳಿಯನ್ನು ಪಾಕಿಸ್ತಾನದ ಕರಾಚಿಯಲ್ಲಿರುವ ನಿಯಂತ್ರಣ ಕೊಠಡಿಯಿಂದ ರೂಪಿಸಿದ ಅಬು ಜುಂದಾಲ್‌ನ ಹೇಳಿಕೆಯನ್ನು ಪಡೆಯಲಾಗಿದೆ. ಭಯೋತ್ಪಾದಕರಿಗೆ ತರಬೇತಿಯ ಸಮಯದಲ್ಲಿ ಭಾಷಾ ಪಾಠವನ್ನು ಹೇಳಿಕೊಟ್ಟಿರುವ ಆರೋಪ ಈತನ ಮೇಲಿದೆ. ಮುಂಬೈ ದಾಳಿಯ ಹತ್ತು ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದ ಒಬ್ಬನ ಧ್ವನಿಯನ್ನು ಭಾರತೀಯ ತನಿಖಾ ಸಂಸ್ಥೆಗಳು ಗುರುತಿಸಿದ್ದು ಇದು ಅಬು ಜುಂದಾಲ್ ಎಂಬ ಅಲಿಯಾಸ್ ಅನ್ನು ಬಳಸುವ ಜಬಿಯುದ್ದೀನ್ ಅನ್ಸಾರಿ ಅವರ ಧ್ವನಿ ಎಂದು ಹೇಳಿವೆ. ಅನ್ಸಾರಿ ಔರಂಗಾಬಾದ್ ಶಸ್ತ್ರಾಸ್ತ್ರ ಸಾಗಣೆ ಪ್ರಕರಣ ಮತ್ತು ಇತರ ಭಯೋತ್ಪಾದಕ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಹೆಡ್ಲಿಯನ್ನು ಭಾರತಕ್ಕೆ ಮರಳಿ ತರಲಾಗುತ್ತದೆಯೇ?
ಡೇವಿಡ್ ಹೆಡ್ಲಿಯ ನಿಜವಾದ ಹೆಸರು ದಾವೂದ್ ಸಯೀದ್ ಗಿಲಾನಿ. ಮುಂಬೈ ದಾಳಿಗೆ ಸಂಚು ರೂಪಿಸಿದ್ದಕ್ಕಾಗಿ 35 ವರ್ಷಗಳ ಜೈಲು ಶಿಕ್ಷೆಗೆ ಒಳಗಾದ ಅನಂತರ ಆತ ಅಮೆರಿಕದ ಜೈಲಿನಲ್ಲಿದ್ದಾನೆ. ಆತನ ಹಸ್ತಾಂತರಕ್ಕೆ ಭಾರತ ಒತ್ತಾಯಿಸುತ್ತಲೇ ಇದ್ದರೂ ಹೆಡ್ಲಿ ತಕ್ಷಣವೇ ತನ್ನ ತಪ್ಪು ಒಪ್ಪಿಕೊಂಡಿರುವುದರಿಂದ ಮತ್ತು ಆತ ಎಲ್ಲ ಷರತ್ತುಗಳನ್ನು ಪೂರೈಸಿದ ಕಾರಣ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದಿಲ್ಲ ಎಂದು ಅಮೆರಿಕದ ಲಾಸ್ ಏಂಜಲೀಸ್‌ನ ಫೆಡರಲ್ ನ್ಯಾಯಾಲಯ ಹೇಳಿದೆ. ರಾಣಾ ಪರಿಸ್ಥಿತಿ ಭಿನ್ನವಾಗಿದೆ. ಯಾಕೆಂದರೆ ಆತ ತಪ್ಪೊಪ್ಪಿಕೊಂಡಿಲ್ಲ ಅಥವಾ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಸಹಕರಿಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.