Wednesday, 18th September 2024

Roopa_Gururaj Column: ಪಾಂಡುರಂಗನ ಲೀಲಾ ವಿನೋದ

ಪುರಂದರದಾಸರು ಪಂಡರಾಪುರ ಕ್ಷೇತ್ರದಲ್ಲಿ ಇದ್ದಾಗ ಒಂದು ಘಟನೆ ನಡೆಯಿತು. ಒಂದು ದಿನ ರಾತ್ರಿ ದಾಸರು ಕೈಕಾಲು ತೊಳೆದುಕೊಳ್ಳಲು ನೀರು ತರಲು ಅವರ ಶಿಷ್ಯ ಅಪ್ಪಣ್ಣ ಭಾಗವತನಿಗೆ ಹೇಳಿ ಹೊಲಕ್ಕೆ ಹೋದರು. ಆದರೆ ಅಪ್ಪಣ್ಣ ನಿದ್ದೆಗಣ್ಣಿನಲ್ಲಿ ಆಯಿತು ಎಂದು  ಹೇಳಿದವನು ಹಾಗೆ ಮಲಗಿ ನಿದ್ರೆ ಹೋಗಿಬಿಟ್ಟ. ಶಿಷ್ಯನಿಗಾಗಿ ಕಾದು ಕಾದು ದಾಸರಿಗೆ ಸಾಕಾಗಿ ಹೋಗಿತ್ತು. ಅಷ್ಟರಲ್ಲಿ ಪಾಂಡುರಂಗನೆ ಶಿಷ್ಯ
ಅಪ್ಪಣ್ಣನಂತೆ ಬದಲಾಗಿ ತಂಬಿಗೆಯಲ್ಲಿ ನೀರು ತಂದು ದಾಸರಿಗೆ ಕೊಟ್ಟ. ದಾಸರು ಕೈಕಾಲು ತೊಳೆದು ಎಷ್ಟು ಹೊತ್ತು ನಿನಗೆ ನೀರು ತರಲು ಎಂದು ಕೋಪದಿಂದ ಹೇಳುತ್ತಾ ಖಾಲಿ ತಂಬಿಗೆಯಿಂದ ಪಾಂಡುರಂಗನ ತಲೆಯಮೇಲೆ ಗಟ್ಟಿಯಾಗಿ ಚಚ್ಚಿದರು. ಪಾಂಡುರಂಗ ನೋವಿನಿಂದ ಹಾ ಎಂದು ಕಿರುಚಿದ. ನಂತರ ಪಾಂಡುರಂಗ ತಂಬಿಗೆ ತೆಗೆದುಕೊಂಡ ಹೋಗಿ ಅಂತರ್ಧಾನನಾದ.

ದಾಸರು ಅಲ್ಲಿಂದ ಸೀದಾ ಇನ್ನೂ ಕಣ್ಣು ಹೊಸಕಿ ಕೊಳ್ಳುತ್ತಾ ಏಳುತ್ತಿದ್ದ ಅಪ್ಪಣ್ಣನ ಹತ್ತಿರ ಬಂದರು. ಮಂಪರಿನಲ್ಲಿದ್ದ ಅಪ್ಪಣ್ಣ ‘ಕ್ಷಮಿಸಿ ಗುರುಗಳೇ ತಪ್ಪಾಯಿತು’ ಎಂದು ಹೇಳಿದ. ಆಗ ದಾಸರು ‘ಅಲ್ವೋ ಅಪ್ಪಣ್ಣ ಈಗ್ಯಾಕೆ ಕ್ಷಮೆ ಕೇಳ್ತಿದ್ದಿಯಾ? ಆಗಲೆ ನೀರು ತಂದುಕೊಟ್ಯಲ್ಲ ಬಿಡು’ ಎಂದರು. ಅಪ್ಪಣ್ಣ ‘ಗುರುಗಳೇ ನಾನು ನೀರು ತಂದುಕೊಟ್ಟಿಲ್ಲ, ನಾನು ಈಗ ಏಳ್ತಾ ಇದೀನಿ’ ಎಂದಾಗ, ಇನ್ನೂ ನಿದ್ದೆಯ ಮಂಪರು ಇಳಿದಿಲ್ಲವೇನೋ ಎಂದುಕೊಂಡ ದಾಸರು ‘ಅಪ್ಪಣ್ಣ ತಂಬಿಗೆಯಿಂದ ಥಳಿಸಿದ್ದು ನಿನಗೆ ಗೊತ್ತಿಲ್ಲವೇನೋ’ ಎಂದರು. ‘ಇಲ್ಲ ಗುರುಗಳೇ ನಾನು ಬಂದೇ ಇಲ್ಲ’ ಎಂದ. ಆಶ್ಚರ್ಯದಿಂದ ದಾಸರು ಉಳಿದ ಶಿಷ್ಯರನ್ನೆಲ್ಲ ವಿಚಾರಿಸಿದರು. ಶಿಷ್ಯರಾರು ಬಂದಿಲ್ಲವೆಂದು ತಿಳಿಯಿತು.

ಹಾಗೆಯೇ ಕ್ಷಣಕಾಲ ಕಣ್ಣುಮುಚ್ಚಿ ವಿಠಲನನ್ನು ಧ್ಯಾನಿಸಿದಾಗ ಅವರ ದಿವ್ಯ ದೃಷ್ಟಿಗೆ ಗೋಚರವಾಯಿತು. ತಂಬಿಗೆಯಲ್ಲಿ ನೀರು ತಂದು ಕೊಟ್ಟಿದ್ದು ಪಾಂಡುರಂಗ ಎಂದು. ಆಗ ದಾಸರು, ಪಾಂಡುರಂಗ ಎಂಥ ಹೀನ ಕಾರ್ಯವನ್ನು ಮಾಡಿ ನನ್ನನ್ನು ಮೋಸಗೊಳಿಸುವೆಯಾ? ಎಂದು ಪರಿಪರಿಯಾಗಿ ಪರಿತಪಿಸಿದರು. ಮರುದಿನ ದೇವಸ್ಥಾನದಲ್ಲಿ ಅರ್ಚಕರು ಪಾಂಡುರಂಗನ ಅಭಿಷೇಕ ಮಾಡಲು ಬಂದಾಗ ಅವನ ಹಣೆಯಲ್ಲಿ ಗುಬುಟು ಬಂದಿದ್ದು ಎರಡು ಕಣ್ಣುಗಳಿಂದ ನೀರು ಇಳಿಯುತ್ತಿದ್ದುದ್ದನ್ನು ಕಂಡು ಗಾಬರಿಯಿಂದ ಹೊರಗೆ ಬಂದು ಎಲ್ಲರಿಗೂ ಕೇಳುವಂತೆ ಜೋರಾಗಿ ಹೇಳಿ ತಿಳಿಸಿದಾಗ ಇದನ್ನು ನೋಡಲೆಂದೇ ಊರಿಗೆ ಊರೇ ನೆರೆಯಿತು. ಅರ್ಚಕರು ಗಾಬರಿಯಾಗಿದ್ದರು. ಅದೇ ಸಮಯಕ್ಕೆ ದಾಸರು ಅದೇ ಮಾರ್ಗವಾಗಿ ಬರುತ್ತಿದ್ದರು. ದಾಸರು ಪಾಂಡುರಂಗನ ಅಂತರಂಗದ ಭಕ್ತರು ಮತ್ತು ಅತಿಮಾನುಷ ಶಕ್ತಿಯುಳ್ಳವರು ಎಂದು ತಿಳಿದಿದ್ದ ದೇವಾಲಯದ ಮುಖ್ಯಸ್ಥರು ಓಡಿಹೋಗಿ ದಾಸರ ಕಾಲಿಗೆ ಬಿದ್ದು ವಿಷಯ ತಿಳಿಸಿದರು.

ಕೂಡಲೇ ದಾಸರು ಗರ್ಭಗುಡಿಯೊಳಗೆ ಪ್ರವೇಶಿಸಿ ಪಾಂಡುರಂಗನನ್ನು ನೋಡಿದರು ಅಲ್ಲಿರುವ ದೀಪದ ಬೆಳಕಿನಲ್ಲಿ ಅವನ ಹಣೆಯ ಗುಬುಟನ್ನು ಕಂಡರು, ‘ಪಾಂಡುರಂಗ ಇದೇನೋ ನಿನ್ನ ಆಟ ಮಹಾಭಾರತದಲ್ಲಿ ಭೀಷ್ಮ ,ದ್ರೋಣರು ಬಿಟ್ಟ ಬಾಣಕ್ಕಿಂತ ನಾನು ಹೊಡೆದ ತಂಬಿಗೆ ಪೆಟ್ಟಿನ ನೋವು ನಿನಗೆ ಹೆಚ್ಚಾಯಿತಾ? ಅಲ್ವೋ ಪಾಂಡುರಂಗ ನೀರು ತೆಗೆದುಕೊಂಡು ಬರಲು ನಿನಗೆ ಯಾರು ಹೇಳಿದರು? ಅಪ್ಪಣ್ಣನಿಗೆ ಮೈಮರೆತು ನಿದ್ರಿಸುವಂತೆ ಮಾಡಿದವರು ಯಾರು? ಪುಣ್ಯಾತ್ಮ ಸಾಕು ಮಾಡು ನಿನ್ನ ನಾಟಕವನ್ನು’ ಎಂದು ಮಮತೆಯಿಂದ ಹೇಳುತ್ತಾ ಅಪಾದಮಸ್ತಕ ಪಾಂಡುರಂಗನನ್ನೇ ನೋಡುತ್ತಾ ಕಣ್ಣೀರನ್ನು ಒರೆಸಿ ಅವನ ಹಣೆಯ ಗುಬುಟಿನ ಮೇಲೆ ಕೈಯಾಡಿಸಿದರು. ತಕ್ಷಣ ಎಲ್ಲವೂ ಮಾಯವಾಯಿತು. ನಂತರ ಹೊರಗೆ ಬಂದ ದಾಸರು ಭಕ್ತರನ್ನು ಉದ್ದೇಶಿಸಿ ಎಲ್ಲ ಸರಿ ಹೋಗಿದೆ ಪಾಂಡುರಂಗ ಯಾರೋ ಭಕ್ತನೊಂದಿಗೆ ಸರಸ ವಾಡಿದ್ದಾನೆ.

ಚಿಂತಿಸುವ ಅಗತ್ಯವಿಲ್ಲ, ಅಭಿಷೇಕ ಪೂಜೆ ಮುಂದುವರಿಯಲಿ ಎಂದರು. ಎಲ್ಲರೊಳಗಿರುವ ಭಗವಂತ ಸದಾ ನಮ್ಮನ್ನು ಗಮನಿಸುತ್ತಿರುತ್ತಾನೆ. ಯಾರಿಗಾದರೂ ನೋವು ಹಿಂಸೆ, ಮೋಸ ಮಾಡುವ ಮೊದಲು ನೂರು ಬಾರಿ ಯೋಚಿಸಿ.

Leave a Reply

Your email address will not be published. Required fields are marked *