ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಮ್ಮೆ ಬುದ್ಧ ತಮ್ಮ ಶಿಷ್ಯನೊಬ್ಬನನ್ನು ಪ್ರಶ್ನಿಸಿದರು, ‘ಜೀವನದಲ್ಲಿ ನಿನಗೆ ಯಾವುದಾದರೂ ವ್ಯರ್ಥವಾಗಿ ಕಂಡಿರುವುದಿದೆಯೇ? ನಿನಗೆ ವ್ಯರ್ಥವಾಗಿ ಕಂಡಿದ್ದು, ಏನಾದರೂ ಇದ್ದರೆ ಅದನ್ನು ತೆಗೆದುಕೊಂಡು ಬಾ’ ಎಂದು ಹೇಳಿದರು. ಶಿಷ್ಯ ಬಹಳಷ್ಟು ದಿನಗಳವರೆಗೆ ವ್ಯರ್ಥವಾದದ್ದರ ಬಗೆ ಉಪಯೋಗಕ್ಕೆ ಬಾರದುದರ ಬಗೆ ಆಲೋ
ಚಿಸಿದ, ಹುಡುಕಿದ. ಆದರೆ ಅವನಿಗೆ ಯಾವುದು ಕಾಣಿಸಲೇ ಇಲ್ಲ, ಹೊಳೆಯಲೂ ಇಲ್ಲ.
ಬುದ್ಧ ಪ್ರತಿದಿನ ಅವನನ್ನು ಕೇಳುತ್ತಲೇ ಇದ್ದರು, ‘ಏನಾಯಿತು, ಏನಾದರೂ ವ್ಯರ್ಥವಾದದ್ದು ಕಾಣಿಸಿತೇ?’ ಎಂದು.
ಹೀಗೆ ಎರಡು ಮೂರು ತಿಂಗಳುಗಳೇ ಕಳೆದವು. ಒಂದು ದಿನ ಶಿಷ್ಯ ಬುದ್ಧರ ಬಳಿಗೆ ಬಂದು, ‘ಗುರುಗಳೇ, ಕ್ಷಮಿಸಿ, ನಾನು ಎಲ್ಲ ಕಡೆ ಹುಡುಕಿ ನೋಡಿದೆ, ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ, ವಿಚಾರಿಸಿದೆ, ಆದರೆ ನಿಮ್ಮ ಪ್ರಶ್ನೆಗೆ ನನ್ನಿಂದ ಉತ್ತರ ಹುಡುಕಲಾಗಲಿಲ್ಲ.
ಬಹಳ ದಿನ ರಾತ್ರಿಯೆ ನಿದ್ದೆಗೆಟ್ಟು, ವ್ಯರ್ಥವಾದುದರ ಬಗ್ಗೆ ಆಲೋಚಿಸಿದೆ, ಆದರೆ ನನಗೆ ಉಪಯೋಗಕ್ಕೆ ಬಾರದ್ದು, ವ್ಯರ್ಥವಾದದ್ದು ಯಾವುದೂ ಕಂಡುಬರಲಿಲ್ಲ, ಇದು ನನ್ನಿಂದಾಗುವ ಕೆಲಸವಲ್ಲ’ ಎಂದು ಹೇಳಿದ. ‘ಸರಿ ಹಾಗಿದ್ದರೆ, ಇನ್ನೊಂದು ಕೆಲಸ ಮಾಡು, ಉಪಯೋಗಕ್ಕೆ ಬರುವ, ವ್ಯರ್ಥವಲ್ಲದ ಯಾವುದಾದರೂ ಒಂದನ್ನು ತೆಗೆದುಕೊಂಡು ಬಾ, ಆದರೆ ಮೊದಲಿನ ಪ್ರಶ್ನೆಗೆ ತೆಗೆದುಕೊಂಡ ಹಾಗೆ ಇದಕ್ಕೂ ಬಹಳ ಸಮಯವನ್ನು ತೆಗೆದು ಕೊಳ್ಳಬೇಡ’ ಎಂದು ಅವನಿಗೆ ಹೇಳಿದರು ಬುದ್ಧ.
ಆಗ ಶಿಷ್ಯ ನಗುತ್ತಾ, ‘ಇದಕ್ಕೇನು ಹೆಚ್ಚಿನ ಸಮಯ ಬೇಕಿಲ್ಲ ಎಂದೆನ್ನುತ್ತಾ, ಅ ನೆಲದಲ್ಲಿ ಬಿದ್ದಿದ್ದ ಒಂದು ಹುಲ್ಲಿನ ಕಡ್ಡಿಯನ್ನು ತೆಗೆದು ಥಟ್ಟೆಂದು ಬುದ್ದರ ಕೈಗೆ ಕೊಡುತ್ತಾ, ಇದುವೇ, ಸಾಕ್ಷಿ, ಇದು ಕೂಡಾ ಬೆಲೆಬಾಳುವಂತದ್ದೇ’ ಎಂದ.
ಬುದ್ಧ, ಆತನನ್ನು ಹೆಮ್ಮೆಯಿಂದ ನೋಡಿ ಆಶೀರ್ವದಿಸುತ್ತಾ, ‘ನಿಜಕ್ಕೂ ಜೀವನವನ್ನು ನೋಡ ಬೇಕಾದ ದೃಷ್ಟಿ ಇದುವೇ, ಇದೇ ಸರಿಯಾದ ದೃಷ್ಟಿ, ಸಂಯಕ್ ದೃಷ್ಟಿ’ ಎಂದರು. ‘ನೀನು ಜೀವನದಲ್ಲಿ ವ್ಯರ್ಥವಾದದ್ದನ್ನು ಹುಡು
ಕಲು ತಿಂಗಳುಗಟ್ಟಲೆ ಶ್ರಮವಹಿಸಿದರೂ ಕಾಣದೆ ನನಗೆ ಬಹಳ ಸಂತೋಷವಾಗಿದೆ. ಇದೇ ಸತ್ಯ ಇಡೀ
ಜೀವನವೇ ಪವಿತ್ರ, ಹಾಗೂ ಅಮೂಲ್ಯವಾದದ್ದು. ಜೀವನದಲ್ಲಿ ಪ್ರತಿಯೊಂದು ಪವಿತ್ರ, ಅಮೂಲ್ಯವಾದದ್ದೇ. ಒಂದೊಂದು ಕ್ಷಣವೂ, ಅಮೂಲ್ಯ ಹಾಗೂ ಉಪಯುಕ್ತವಾದದ್ದು. ಆದರೆ ಅದನ್ನು ನೋಡಲು, ಗುರುತಿಸಲು ಕಣ್ಣುಗಳು ಬೇಕು ಜೊತೆ ಜೊತೆಗೆ ಅನುಭವಿಸಲು ಒಳ್ಳೆಯ ಮನಸ್ಸೂ ಬೇಕು.
ನೀನು ನನ್ನ ಶಿಷ್ಯನಾಗಿದ್ದಕ್ಕೂ ಸಾರ್ಥಕ’ ಎಂದು ಹೆಮ್ಮೆಯಿಂದ ಅವನ ಬೆನ್ನು ತಟ್ಟಿದರು ಬುದ್ಧ. ಒಮ್ಮೆ ಯೋಚಿಸಿ ನೋಡಿ ಇಂತಹ ಮನಸ್ಥಿತಿಯನ್ನು ಬೆಳೆಸಿಕೊಂಡರೆ ನಾವು ನಮ್ಮ ಬದುಕಿನಲ್ಲಿ ಬರುವ ಪ್ರತಿ ವ್ಯಕ್ತಿಯನ್ನು ಗೌರವದಿಂದ ಕಾಣುತ್ತೇವೆ. ನಮ್ಮ ಜೀವನದಲ್ಲಿ ಎದುರಾಗುವ ಯಾವ ವ್ಯಕ್ತಿಯೂ ಕೂಡ ನಿಕೃಷ್ಟರಲ್ಲ.
ಹಣ ಅಧಿಕಾರ ಇರುವ ಮತ್ತೊಬ್ಬರು ಉತ್ಕೃಷ್ಟರಲ್ಲ. ಎಲ್ಲರಿಗೂ ಅವರವರದ್ದೇ ಆದ ಸ್ಥಾನ ಇದ್ದೇ ಇರುತ್ತದೆ.
ಸಮಯಕ್ಕನುಸಾರ ಅವರು ನಮ್ಮ ಜೀವನಕ್ಕೆ ಯಾವ ರೀತಿ ಬೆಳಕಾಗಬಹುದು ಎಂದು ನಮಗೆ ಅರಿವಿಗೆ ಬರುತ್ತಾ ಹೋಗುತ್ತದೆ. ಆದರೆ ಒಂದೇ ಸಲ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಎಲ್ಲಕ್ಕೂ ಸಮಯ ಬರಬೇಕು. ಕೆಲವೊಮ್ಮೆ ನಾವು ಕೆಲವರನ್ನು ಅನಗತ್ಯವಾಗಿ ದೂರ ಮಾಡಿಕೊಂಡುಬಿಡುತ್ತೇವೆ. ಒಂದಷ್ಟು
ವರ್ಷಗಳ ನಂತರ ಅವರ ಇಲ್ಲದಿರುವಿಕೆಯ ಬೆಲೆ ನಮಗೆ ತಿಳಿದಾಗ ಬಹಳ ವಿಳಂಬವಾಗಿರುತ್ತದೆ. ಆಗ
ಪರಿತಪಿಸಿ ಪ್ರಯೋಜನವಿಲ್ಲ.
ಅಂತೆಯೇ ಪ್ರತಿಯೊಂದು ವಸ್ತುವಿಗೂ ಕೂಡ ಅದರದ್ದೇ ಆದ ಬೆಲೆ ಇರುತ್ತದೆ. ಇಂದು ಬೇಡವೆನಿಸಿದ್ದು ನಾಳೆ ಮತ್ತಾವುದೋ ರೀತಿಯ ಪ್ರಯೋಜನಕ್ಕೆ ಬರಬಹುದು. ಅಥವಾ ಮತ್ತಾ ರಿಗೋ ಅದು ಬಹಳ ಉಪಯುಕ್ತವಾಗಿರ ಬಹುದು. ನಮಗೆ ಅದು ಬೇಡ ವೆನಿಸಿದ ಮಾತ್ರಕ್ಕೆ ಅದು ನಿರೂಪಯುಕ್ತವಾಗಲು ಸಾಧ್ಯವಿಲ್ಲ. ವ್ಯಕ್ತಿಗಳನ್ನು,
ಸಾಮಾನುಗಳನ್ನು ನಿರೂಪ ಯುಕ್ತ ಎಂದು ನಿರ್ಧರಿಸುವ ಮೊದಲು ಸಾಕಷ್ಟು ಸಮಯ ಕೊಡಿ, ನೂರು ಬಾರಿಯ ಯೋಚಿಸಿ. ಒಮ್ಮೆ ಕಳೆದುಕೊಂಡ ಸಮಯ, ವ್ಯಕ್ತಿ, ವಸ್ತುಗಳು ಮತ್ತೆಂದೂ ಮರಳಿ ಸಿಗಲಾರವು.
ಇದನ್ನೂ ಓದಿ: Roopa Gururaj Column: ‘ಕಾವೇರಿʼ ಉಗಮದ ಕಥೆ