Rajasthan Royals Playoff Scenarios: ರಾಜಸ್ಥಾನ್ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?
IPL 2025: ಸತತ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸಬೇಕಾದರೆ ಇನ್ನುಳಿದ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಸದ್ಯ 4 ಅಂಕ ಪಡೆದಿರುವ ಸಂಜು ಸ್ಯಾಮ್ಸನ್ ಪಡೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯವನ್ನು ಶನಿವಾರ ತವರಿನ ಅಂಗಳದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.



ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಸೋತು ಕೇವಲ ಎರಡು ಪಂದ್ಯ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪ್ಲೇ-ಆಫ್ ಪ್ರವೇಶಿಸುವ ಆಸೆ ಜೀವಂತವಾಗಿ ಉಳಿಯಬೇಕಿದ್ದರೆ ಇನ್ನುಳಿದ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆದರೆ ಈ ಹಾದಿ ಅಷ್ಟು ಸುಲಭ ವಲ್ಲ. ಇಲ್ಲಿ ಲೆಕ್ಕಾಚಾರದ ನಾನಾ ಆಟಗಳಿವೆ.

ರಾಜಸ್ಥಾನ್ ತಂಡಕ್ಕೆ ಇನ್ನು 7 ಪಂದ್ಯಗಳು ಬಾಕಿ ಉಳಿದಿದೆ. ಈ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆಲ್ಲಲೇ ಬೇಕು. ಆಗ ತಂಡದ ಅಂಕ 16 ಆಗಲಿದೆ. ಜತೆಗೆ ಇತರ ತಂಡದ ಸೋಲು ಕೂಡ ಮುಖ್ಯವಾಗಿದೆ. ಸಾಮಾನ್ಯವಾಗಿ 16 ಅಂಕ ತಂಡವೊಂದರ ಎಲಿಮಿನೇಟರ್ ಪ್ರವೇಶವನ್ನು ಖಚಿತಪಡಿಸುತ್ತದೆ. ಆದರೆ ಇತರ ನಾಲ್ಕು ತಂಡಗಳು 16ಕ್ಕಿಂತ ಅಧಿಕ ಅಂಕ ಗಳಿಸಿದರೆ ಆಗ ರಾಜಸ್ಥಾನ್ ಉತ್ತಮ ರನ್ ರೇಟ್ನೊಂದಿಗೆ ಉಳಿದ ಎಲ್ಲ 7 ಪಂದ್ಯ ಗೆಲ್ಲಬೇಕು.

ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ತಂಡದ ಸೋಲಿಗೆ ಪ್ರಮುಖ ಕಾರಣ ಎಂದರೆ ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಅನುಭವಿ ಜಾಸ್ ಬಟ್ಲರ್, ಯಜುವೇಂದ್ರ ಚಹಲ್, ಟ್ರೆಂಟ್ ಬೌಲ್ಟ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಟ್ಟದ್ದು. ಜತೆಗೆ ಹರಾಜಿನಲ್ಲಿ ವಿದೇಶಿ ಬ್ಯಾಟರ್ಗಳನ್ನು ಖರೀದಿ ಮಾಡದೇ ಇದದ್ದು.

ಬುಧವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ರಾಜಸ್ಥಾನ್ಗೆ ಸುಲಭವಾಗಿ ಗೆಲ್ಲುವ ಅವಕಾಶವಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬ್ಯಾಟರ್ಗಳು ಮಾಡಿದ ಎಡವಟ್ಟಿನಿಂದ ಪಂದ್ಯ ಟೈಗೊಂಡು ಬಳಿಕ ಸೂಪರ್ ಓವರ್ನಲ್ಲಿ ಸೋಲು ಕಂಡಿತ್ತು.
ಇದನ್ನೂ ಓದಿ IPL 2025: ಓವರ್ ಪೂರ್ತಿಗೊಳಿಸಲು 11 ಎಸೆತ ಎಸೆದು ಅನಗತ್ಯ ದಾಖಲೆ ಬರೆದ ಸಂದೀಪ್ ಶರ್ಮ

ರಾಜಸ್ಥಾನ್ ತಂಡದಂತೆ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಪ್ಲೇ ಆಫ್ ಪ್ರವೇಶ ಪಡೆಯಲು ಕಠಿಣ ಹಾದಿಯಲ್ಲಿದೆ. ಚೆನ್ನೈ ಕೂಡ 7 ಪಂದ್ಯಗಳಲ್ಲಿ 5 ಪಂದ್ಯ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನುಳಿದ ಎಲ್ಲ 7 ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದರಷ್ಟೇ ತಂಡದ ಪ್ಲೇ-ಆಫ್ ಆಸೆ ಜೀವಂತವಾಗಿ ಉಳಿಯಲಿದೆ. ಇನ್ನೊಂದು ಪಂದ್ಯ ಸೋತರೂ ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ.