Actor Srinath: ದಳಪತಿ ವಿಜಯ್ ಪಕ್ಷಕ್ಕೆ ಮತ್ತಷ್ಟು ಬಲ; ಟಿವಿಕೆಗೆ ಬೆಂಬಲ ನೀಡಿದ ಹಿರಿಯ ನಟ ಶ್ರೀನಾಥ್
TVK: ಕಳೆದ ವರ್ಷ ತಮಿಳಗ ವೆಟ್ರಿ ಕಝಗಂ ಪಕ್ಷ ಸ್ಥಾಪಿಸುವ ಮೂಲಕ ಸಕ್ರಿಯ ರಾಜಕೀಯದತ್ತ ಮುಖ ಮಾಡಿದ ಕಾಲಿವುಡ್ ನಟ ವಿಜಯ್‌ಗೆ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಪಕ್ಷದ ಸಭೆಯಲ್ಲಿ ಭಾಗವಹಿಸುವ ಮೂಲಕ ಹಿರಿಯ ನಟ ಶ್ರೀನಾಥ್ ಬೆಂಬಲ ಸೂಚಿಸಿದ್ದಾರೆ.


ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಇದೀಗ ನಟನೆಯಿಂದ ಹಿಂದೆ ಸರಿದು ಸಕ್ರಿಯ ರಾಜಕೀಯದತ್ತ ಮುಖ ಮಾಡಿದ್ದಾರೆ. ಈಗ ನಟಿಸುತ್ತಿರುವ ʼಜನ ನಾಯಕನ್ʼ ತಮ್ಮ ಕೊನೆಯ ಚಿತ್ರ ಎಂದು ಘೋಷಿಸಿದ್ದಾರೆ. ಕಳೆದ ವರ್ಷ ತಾವು ಸ್ಥಾಪಿಸಿದ ತಮಿಳಗ ವೆಟ್ರಿ ಕಝಗಂ (Tamilaga Vettri Kazhagam) ಪಕ್ಷದ ಚಟುವಟಿಕೆಯಲ್ಲಿ ನಿರತರಾಗಿರುವ ಅವರಿಗೆ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪ್ರಬಲ ಪೈಪೋಟಿ ಒಡ್ಡುವ ಎಲ್ಲ ಲಕ್ಷಣಗಳಿಗೆ. ಈ ಮಧ್ಯೆ ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಾಥ್ (Actor Srinath) ಟಿವಿಕೆಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷ ಆಯೋಜಿಸಿದ ಸೆಮಿನಾರ್‌ನಲ್ಲಿ ಭಾಗವಹಿಸಿದ್ದ ಶ್ರೀನಾಥ್ ಅವರನ್ನು ನೋಡಿ ವಿಜಯ್ ಅಭಿಮಾನಿಗಳು ಅಚ್ಚರಿ ಜತೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕೊಯಂಬತ್ತೂರು ಜಿಲ್ಲೆಯ ಸರವನಂಪಟ್ಟಿಯ ಖಾಸಗಿ ಕಾಲೇಜಿನಲ್ಲಿ ಟಿವಿಕೆ ಸೆಮಿನಾರೊಂದನ್ನು ಆಯೋಜಿಸಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಹಿರಿಯ ಹಾಸ್ಯ ನಟ ಶ್ರೀನಾಥ್ ಪ್ರತ್ಯಕ್ಷವಾಗಿದ್ದಾರೆ.
Actor Srinath 🆎 Thalapathy Vijay’s
— 🐅ராச.துரை ஆனந்தன் 🐅 (@thuosi) April 28, 2025
Coimbatore Visit 👌 @actorvijay @Jagadishbliss @VijayFansTrends pic.twitter.com/ljYWh9uelb
ಈ ಸುದ್ದಿಯನ್ನೂ ಓದಿ: Jana Nayagan Release Date: ದಳಪತಿ ವಿಜಯ್ ಅಭಿನಯದ ಕೊನೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್: ಈ ವರ್ಷ ತೆರೆಗೆ ಬರುತ್ತಾ ʼಜನ ನಾಯಕನ್ʼ ?
ಯಾರು ಈ ಶ್ರೀನಾಥ್?
ವಿಶೇಷ ಎಂದರೆ ಶ್ರೀನಾಥ್ ಮತ್ತು ವಿಜಯ್ ಏಕಕಾಲಕ್ಕೆ ಚಿತ್ರರಂಗ ಪ್ರವೇಶಿಸಿದವರು. ವಿಜಯ್ ಹಲವು ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ನಟಿಸಿದರೂ ನಾಯಕನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ 1992ರಲ್ಲಿ ತೆರೆಕಂಡ ತಮಿಳಿನ ʼನಾಲೈಯ ತೀರ್ಪುʼ. ಇದರಲ್ಲಿ ವಿಜಯ್ ಗೆಳೆಯನಾಗಿ ಕಾಣಿಸಿಕೊಳ್ಳುವ ಮೂಲಕ ಶ್ರೀನಾಥ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಅವರು ವಿಜಯ್ ನಟನೆಯ, 1996ರಲ್ಲಿ ಬಿಡುಗಡೆಯಾದ ʼಮಾನ್‌ಬುಮಿಗು ಮಾನವನ್ʼ ಚಿತ್ರದಲ್ಲಿ ಕಾಣಿಸಿಕೊಂಡರು.
ಕಾಮಿಡಿ ಪಾತ್ರಗಳಲ್ಲಿ ಗಮನ ಸೆಳೆದ ಶ್ರೀನಾಥ್ ʼ12ಬಿʼ (2001), ʼಏಯ್ ನೀ ರೊಂಬ ಅಝಗ ಇರ್ಕ್ʼ (2002), ʼಕಾದಲ್ ವೈರಸ್ʼ (2002), ʼಉಲ್ಲಮ್ ಕೇಟ್‌ಕುಮೆʼ (2005), ʼಉನ್ನಾಲೆ ಉನ್ನಾಲೆʼ (2007), ʼಭೀಮʼ (2008), ʼಧಾಮ್ ಧೂಮ್ʼ (2008) ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ರಿಲೀಸ್ ಆದ ವಿಜಯ್ ನಟನೆಯ ʼವೇಟೈಕಾರನ್ʼ ಸಿನಿಮಾದಲ್ಲಿ ಶ್ರೀನಾಥ್ ಪಾತ್ರ ಬಹು ಜನಪ್ರಿಯವಾಗಿತ್ತು. 2023ರಲ್ಲಿ ತೆರೆಕಂಡ ಹರೀಶ್ ಕಲ್ಯಾಣ್ ನಟನೆಯ ʼಲೆಟ್ಸ್ ಗೆಟ್ ಮ್ಯಾರಿಡ್ʼ ಶ್ರೀನಾಥ್ ಅಭಿನಯದ ಕೊನೆಯ ಸಿನಿಮಾ.
ನಟನೆಯ ಜತೆಗೆ ಶ್ರೀನಾಥ್ ನಿರ್ದೇಶನದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ʼಮುತ್ತಿರೈʼ (2009) ಮತ್ತು ;ಪುಲ್ಲುಮ್ ಆಯುಧಮ್ʼ (2014) ಎಂಬೆರಡು ತಮಿಳು ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಬಹಳ ಹಿಂದಿನಿಂದಲೂ ಶ್ರೀನಾಥ್ ಮತ್ತು ವಿಜಯ್ ಉತ್ತಮ ಸ್ನೇಹಿತರು. ಇವರಿಬ್ಬರು ಒಂದೇ ಕಾಲೇಜಿನಲ್ಲಿ ಓದಿ ಒಟ್ಟಿಗೆ ಚಿತ್ರರಂಗ ಪ್ರವೇಶಿಸಿದವರು. ಇದೀಗ ಈ ಗೆಳೆತನ ರಾಜಕೀಯದಲ್ಲಿಯೂ ಮುಂದುವರಿದಿದೆ.
ʼಜನ ನಾಯಕನ್ʼ ರಿಲೀಸ್ ಡೇಟ್ ಫಿಕ್ಸ್
ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎಚ್.ವಿನೋದ್ ಆ್ಯಕ್ಷನ್ ಕಟ್ ಹೇಳುತ್ತಿರುವ, ವಿಜಯ್ ನಟನೆಯ ಕೊನೆಯ ಚಿತ್ರ ʼಜನ ನಾಯಕನ್ʼ ಅನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಇತ್ತೀಚೆಗೆ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. 2026ರ ಜ. 9ರಂದು ವಿಶ್ವಾದ್ಯಂತ ʼಜನ ನಾಯಕನ್ʼ ಬಿಡುಗಡೆಯಾಗಲಿದೆ.