Sunday, 8th September 2024

ಅನುದಾನದ ಕೊರತೆ: ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ ಸ್ಥಗಿತ

ಮಂಡ್ಯ; ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಹಿಂದುಳಿದ ವರ್ಗಗಳ 100 ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ನೀಡಲಾ ಗುತ್ತಿದ್ದ ವಾರ್ಷಿಕ ಕನಿಷ್ಠ 10 ಲಕ್ಷ ರೂಗಳಂತೆ ನೀಡಲಾಗುತ್ತಿದ್ದ ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನವನ್ನು ಅನುದಾನದ ಕೊರತೆಯಿಂದ ರಾಜ್ಯಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಸ್ನಾತಕೋತ್ತರ ಪದವಿ, ಪಿಹೆಚ್‍ಡಿ, ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನಲ್ಲಿ ಹಣಕಾಸಿನ ಕೊರತೆಯಿಂದ ವಿದೇಶಿ ವ್ಯಾಸಂಗಕ್ಕೆ ಆನ್‌ಲೈನ್‌ಲ್ಲಿ ಅರ್ಜಿಯನ್ನು ಆಹ್ವಾನಿಸಿಲ್ಲ.

2015-16ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ ಸೌಲಭ್ಯವನ್ನು ಜಾರಿಗೊಳಿಸಿದ್ದರು. ಈ ಸೌಲಭ್ಯ ಪಡೆಯಬೇಕಾದರೆ ಪಿಹೆಚ್‍ಡಿ, ಸಂಶೋಧನೆ ಮಾಡ ಲಿಚ್ಚಿಸುವ 27 ವರ್ಷದೊಳಗಿನ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ.70 ರಷ್ಟು ಅಂಕ ಪಡೆದಿರಬೇಕು, ಸ್ನಾತ ಕೋತ್ತರ ಪದವಿ ಮಾಡಬಯಸುವ 25 ವರ್ಷ ದೊಳಗಿನ ವಿದ್ಯಾರ್ಥಿಗಳು ಪದವಿಯಲ್ಲಿ ಶೇ.70 ಅಂಕ ಪಡೆದಿರಬೇಕಿತ್ತು. ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ ವಾರ್ಷಿಕ 6 ಲಕ್ಷ ರು. ಮೀರಿರಬಾರದಿತ್ತು.

“2018-19ನೇ ಸಾಲಿನಲ್ಲಿ ರಾಜ್ಯದಲ್ಲಿ 64 ಮಂದಿ, 2019-20ನೇ ಸಾಲಿನಲ್ಲಿ 65 ಮಂದಿ ವಿದೇಶಿ ವಿದ್ಯಾರ್ಥಿ ವ್ಯಾಸಂಗ ವೇತನ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. 2021-22ನೇ ಸಾಲಿನಲ್ಲಿ ಅನುದಾನದ ಕೊರತೆ ಎದು ರಾಗಿರುವುದರಿಂದ ವಿದೇಶಿ ವ್ಯಾಸಂಗಕ್ಕೆ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಿರುವುದಿಲ್ಲ. 2022-23ನೇ ಸಾಲಿನಲ್ಲಿ ಸದರಿ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಡು ವಂತೆ ನಿರ್ದೇಶಿಸಲಾಗಿದೆ. ಆದರೂ 10 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಅನುದಾನ ಒದಗಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು,” ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆಸರೆಯಾಗಿತ್ತು. ವಿದೇಶಿ ವ್ಯಾಸಂಗ ಉಳ್ಳವರ ಶಿಕ್ಷಣವಾಗಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗದಲ್ಲಿದ್ದ ಬಡವಿದ್ಯಾರ್ಥಿಗಳು ಈ ಸೌಲಭ್ಯದ ಮೂಲಕ ವಿದೇಶಿ ವ್ಯಾಸಂಗ ಮಾಡುವ ಭರವಸೆ ಹೊಂದಿದ್ದರು. ಯೋಜನೆ ಸ್ಥಗಿತದಿಂದಾಗಿ ಆ ವಿದ್ಯಾರ್ಥಿಗಳ ವಿದೇಶದಲ್ಲಿ ವ್ಯಾಸಂಗ ಮಾಡುವ ಕನಸು ನುಚ್ಚುನೂರಾಗಿದೆ. ಇದು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನಡೆಗೂ ಕಾರಣವಾಗಿದೆ.

ವಿದೇಶಿ ವಿದ್ಯಾರ್ಥಿ ವೇತನ ಮಾದರಿಯಲ್ಲೇ ಅರಿವು ಯೋಜನೆಯನ್ನು ಮೂರು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

error: Content is protected !!