Tahawwur Rana: ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರ; ತಿಹಾರ್ ಜೈಲಿಗೆ ಶಿಫ್ಟ್ ಸಾಧ್ಯತೆ
ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹವ್ವುರ್ ಹುಸೇನ್ ರಾಣಾ ಅವರ ಹಸ್ತಾಂತರದ ವಿರುದ್ಧದ ಅರ್ಜಿಯನ್ನು ಯುಎಸ್ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಅಮೆರಿಕ ಸರ್ಕಾರ ರಾಣಾನನ್ನು ಭಾರತದ ವಶಕ್ಕೆ ನೀಡಿದೆ. ರಾಣಾನನ್ನು ಎನ್‌ಐಎ ಅಧಿಕಾರಿಗಳು ಭಾರತಕ್ಕೆ ಕರೆತರುತ್ತಿದ್ದಾರೆ.


ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹವ್ವುರ್ ಹುಸೇನ್ ರಾಣಾ (Tahawwur Rana) ಅವರ ಹಸ್ತಾಂತರದ ವಿರುದ್ಧದ ಅರ್ಜಿಯನ್ನು ಯುಎಸ್ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಅಮೆರಿಕ ಸರ್ಕಾರ ರಾಣಾನನ್ನು ಭಾರತದ ವಶಕ್ಕೆ ನೀಡಿದೆ. ರಾಣಾನನ್ನು ಎನ್‌ಐಎ ಅಧಿಕಾರಿಗಳು ಭಾರತಕ್ಕೆ ಕರೆತರುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳು ತಹವ್ವುರ್ ರಾಣಾ ಮೇಲ್ವಿಚಾರಣೆ ನಡೆಯಲಿದೆ. 2019ರಿಂದ ಮೋದಿ ಸರ್ಕಾರವು ರಾಣಾನನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡುತ್ತಿತ್ತು. ಸತತ ಪ್ರಯತ್ನದ ಫಲವಾಗಿ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಣಾನನ್ನು ಭಾರತಕ್ಕೆ ಕಳುಹಿಸಲು ಒಪ್ಪಿಗೆ ನೀಡಿದ್ದರು.
26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾ, ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದಾನೆ. ಈತ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆಯಾಗಿದ್ದಾನೆ. 2008 ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ದಾಳಿಯಲ್ಲಿ 166 ಜನ ಅಮಾಯಕರು ಜೀವ ಬಿಟ್ಟಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವನ್ನು ಹೊತ್ತಿದ್ದಾನೆ. ದಾಳಿಯ ಹಿಂದಿನ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಈತ ಸಂಪರ್ಕ ಹೊಂದಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ರಾಣಾ ಭಾರತಕ್ಕೆ ತಲುಪಿದಾಗ ದೆಹಲಿಯ ತಿಹಾರ್ ಜೈಲಿನಲ್ಲಿರುವ ಹೆಚ್ಚಿನ ಭದ್ರತೆಯ ವಾರ್ಡ್‌ನಲ್ಲಿ ಇರಿಸಲಾಗುವುದು ಎಂದು ತಿಳಿದು ಬಂದಿದೆ. ನಂತರ ದೆಹಲಿಯ ಪಟಿಯಾಲ ಹೌಸ್‌ನಲ್ಲಿರುವ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ದೆಹಲಿ ಕಾರಾಗೃಹ ಇಲಾಖೆಯು ತಿಹಾರ್ ಜೈಲಿನಲ್ಲಿ ಆತನನ್ನು ಇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆತ ಇರುವ ಸೆಲ್‌ಗೆ ಹೆಚ್ಚಿನ ಭದ್ರತೆ ಒದಗಿ, ಸಿಸಿಟಿವಿಯನ್ನು ಅಳವಡಿಸಲಾಗುತ್ತದೆ. ಸದಾ ಆತನ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಸೆಲ್‌ನಲ್ಲಿಯೇ ಆತನಿಗೆ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಈ ಸುದ್ದಿಯನ್ನೂ ಓದಿ: Tahawwur Rana: ತಹವ್ವುರ್ ರಾಣಾ ಭಾರತಕ್ಕೆ ಬಂದ ಬಳಿಕ ನಡೆಯುವ ಪ್ರಕ್ರಿಯೆ ಹೇಗಿರುತ್ತೆ ಗೊತ್ತೆ? ಇಲ್ಲಿದೆ ಡಿಟೇಲ್ಸ್!
ರಾಣಾನನ್ನು ಗಡಿಪಾರು ಮಾಡುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರಾಜತಾಂತ್ರಿಕತೆಯ "ದೊಡ್ಡ ಯಶಸ್ಸು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. "ಯಾರ ಆಳ್ವಿಕೆಯಲ್ಲಿ ಬಾಂಬ್ ಸ್ಫೋಟಗಳು ನಡೆದವೋ ಆ ಸರ್ಕಾರಕ್ಕೆ ಆರೋಪಿಯನ್ನು ಕರೆತರಲು ಸಾಧ್ಯವಾಗಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.