Wednesday, 18th September 2024

Roopa Gururaj Column: ಮಾಡಿದ ಅನಾಚಾರ ಮನೆಯವರನ್ನೂ ಕಾಡುತ್ತದೆ !

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಅಶೋಕ ವನದ ಒಂದು ಮರದ ಕೆಳಗೆ, ರಾವಣನಿಂದ‌ ಅಪಹರಿಸಲ್ಪಟ್ಟ ಸೀತೆ ಬಹಳ ದುಃಖಿತಳಾಗಿ ಕುಳಿತಿದ್ದಳು. ಆಗ ಅಲ್ಲಿಗೆ ವಿಭೀಷಣನ ಹೆಂಡತಿ ಸರಮಾದೇವಿ ಬಂದು ಸೀತೆಯನ್ನು ಸಮಾಧಾನಪಡಿಸತೊಡಗಿದಳು. ಆಗ ಸೀತೆಗೆ ಯಾರ ಸಮಾಧಾನದ ಮಾತೂ ಬೇಡ ವಾಗಿತ್ತು. ‘ನಾನು ನಿನ್ನೊಂದಿಗೆ ಮಾತನಾಡಲೆಂದೇ ಬಂದಿದ್ದು ಸೀತೆ’ ಎಂದಳು ಸರಮಾದೇವಿ. ಅದಕ್ಕೆ ಸೀತೆ ‘ನಾನು ನತದೃಷ್ಟೆ, ಶ್ರೀರಾಮನಂತಹ ಪೂಜ್ಯ ಪತಿಯನ್ನಗಲಿರುವವಳು. ನನ್ನೊಡನೆ ಮಾತನಾಡಲು ಏನಿದೆ? ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ’ ಎಂದಳು.

ಆಗ ಸರಮಾದೇವಿ ‘ನೀನು ದುಃಖಿತಳು ನಿಜ ಸೀತೆ, ಆದರೆ ನಿನಗಿಂತಲೂ ಹೆಚ್ಚು ದುಃಖಿತಳು ನಾನು. ದಯವಿಟ್ಟು ನಿನ್ನೊಂದಿಗೆ ಮಾತನಾಡಲು ನನಗೂ ಸ್ವಲ್ಪ ಸಮಯ ಕೊಡು. ನಾನು ನಿನ್ನೊಂದಿಗೆ ಮಾತನಾಡಲೇಬೇಕು’ ಎಂದಳು. ಸೀತೆಗೆ ಆಶ್ಚರ್ಯವಾಯಿತು, ಲಂಕಾಸುರ ರಾವಣನ ತಮ್ಮನ ಹೆಂಡತಿಯಾದ ಈಕೆ ನನಗಿಂತಲೂ ಹೆಚ್ಚು ದುಃಖಿಯೇ! ಎಂದು ಅವಳ ಮುಖವನ್ನು ಆಶ್ಚರ್ಯದಿಂದ ನೋಡಿದಳು.

ಆಗ ಸರಮಾದೇವಿ ‘ನೀನು ನನ್ನ ಭಾವನಾದ ರಾವಣಾಸುರನಿಂದ ಅಪಹರಿಸಲ್ಪಟ್ಟವಳಾಗಿ, ನಮ್ಮ ರಾಕ್ಷಸರ ಹಿಂಸೆಯನ್ನು ಅನುಭವಿಸುತ್ತಾ ದುಃಖಿತಳಾಗಿದ್ದೀಯ ನಿಜವೇ. ಆದರೆ ನಿನ್ನ ಮೇಲೆ ಎಲ್ಲರ ಅನುಕಂಪ ಬಹಳ ವಾಗಿದೆ. ನಿನ್ನ ಪರಿಸ್ಥಿತಿಯನ್ನು ನೋಡಿದವರು, ಕೇಳಿದವರು ನಿನಗಾಗಿ ಮರುಗು ತ್ತಾರೆ. ರಾವಣ ಹೀಗೆ ಮಾಡಬಾರ ದಿತ್ತೆಂದು, ಎಲ್ಲರೂ ಒಳಗೊಳಗೇ ಹೇಳುತ್ತಾರೆ. ಆದರೆ ನಮ್ಮ ಪರಿಸ್ಥಿತಿ ನೋಡು! ನಾವು ಲೋಕ ನಿಂದಿತರು. ನಮ್ಮ ಭಾವ ರಾವಣ, ಅವನ ವಯಸ್ಸಿಗೆ, ವಿದ್ಯೆ-ಘನತೆಗೆ, ಪೌರುಷಕ್ಕೆ ಸರಿ ಇರದ ನೀಚ ಕೆಲಸವನ್ನು ಮಾಡಿದ್ದಾನೆ.

ಅದು ನಮ್ಮ ಕುಟುಂಬಕ್ಕೊಂದು ಕಳಂಕ, ಅವಮಾನ. ಲಂಕೆಯ ಜನರೆಲ್ಲರೂ ಒಳಗೊಳಗೇ ನಮ್ಮನ್ನು ನಿಂದಿಸಿ, ಹಿಯಾಳಿಸುತ್ತಾರೆ.’ ಮಾತನ್ನು ಒಂದುವರೆಸುತ್ತಾ ಸರಮಾದೇವಿ ‘ನಮಗೊಬ್ಬಳು ಮಗಳಿದ್ದಾಳೆ. ದೊಡ್ಡಪ್ಪನನ್ನು ಕಂಡರೆ ಅವಳಿಗೂ ಬಹಳ ಆದರ ಗೌರವ ವಿಶ್ವಾಸವಿತ್ತು. ಆದರೆ ಈ ಘಟನೆಯ ನಂತರ ಅವಳೀಗ ದೊಡ್ಡಪ್ಪನನ್ನು ಕಂಡರೆ ಹೆದರುತ್ತಾಳೆ. ಅರಮನೆ ಯೊಳಗೆ ನಾವು ಇಂಥ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ನಮಗಿಂತ
ದೌರ್ಭಾಗ್ಯ ಇನ್ಯಾರಿಗಿದೆ, ಹೇಳು ಸೀತೆ?’ ಎಂದಳು.

‘ನಾವು ದುಃಖದಲ್ಲಿದ್ದಾಗ ಲೋಕದ ಜನರ ಅನುಕಂಪ ನಮ್ಮ ಮೇಲೆ ಇದ್ದರೆ ಅದೊಂದು ಸಮಾಧಾನ. ಆದರೆ ಎಷ್ಟೇ ಸಿರಿ ಸಂಪತ್ತು ಅಧಿಕಾರವಿದ್ದರೂ, ಲೋಕದ ಜನ ನಮ್ಮನ್ನು ನೋಡಿ ಅಸಹ್ಯಪಡುತ್ತಾ, ಅಪಹಾಸ್ಯ ಮಾಡುತ್ತಿದ್ದರೆ ಅಂತಹ ಮನೆಯವರು ಬಹಳ ಅವಮಾನ, ದುಃಖ ಪಡಬೇಕಾಗುತ್ತದೆ. ರಾವಣನ ಮನೆಯ ರಾಣಿವಾಸದವರೆಲ್ಲ ಇಂತಹ ಅವಮಾನದಲ್ಲಿ ಬೆಂದು ಒದ್ದಾಡುತ್ತಿದ್ದೇವೆ’ ಎಂದು ಹೇಳುತ್ತಾ ಜೋರಾಗಿ ಅತ್ತು ಬಿಟ್ಟಳು.

ದುಃಖವನ್ನು ಅನುಭವಿಸಿದವರಿಗೆ ಮಾತ್ರ, ಇನ್ನೊಬ್ಬರ ದುಃಖದ ಬೇಗುದಿಯೂ ಅರ್ಥವಾಗುವುದು. ಹಾಗಾಗಿ ಸೀತೆಗೆ ಸರಮೆಯ ದುಃಖ ಅರ್ಥ ವಾಗಿ, ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಎಂದು ಸಮಾಧಾನ ಪಡಿಸಿದಳು.

ರಾಮಾಯಣದ ಒಂದು ಚಿಕ್ಕ ಘಟನೆಯಾದರೂ ಇದು ನಮಗೆ ಜೀವನದ ದೊಡ್ಡ ಪಾಠವನ್ನು ಹೇಳಿಕೊಡುತ್ತದೆ. ತಪ್ಪು ಹೆಜ್ಜೆ ಇಡುವಾಗ ಒಂದಲ್ಲ ೧೦೦ ಬಾರಿ ಯೋಚಿಸಬೇಕು. ಏಕೆಂದರೆ ಆ ತಪ್ಪಿಗೆ ನಾವೊಬ್ಬರೇ ಶಿಕ್ಷೆ ಅನು ಭವಿಸುವುದಿಲ್ಲ. ಅದು ನಮಗಿಂತ ಹೆಚ್ಚಾಗಿ ನಮ್ಮ ಕುಟುಂಬದವರನ್ನು ನೋವು, ಅವಮಾನ, ಹಿಂಸೆಗೆ ತಳ್ಳುತ್ತದೆ. ಜೀವನದು ದ್ದಕ್ಕೂ ತಮ್ಮದೇ ಆದ ಪ್ರಾಮಾಣಿಕ ಬದುಕನ್ನ, ನಿಯಮವನ್ನ ಪಾಲಿಸಿಕೊಂಡು ಬಂದವರಿಗೆ ತಮ್ಮ ದಲ್ಲದ ತಪ್ಪಿಗೆ ಆಗುವ ನೋವು ಅವಮಾನ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತದೆ.

ಮನುಷ್ಯರ ಮೇಲಿನ ವಿಶ್ವಾಸವೇ ಅವರಿಗೆ ಹೊರಟು ಹೋಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ತಮ್ಮದಲ್ಲದ ತಪ್ಪಿಗೆ ಅಜೀವ ಪರ್ಯಂತ ಅವರು ಬೆಲೆ ತೆರಬೇಕಾಗುತ್ತದೆ. ನಮ್ಮನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿ ಮಮತೆ ಅಕ್ಕರೆ ತೋರಿದ ಕುಟುಂಬದವರಿಗೆ ನಾವು ಇಂತಹ ಒಂದು ಶಿಕ್ಷೆ ಕೊಡಬೇಕೇ? ಖಂಡಿತ ಇಲ್ಲ. ಕ್ಷಣಿಕ ಸುಖಕ್ಕೆ ಮರುಳಾಗಿ ತಪ್ಪು ಹೆಜ್ಜೆ ಇಡುವ ಮುನ್ನ ನೂರು ಬಾರಿ ಯೋಚಿಸಿ. ಆಕ್ಷಣಿಕ ಸುಖಕ್ಕಿಂತ ಜೀವನದ ನೆಮ್ಮದಿ ಬಹಳ ದೊಡ್ಡದು.

Leave a Reply

Your email address will not be published. Required fields are marked *