Saturday, 27th July 2024

ಕನ್ನಡಿಗರಿಗೆ ಮೀಸಲು: ನಗೆಹೊನಲ ಮಾತು

ಅಡಳಿತದಲ್ಲಿ ಕನ್ನಡ ಅಳವಡಿಕೆ, ಶೇ.೭೫ಉದ್ಯೋಗ ಕನ್ನಡಿಗರಿಗೆ ಮೀಸಲು ಎಂಬಿತ್ಯಾದಿ ರಾಜ್ಯೋತ್ಸವ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆಗಳನ್ನು ನೆನಪಿಸಿಕೊಂಡರೆ ಪುರಂದರದಾಸರ ‘ಎನಗೆ ನಗೆಯು ಬರುತಿದೆ’ ಎನ್ನುವ ಪದ್ಯ ಬೇಡವೆಂದರೂ ನೆನಪಿನಾಳದಿಂದ ಹೊರಬರುತ್ತದೆ.

ಕನಿಷ್ಠ ಅಂಗಡಿ, ಮುಂಗಟ್ಟು ಮತ್ತು ಕಚೇರಿಗಳ ನಾಮಫಲಕದಲ್ಲಿ ಕನ್ನಡವನ್ನು ಅಳವಡಿಸಲು ಸಾಧ್ಯವಾಗದಿರುವಾಗ, ಇಂಥ ಭರವಸೆಗಳ ಅನುಷ್ಠಾನ ನಿಜಕ್ಕೂ ಸಾಧ್ಯವೇ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿzರೆ. ಹಲವು ರಾಜ್ಯಗಳ ಅನುಭವದಿಂದ ಹೇಳುವ ದಾದರೆ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯ ಹಾದಿ ಸುಗಮವಾಗಿಲ್ಲ ಮತ್ತು ಕಾನೂನಿನ ತೊಡಕಿನಲ್ಲಿ ಸಿಲುಕುವ ಸಾದ್ಯತೆ ಇದೆ. ಹಾಗೆಯೇ ಆಡಳಿತದಲ್ಲಿ ಕನ್ನಡೇತರ ಐಎಎಸ್ ಸಂಖ್ಯೆ ಗಣನೀಯವಾಗಿರುವವರೆಗೆ ಆಡಳಿತದಲ್ಲಿ ಕನ್ನಡ ಕಾಟಾಚಾರಕ್ಕೆ ಇರುತ್ತದೆ ಎನ್ನುವುದನ್ನು ಅಲ್ಲಗೆಳೆಯಲಾಗದು.

ಈ ನಿಟ್ಟಿನಲ್ಲಿ ಸರೋಜಿನ ಮಹಿಷಿ ವರದಿ ಕಾಯಾ ವಾಚಾ ಮನಸಾ ಅನುಷ್ಠಾನಗೊಳ್ಳದೆ ನಾಲ್ಕು ದಶಕಗಳಿಂದ ವಿಧಾನ ಸೌಧದಲ್ಲಿ ಧೂಳು ತಿನ್ನುತ್ತಿದೆ. ಈ ಘೋಷಣೆ ವಾರ್ಷಿಕ ರಾಜ್ಯೋತ್ಸವ ಘೋಷಣೆಗಿಂತ ಹೆಚ್ಚೆನ್ನೇನೂ ಸಾಧಿಸದು.
-ರಮಾನಂದ ಶರ್ಮಾ ಬೆಂಗಳೂರು

ನಾಯಕರು ಜವಾಬ್ದಾರಿ ಮೆರೆಯಲಿ
ಪಸ್ತುತ ಬಿಟ್ ಕಾಯಿನ್ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ನಡುವೆ ದಿನೇ ದಿನೇ ನಡೆಯುತ್ತಿರುವ ವಾಕ್ಸಮರ ರಾಜ್ಯದ ಜನರ ಗಮನ ಸೆಳೆಯುತ್ತಿದೆ. ಆದರೆ ಯಾರೂ ಹ್ಯಾಕರ್‌ನಿಂದ ಆದ ನಷ್ಟಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿಲ್ಲ. ಮತ್ತೊಂದೆಡೆ ಬಿಟ್ ಕಾಯಿನ್ ಪ್ರಕರಣದ ರೂವಾರಿ ಶ್ರೀಕಿಯನ್ನು ರಕ್ಷಿಸುವ ಕೆಲಸವೂ ನಡೆಯುತ್ತಿದೆ. ಇದೂ ಸಾಲದೆಂಬಂತೆ ಆತನ ಜೀವಕ್ಕೆ ಆಪತ್ತು ಇರುವುದರಿಂದ ಅವನಿಗೆ ಭದ್ರತೆ ಒದಗಿಸಬೇಕೆಂದು ಕೆಲ ನಾಯಕರು ಆಗ್ರಹಿಸು ತ್ತಿರುವುದು ವಿಪರ್ಯಾಸ. ವಂಚಕರಿಗೆಲ್ಲ ಭದ್ರತೆ ಒದಗಿಸುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿಪಕ್ಷಗಳ ನಾಯಕರುಗಳು ಇಂತಹ ಸಂದರ್ಭದಲ್ಲಿ ಜವಾಬ್ದಾರಿ ಮೆರೆಯಲಿ.

– ಶ್ರೀಧರ್ ಡಿ.ರಾಮಚಂದ್ರಪ್ಪ ತುರುವನೂರು

ನೃತ್ಯದ ಗಂಧಗಾಳಿ ಗೊತ್ತಿಲ್ಲದವರು ಜಡ್ಜ್!
ಕನ್ನಡದ ಪ್ರಖ್ಯಾತ ಚಾನೆಲ್‌ಗಳು ತಾವು ನಡೆಸುವ ರಿಯಾಲಿಟಿ ಶೋಗಳಲ್ಲಿ ಟಿಆರ್‌ಪಿಗೋಸ್ಕರ ಡ್ಯಾನ್ಸ್ ಬಗ್ಗೆ ಆರು ಮೂರು ತಿಳಿಯದವರನ್ನು ತೀರ್ಪುಗಾರರ ಪಟ್ಟಕ್ಕೆ ಏರಿಸಿದ್ದಾರೆ. ಇದು ನಿಜವಾದ ಪ್ರತಿಭಾವಂತರಿಗೆ ಮಾಡುವ ಮೋಸ. ವಿನೋದ್ ರಾಜ್ ಅವರಂತಹ ನಿಜವಾದ ಕಲಾವಿದನನ್ನು ಮೂಲೆಗುಂಪಾಗಿಸಿದ್ದು ಬೇಸರಾದ ಸಂಗತಿ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರೀಯಾಲಿಟಿ ಶೋ ನಲ್ಲಿ ಡ್ಯಾನ್ಸ್ ಗೂ ತೀರ್ಪುಗಾರರಿಗೂ ಯಾವುದೇ ಸಂಬಂಧವಿಲ್ಲದಾಗಿದೆ. ‘ನಮ್ಮ ನಿಮ್ಮೆಲ್ಲರ ಪ್ರೀತಿಯಾ ಡಾರ್ಲಿಂಗ್ (ಜನ್ಯಜೀ)’ ಎಂದು ಅನುಶ್ರೀ ಅವರ ಬಾಯಲ್ಲಿ ಹೇಳಿಸುವ ಮೂಲಕ ಟಿಆರ್‌ಪಿ ಗಿಟ್ಟಿಸುವ ತಂತ್ರ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಅವರ ಬದಲು ನಿಜವಾಗಿಯೂ ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಅನೇಕ ಕಲಾವಿದರಿಗೆ ಅವಕಾಶ ನೀಡಿದರೆ ಚಾನಲ್‌ಗೂ ಗೌರವ, ಪ್ರೇಕ್ಷಕ ರಿಗೂ ಹೆಮ್ಮೆ.

-ಪೃಥ್ವಿನಿ ಅಲಂಗಾರು

ನೀಗಿಸು ಬಾಳಿನ ಅಹಂ…
ಹಂಸಲೇಖ ಅವರ ಬಗ್ಗೆ ಇದ್ದ ಗೌರವ, ಅವರ ಮಧುರ ಸಾಹಿತ್ಯದ ಬಗ್ಗೆ, ಇಂಪಾದ ಸಂಗೀತದ ಬಗ್ಗೆ, ಅವರ ಸಾಧನೆ ಬಗ್ಗೆ ಇದ್ದ ಅಭಿಮಾನ ಎಲ್ಲವೂ ಕುಸಿದು ಹೋಗಿದೆ. ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಅಗತ್ಯವಾದರೂ ಅವರಿಗೇನಿತ್ತು? ಸಮಾಜದಲ್ಲಿ ಒಳ್ಳೇ ಸಾಧನೆ ಮಾಡಿ, ಗೌರವ ಮತ್ತು ಅಭಿಮಾನಿಗಳನ್ನು ಗಳಿಸಿದ ಮೇಲೆ ಅದನ್ನು ಕೊನೆವರೆಗೂ
ಹೇಗೆ ಉಳಿಸಿಕೊಂಡು ಹೋಗಬೇಕು ಎಂದು ಎಸ್‌ಪಿಬಿ ಅವರನ್ನು ನೋಡಿಯಾದರೂ ಕಲಿಯಬಹುದಿತ್ತು. ಕೇವಲ ಪ್ರಚಾರಕ್ಕಾಗಿ ಅಥವಾ ಯಾರನ್ನೋ ಓಲೈಸುವ ಸಲುವಾಗಿ ಈ ತರಹದ ಅಪದ್ದ ನುಡಿಯಬಾರದಿತ್ತು. ಸಂಗೀತ ಎನ್ನುವುದು ಎಲ್ಲ ಜಾತಿ, ಭಾಷೆಗಳನ್ನು ಮೀರಿದ್ದು. ಅದನ್ನು ನೀಡಿದ ಹಂಸಲೇಖರಿಂದ ಈ ತರಹದ ಮಾತುಗಳು ನಿರೀಕ್ಷಿಸಿರಲಿಲ್ಲ. ಆಹಾರ ವಿಚಾರ ದಲ್ಲೂ, ಬೇರೆಯವರನ್ನು ಅನುಸರಿಸ ಬೇಕೆಂಬ ಹಂಸಲೇಖ ಅವರ ನಿಲುವು ಅವಿವೇಕತನದ್ದು. ಹಂಸಲೇಖ ಅವರೇ ಓಂ ಚಿತ್ರ ಕ್ಕಾಗಿ ಬರೆದ ಹಾಡಿನಂತೆ ‘ನೀಗಿಸು ಬಾಳಿನ ಅಹಂ’… ಅವರಿಗೇ ಅನ್ವಯಿಸಿಕೊಂಡರೊಳಿತು.

– ರಾಘವೇಂದ್ರ ಜೋಯ್ಸ 

ಕಾಲಿಗೆ ಬಿದ್ದು ಒಪ್ಪಿಕೊಳ್ಳಿ
ಇತ್ತಿಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಭರದಲ್ಲಿ ಪೇಜಾವರ ಶ್ರೀಗಳ ಕುರಿತು ಹಂಸಲೇಖ ನೀಡಿರುವ ಹೇಳಿಕೆ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಹೇಳಿಕೆ ನೀಡಿದರೆ ಶ್ರೀಗಳ ಗೌರವ ಕುಂದಿಸಬಹುದು ಎಂದುಕೊಂಡಿದ್ದರೆ ಇದಕ್ಕಿಂತ ಮೂರ್ಖತನದ ಯೋಚನೆ ಇನ್ನೊಂದಿರಲಿಕ್ಕಿಲ್ಲ. ಅನೇಕ ಕಾರ್ಯಕ್ರಮಗಳಲ್ಲಿ ಅತ್ಯಂತ ಮೇಧಾವಿಗಳಂತೆ ವರ್ತಿಸುವ ಹಂಸಲೇಖರವರು ಶ್ರೀಗಳ ಬಗ್ಗೆ ಮಾತನಾಡುವಾಗ ಮೆದುಳೊಂದು ಕಡೆ ನಾಲಿಗೆ ಇನ್ನೊಂದು ಕಡೆ ಹೋಗಿರಬಹುದೇನೊ.

ಆಹಾರ ಕ್ರಮ ಅವರವರ ವೈಯಕ್ತಿಕ ಎಂಬುದನ್ನು ಹಂಸಲೇಖ ತಿಳಿದುಕೊಳ್ಳಬೇಕಿತ್ತು. ಹಾಗಾಗಿದ್ದರೆ ರಾಜ್ಯದ ಜನರಿಂದ ಛೀಮಾರಿಗೆ ಹಾಕಿಸಿ ಕೊಳ್ಳುವ ಪರಿಸ್ಥಿತಿ ಅವರಿಗೆ ಬರುತ್ತಿರಲಿಲ್ಲ. ಯಾರನ್ನೊ ಮೆಚ್ಚಿಸಲೋ ಅಥವಾ ಇನ್ನಷ್ಟು ಪ್ರಚಾರ ಪಡೆಯಲೋ ಈ ರೀತಿ ಹೇಳಿಕೆ ನೀಡಿದ್ದರೆ ಅದು ಖಂಡೀತ ಹಾಸ್ಯಾಸ್ಪದ. ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳು ತ್ತಿದ್ದಂತೆಯೆ ತಮ್ಮ ಫೇಸ್ ಬುಕ್ ಮೂಲಕ ಕ್ಷಮೆ ಕೇಳಿದ್ದಾರೆ. ಮೊದಲು ತಪ್ಪು ಮಾಡಿ ನಂತರ ಕ್ಷಮೆ ಕೇಳುವುದು ಎಲ್ಲರಿಗೂ ರೂಡಿಯಾಗಿಬಿಟ್ಟಿದೆ. ನೀವು ಮಾಡಿರುವ ತಪ್ಪಿಗೆ ಬಹುಶಃ ಕ್ಷಮೆಯೊಂದೆ ಸಾಲದು. ಹೋಗಿ ಪೇಜಾವರರ ಕಾಲಿಗೆ ಬಿದ್ದು ತಪ್ಪೊಪ್ಪಿಕೊಳ್ಳಿ.

– ಮಣಿಕಂಠ ಪಾ ಹಿರೇಮಠ ಚವಡಾಪೂರ, ಬಾಗಲಕೋಟ

Leave a Reply

Your email address will not be published. Required fields are marked *

error: Content is protected !!