Wednesday, 18th September 2024

Roopa Gururaj Column: ಯಶಸ್ಸಿನ ಗುಟ್ಟನ್ನು ತಿಳಿಸಿದ ಗುರುಗಳು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಉರಿನಲ್ಲಿ ಒಬ್ಬ ಯುವಕನಿದ್ದ. ಅವನು ಜೀವನದಲ್ಲಿ ಒಬ್ಬ ಯಶಸ್ವಿ ವ್ಯಕ್ತಿಯಾಗಬೇಕು ಎಂದುಕೊಂಡಿದ್ದ. ಹೀಗಾಗಿ ಅವನು ಹಲವಾರು ರೀತಿಯ ಕೆಲಸಗಳನ್ನು ಮಾಡುತ್ತಿದ್ದ. ಆದರೆ ಯಾವುದೂ ಅವನಿಗೆ ಕೈ ಹಿಡಿಯು ತ್ತಿರಲಿಲ್ಲ. ಏಕೆಂದರೆ ಇನ್ನೇನು ಕೆಲಸ ಮುಗಿಸಿದ ಲಾಭ ಬರುತ್ತದೆ ಅನ್ನುವಾಗ ಅದು ಹೇಗೋ ಕುಸಿದು ಬೀಳುತ್ತಿತ್ತು. ಹೀಗಾಗಿ ಅವನು ಮಾಡಿದ್ದ ಕೆಲಸಗಳೆಲ್ಲವೂ ಹೊಳೆಯಲ್ಲಿ ಹುಣಸೆ‌ ಹಣ್ಣು ಕಿವುಚಿದಂತೆ ಆಗುತ್ತಿತ್ತು.

ಇದರಿಂದ ಅವನು ತುಂಬಾ ಯೋಚನೆಗೀಡಾದ. ನನ್ನ ಜೊತೆ ಇದ್ದವರೆಲ್ಲ ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ ನನಗೇಕೆ ಆಗುತ್ತಿಲ್ಲ. ಯಶಸ್ಸನ್ನು ಸಾಧಿಸಲು ಏನು ಮಾಡಬೇಕು? ಯಶಸ್ಸಿನ ಗುಟ್ಟನ್ನು ತಿಳಿಯಲೇಬೇಕು ಎಂದುಕೊಂಡು ಒಬ್ಬ ಗುರುವನ್ನು ಹುಡುಕುತ್ತಾ ಹೊರಟ.

ಕೊನೆಗೂ ಅವನಿಗೊಬ್ಬ ಗುರು ಸಿಕ್ಕಿದರು. ಗುರು ಯುವಕನ ಬಾಡಿದ ಮುಖವನ್ನು ಕಂಡು, ‘ಮಗು ನಿನ್ನ ಮುಖ ಏಕೆ ಇಷ್ಟೊಂದು ಚಿಂತೆಯಲ್ಲಿ ತುಂಬಿದೆ. ನಿನಗಿರುವ ಸಮಸ್ಯೆಯಾದರೂ ಏನು’ ಎಂದು ಕೇಳಿದರು. ಆಗ ಯುವಕನು ‘ಗುರುಗಳೇ, ನಾನು ಜೀವನದಲ್ಲಿ ಯಶಸ್ಸನ್ನು ಗಳಿಸಬೇಕೆಂದು ಹಲವು ವಿಧವಾದ ಕೆಲಸಗಳನ್ನು ಮಾಡಿದೆ ಇನ್ನೇನು ಗುರಿ ಮುಟ್ಟುತ್ತೇನೆ ಅನ್ನುವಾಗ ಅದು ಹೇಗೋ ಕುಸಿದು ಬಿಡುತ್ತದೆ. ನಾನೊಬ್ಬ ಯಶಸ್ವಿ ಮನುಷ್ಯನಾಗಲು ಏನು ಮಾಡಬೇಕು ಆ ರಹಸ್ಯವನ್ನು ನನಗೆ ತಿಳಿಸಿ ಗುರುಗಳೇ’ ಎಂದು ದೈನ್ಯತೆಯಿಂದ ಕೇಳಿದ. ಗುರುಗಳು ಯುವಕನ ಮಾತನ್ನು ಆಲಿಸಿ, ‘ನೋಡು ಮಗು ಈಗ ಅನೇಕ ವಿದ್ಯಾರ್ಥಿಗಳು ಇಲ್ಲಿದ್ದಾರೆ.

ಎಲ್ಲರ ಮುಂದೆ ರಹಸ್ಯದ ಗುಟ್ಟನ್ನು ಹೇಳಲು ಆಗುವುದಿಲ್ಲ. ನಾನು ಸಂಜೆ ನದಿಗೆ ಸ್ಥಾನಕ್ಕೆ ಹೋಗುತ್ತೇನೆ ಅಲ್ಲಿಗೆ ಬಾ ನಿನಗೆ ರಹಸ್ಯದ ಗುಟ್ಟನ್ನು ತಿಳಿಸಿಕೊಡುತ್ತೇನೆ’ ಎಂದರು. ಈ ಮಾತಿನಿಂದ ಯುವಕನಿಗೆ ತುಂಬಾ ಸಂತೋಷ ವಾಯಿತು.

ಗುರುಗಳು ಹೇಳಿದಂತೆ ಸಾಯಂಕಾಲ ಸಮಯಕ್ಕೆ ಸರಿಯಾಗಿ ನದಿತೀರಕ್ಕೆ ಹೋದನು. ಗುರುಗಳು ಬರುವುದನ್ನು ನೋಡಿದವನೇ ಓಡಿಹೋಗಿ, ‘ಗುರುಗಳೇ ಬೇರೆಯಾರಾದರೂ ಬರುವ ಮೊದಲೇ ನನಗೆ ಯಶಸ್ಸಿನ ಗುಟ್ಟನ್ನು ತಿಳಿಸಿ ಬಿಡಿ’ ಎಂದನು. ಆಗ ಗುರುಗಳು ಅವನ ಹೆಗಲ ಮೇಲೆ ಕೈ ಹಾಕಿ, ‘ನನ್ನ ಜೊತೆ ನಡೆ’ ಎಂದು ಅವನನ್ನು ತಮ್ಮ ಜೊತೆಗೆ ನೀರಿನೊಳಗೆ ಕರೆದುಕೊಂಡು ಹೋದರು. ಎಲ್ಲಿ ನೀರು ಯುವಕನ ಕುತ್ತಿಗೆಯ ತನಕ ಬರುತ್ತದೆಯೋ, ಅಲ್ಲಿ ಗುರುಗಳು ನಿಂತರು. ಆ ಯುವಕನು ಏನು ಮಾಡುತ್ತಾರೆ ಗುರುಗಳು ಎಂದು ಯೋಚಿಸುವುದರೊಳಗೆ, ಗುರುಗಳು ಯುವಕನ ತಲೆಯನ್ನು ಹಿಡಿದು ನೀರಿನಲ್ಲಿ ಮುಳುಗಿಸಿದರು.

ಯುವಕನು ಗಾಬರಿಯಿಂದ ವಿಲವಿಲ ಒದ್ದಾಡತೊಡಗಿದೆ. ಆತ ಗುರುಗಳ ಕೈಯನ್ನು ತಳ್ಳಿಕೊಂಡು ಮೇಲೆ ಬರ ಬೇಕೆಂದು ಒದ್ದಾಡುತ್ತಿದ್ದರೆ, ಗುರುಗಳು ಅವನು ಸ್ವಲ್ಪವೂ ತಲೆಯೆತ್ತದಂತೆ ತಲೆಯನ್ನು ನೀರಿನೊಳಗೆ ಮುಳುಗಿಸು ತ್ತಿದ್ದರು. ಈ ರೀತಿ ಕೆಲವು ಸಮಯದ ನಂತರ ಗುರುಗಳು ಅವನ ತಲೆಯನ್ನು ಮೇಲೆ ಎತ್ತಿದರು.

ಯುವಕನು ಉಸಿರನ್ನು ಎಳೆದುಕೊಳ್ಳುತಿದ್ದ. ಈಗ ಗುರುಗಳು ಕೇಳಿದರು. ‘ಹುಡುಗ, ನಿನ್ನ ತಲೆಯನ್ನು ನೀರಿನೊಳಗೆ ಮುಳುಗಿಸಲು ಪ್ರಯತ್ನಪಟ್ಟಷ್ಟು ನೀನು ಮೇಲೆ ಬರಲು ಬಲವಾಗಿ ಪ್ರಯತ್ನಿಸುತ್ತಿದ್ದೆ ಯಾಕೆ?’ ಅದಕ್ಕೆ ಯುವಕನು, ‘ಗುರುಗಳೇ ನಾನು ನೀರಿನಿಂದ ಮೇಲೆ ಬರಬೇಕಿತ್ತು, ಉಸಿರು ತೆಗೆದುಕೊಳ್ಳಬೇಕಾಗಿತ್ತು ಹಾಗಾಗಿ ಮೇಲೆ ಬರಲು ಪ್ರಯತ್ನಿಸುತ್ತಿದ್ದೆ’ ಎಂದನು.

ಆಗ ಗುರುಗಳು ಹೇಳಿದರು. ‘ಇದೇ ಯಶಸ್ಸಿನ ರಹಸ್ಯ. ನೀನು ಮಾಡುವ ಕೆಲಸವನ್ನು ನಿನ್ನ ಉಸಿರಾಷ್ಟು ಅವಶ್ಯಕ
ಎನ್ನುವಂತೆ ಮಾಡಬೇಕು. ಇಲ್ಲಿ ನೀರಿನೊಳಗೆ ಉಸಿರಾಡದಿದ್ದರೆ ಸತ್ತು ಹೋಗುವೆನೆಂಬ ಭಯ ನಿನ್ನನ್ನು ಆವರಿಸಿತ್ತು. ಇದೇ ರೀತಿ ನಿನ್ನ ಕೆಲಸದಲ್ಲಿ ಭಯವಿರಬೇಕು, ಭಕ್ತಿ ಇರಬೇಕು, ಯುಕ್ತಿಯಿಂದ ಶಕ್ತಿಹಾಕಿ ಕೆಲಸ ಮಾಡಬೇಕು. ಮಾಡುವುದು ಸಣ್ಣ ಕೆಲಸವೇ ಆದರೂ ಅದರಲ್ಲಿ ನಿನ್ನ ಬುದ್ಧಿ, ಹೃದಯ ಮತ್ತು ಆತ್ಮವನ್ನು ತೊಡಗಿಸಿಕೊಳ್ಳಬೇಕು. ಅದುವೇ “ಯಶಸ್ಸಿನ ಗುಟ್ಟು”’ಎಂದು ಹೇಳಿದರು.

ಬಹುಶಃ ಇದು ನಮ್ಮೆಲ್ಲರಿಗೂ ಅನ್ವಯಿಸುವ ಮಾತು. ಈ ರೀತಿಯ ಶ್ರದ್ಧೆ, ಭಕ್ತಿ, ಇzಗ ಮಾತ್ರ ಅಂದುಕೊಂಡದ್ದನ್ನು ನಾವು ಸಾಧಿಸಲು ಸಾಧ್ಯ.

Leave a Reply

Your email address will not be published. Required fields are marked *