Friday, 21st June 2024

ಕಾಡಿದ ಕರೋನಾ ಚಿತ್ರೀಕರಣ ಬಂದ್‌: ಕೃಷಿಯತ್ತ ಸ್ಯಾಂಡಲ್‌ವುಡ್‌ ಸ್ಟಾರ‍್ಸ್

ಕಾಡಿದ ಕರೋನಾ ಮಹಾ ಮಾರಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಪರಿಣಾಮ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ಹೀಗಾಗಿ ಹಲವು ನಟನಟಿಯರು ಕರೋನಾದಿಂದ ಕಂಗೆಟ್ಟ ಬಡವರ ನೆರವಿಗೆ ಧಾವಿಸಿ ದ್ದಾರೆ. ಹಲವರು ತಮ್ಮ ತಮ್ಮ ಊರಿಗೆ ಮರಳಿದ್ದು, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಬಿಡು ವಿನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಸರಕಾರದ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಡಾಲಿ ಧನಂಜಯ, ಉಪೇಂದ್ರ, ಚಿಕ್ಕಣ್ಣ, ಆಶಿಕಾ ಹೀಗೆ ಹಲವರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಯಕವೇ ಕೈಲಾಸ ಎಂದು ತೋರಿಸಿಕೊಟ್ಟಿದ್ದಾರೆ.

ಪಶುಸಂಗೋಪನೆಯಲ್ಲಿ ದಚ್ಚು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ
ಬೀಡು ಬಿಟ್ಟಿದ್ದಾರೆ. ಚಿತ್ರೀಕರಣ ಇಲ್ಲದ ಸಂದರ್ಭದಲ್ಲೂ ದಚ್ಚು ತಮ್ಮ ಫಾರ್ಮ್‌ಹೌಸ್‌ಗೆ ಭೇಟಿ ನೀಡುತ್ತಿದ್ದರು. ಈಗ
ಲಾಕ್‌ಡೌನ್ ಜಾರಿಯಾಗಿರುವುದರಿಂದ ಮೈಸೂರಿನಲ್ಲಿಯೇ ಉಳಿದಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಹಲವು ಪ್ರಾಣಿಗಳನ್ನು ಸಾಕಿದ್ದು, ಅವುಗಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

ಅದರಲ್ಲೂ ಹಸು ಸಾಕಾಣೆ ದಚ್ಚುಗೆ ಅಚ್ಚುಮೆಚ್ಚು ಹಾಗಾಗಿ ಹಸುಗಳ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತಾವೇ ಸ್ವತಃ ಹಾಲು ಕರೆಯುತ್ತಾರೆ. ಇನ್ನು ತಮ್ಮ ನೆಚ್ಚಿನ ಕುದುರೆಯ ಆರೈಕೆಯೂ ಕೂಡ ದಾಸನದ್ದೇ ಆಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಚ್ಚಿದಾನಂದ ಸ್ವಾಮಿಗಳ ಆಶ್ರಮಕ್ಕೆ ಭೇಟಿ ಅಲ್ಲಿಂದ ಗಿಳಿಯೊಂದನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಇದರ ಜತೆಗೆ ಕರೋನಾ ಸಂಕಷ್ಟಕ್ಕೂ ಮಿಡಿದಿರುವ ದರ್ಶನ್ ಉಸಿರು ತಂಡದೊಂದಿಗೆ ಕೈಜೋಡಿಸಿದ್ದು, ಮೈಸೂರು ಭಾಗದಲ್ಲಿನ ಕರೋನಾ ಸೋಂಕಿತರಿಗೆ ಆಕ್ಸಿಜನ್ ಸಾಂದ್ರಕಗಳನ್ನು ಒದಗಿಸುವ ಕಾರ್ಯಕ್ಕೆ ನೆರವಾಗಿದ್ದಾರೆ.

ತೋಟದಲ್ಲಿ ಬ್ಯುಸಿಯಾದ ಆಶಿಕಾ
ರ‍್ಯಾಂಬೋ 2 ನಲ್ಲಿ ಚುಟು ಚುಟು ಎಂದು ಹಾಡಿದ ಮುಗುಳು ನಗೆಯ ಬೆಡಗಿ ಆಶಿಕಾ ರಂಗನಾಥ್ ಲಾಕ್‌ಡೌನ್ ಅವಧಿಯಲ್ಲಿ ತೋಟದ ಕೆಲಸದಲ್ಲಿ ಫುಲ್ ಬ್ಯುಸಿಯಾಗಿ ದ್ದಾರೆ. ತಮ್ಮ ಸಂಬಂಧಿಕರ ಮನೆಗೆ ತೆರಳಿರುವ ಆಶಿಕಾ, ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಗೆಳತಿಯರೊಂದಿಗೆ ಸೇರಿ ಮಾವಿನ ತೋಟದಲ್ಲಿ ಗಿಡನೆಡು ತ್ತಿದ್ದಾರೆ. ಕಳೆಕಿತ್ತು ಗಿಡಗಳಿಗೆ ಗೊಬ್ಬರ ಹಾಕುತ್ತಿದ್ದಾರೆ. ಜತೆಗೆ ಮಾವಿನ ಹಣ್ಣಗಳನ್ನು ಕಿತ್ತು ಬುಟ್ಟಿಯಲ್ಲಿ ತುಂಬಿಕೊಂಡು ಬರುತ್ತಿರುವ ಆಶಿಕಾ ಪೋಟೋಗಳು ಸೋಷಿ ಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಬಾಲ್ಯದಲ್ಲಿ ನಾನು ಈ ತೋಟದಲ್ಲಿ ಆಟವಾಡುತ್ತಿದ್ದೆ, ಮಾವಿನ ಕಾಯಿಕಿತ್ತು ನನ್ನ ಸ್ನೇಹಿತರು, ಸಂಬಂಧಿಕರೊಂದಿಗೆ ತಿಂದು ನಲಿಯುತ್ತಿದ್ದೆ. ಆ ಬಳಿಕ ವ್ಯಾಸಂಗ, ಚಿತ್ರೀಕರಣದ ಅಂತ ಇತ್ತ ಬರಲಾಗಲಿಲ್ಲ. ಈಗ ಲಾಕ್‌ಡೌನ್ ಅವಧಿಯಲ್ಲಿ ಇಲ್ಲಿಗೆ ಬಂದಿದ್ದೇನೆ. ಮತ್ತೆ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ, ಕುಟುಂಬದವರೊಂದಿಗೆ ಕೂಡಿ ಬೆರೆಯುವ ಅವಕಾಶ ಸಿಕ್ಕಿದೆ. ನನಗೆ ನಟನೆಯಂತೆ ಕೃಷಿ ಕಾರ್ಯವೂ ಬಲು ಇಷ್ಟ ಎನ್ನುತ್ತಾರೆ. ಸದ್ಯ ಅಶಿಕಾ ನಟನೆಯ ಕೋಟಿಗೊಬ್ಬ 3 ತೆರೆಗೆ ಬರಲು ಸಿದ್ಧ ವಾಗಿದೆ. ಇನ್ನು ರೆಮೋ, ಮದಗಜ ಚಿತ್ರದಲ್ಲಿ ಆಶಿಕಾ ನಟಿಸುತ್ತಿದ್ದಾರೆ.

ಕೃಷಿಯಲ್ಲಿ ತಲ್ಲೀನರಾದ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಸಾಮಾಜಿಕ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕರೋನಾದಿಂದ ಸಂಕಷ್ಟಕ್ಕೆ ಸಿಲುಕಿದ
ಬಡವರ ನೆರವಿಗೆ ಧಾವಿಸಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಅವರಿಂದಲೇ ಖರೀದಿಸಿ ಬಡವರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆಯೇ ಉಪೇಂದ್ರ ಕೃಷಿ ಕಾರ್ಯದಲ್ಲೂ ತೊಡಗಿದ್ದಾರೆ.

ತಮ್ಮ ಫಾರ್ಮ್‌ ಹೌಸ್ ನಲ್ಲಿರುವ ಜಮೀನಿ ನಲ್ಲಿ ಮಣ್ಣು ಹಸನು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಉಪ್ಪಿಗೆ ಪರಿಸರದ ಬಗ್ಗೆ ಅಪಾರ ಕಾಳಜಿ, ಹಾಗಾಗಿ ಹಣ್ಣು ಗಿಡಗಳನ್ನು ನೆಡುವ, ಇರುವ ಗಿಡಗಳಿಗೆ ಮಣ್ಣು ಕೊಡುವ, ಗೊಬ್ಬರ ಹಾಕುವ ಕಾಯಕದಲ್ಲಿ ನಿರತರಾಗಿದ್ದಾರೆ. ಕಾಯಕವೇ ಕೈಲಾಸ ಎನ್ನುವ ಉಪೇಂದ್ರ ನಾನು ಬಿಡುವಾದಾಗಲೆಲ್ಲ, ಕೃಷಿ ಕಾರ್ಯದಲ್ಲಿ ತೊಡಗುತ್ತೇನೆ ಎನ್ನುತ್ತಾರೆ. ಈ ಕಾರ್ಯಗಳಿಂದಲೇ ಉಪ್ಪಿ ಸೋಷಿಯಲ್ ಮಿಡಿಯಾದಲ್ಲೂ ಮಿಲಿಯಲ್ ಗಟ್ಟಲೆ ಫಾಲೋವರ್ಸ್‌ಗಳನ್ನು ಹೊಂದಿ ದ್ದಾರೆ. ಉಪೇಂದ್ರ ಕಬ್ಜ ಚಿತ್ರ ದಲ್ಲಿ ಬ್ಯುಸಿಯಾಗಿದ್ದಾರೆ. ಕರೋನಾ ಸಂಕಷ್ಟ ಮುಗಿದ ಬಳಿಕ ಲಗಾಮ್ ಚಿತ್ರತಂಡ ಸೇರಲಿದ್ದಾರೆ.

ಫಾರ್ಮ್‌ಹೌಸ್‌ನಲ್ಲೇ ತಂಗಿದ ಚಿಕ್ಕಣ್ಣ
ಹಾಸ್ಯ ನಟ ಚಿಕ್ಕಣ್ಣ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆಯ ನಟ ರಾಗಿದ್ದಾರೆ. ಆದರೂ ಅವರಲ್ಲಿ ಇನ್ನೂ ಅದೆ ಸರಳತೆ, ಸಜ್ಜನಿಕೆ ಇದೆ. ಸದ್ಯ ಲಾಕ್‌ಡೌನ್‌ಲ್ಲಿ ಹಳ್ಳಿಯಲ್ಲೇ ಉಳಿದಿರುವ ಇರುವ ಚಿಕ್ಕಣ್ಣ, ಹೊಸದಾಗಿ ನಿರ್ಮಿಸಿರುವ ತಮ್ಮ ಫಾರ್ಮ್‌ ಹೌಸ್‌ನಲ್ಲೇ ಉಳಿದಿದ್ದಾರೆ. ಪಶು ಸಂಗೋಪನೆ ಯಲ್ಲಿ ಆಸಕ್ತಿ ಹೊಂದಿರುವ ಚಿಕ್ಕಣ್ಣ, ತಮ್ಮ ಫಾರ್ಮ್ ಹೌಸ್’ನಲ್ಲಿ ಮೇಕೆ ಸಾಕಾಣೆ ಕಾರ್ಯದಲ್ಲಿ ತೊಡಗಿದ್ದಾರೆ. ಇಲ್ಲಿ ತಮ್ಮ ಕೆಲಸವನ್ನು ತಾವೇ ಮಾಡುತ್ತಿದ್ದಾರೆ.

ಇತ್ತೀಚೆಗೆ ತಾವೇ ಗಾರೆ ಕತ್ತಿ ಹಿಡಿದು, ಗಾರೆ ಕೆಲಸ ಮಾಡುವ ಮೂಲಕ ಚಿಕ್ಕಣ್ಣ, ಗಮನಸೆಳೆದಿದ್ದರು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಯಾಕೆ ಹಿಂಜರಿಕೆ ಎಂದಿದ್ದರು. ಜೀವನದಲ್ಲಿ ನಂಬಿಕೆ, ಇರಬೇಕು, ನಾವು ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ಅದೇ ನಮ್ಮ ಕೈ ಹಿಡಿಯುತ್ತದೆ ಎನ್ನುತ್ತಾರೆ ಚಿಕ್ಕಣ್ಣ. ಇದರ ಜತೆಗೆ ತಮ್ಮ ಸ್ನೇಹಿತ ರೊಡಗೂಡಿ, ಹಸಿದವರಿಗೆ ಊಟ ನೀಡುವ ಕಾಯಕಕ್ಕೂ ಚಿಕ್ಕಣ್ಣ ಮುಂದಾಗಿದ್ದರು. ಚಿಕ್ಕಣ್ಣನ ಈ ಕಾರ್ಯಕ್ಕೆ ಎಲ್ಲರೂ ಬಹುಪರಾಕ್ ಎಂದಿದ್ದರು. ಇಂದಿಗೂ ಚಿಕ್ಕಣ್ಣ ಹಳ್ಳಿಯ ಜೀವನವನ್ನೇ ಇಷ್ಟಪಡುತ್ತಾರೆ.

ತೋಟದ ಮನೆಗೆ ಶಿಫ್ಟ್ ಆದ ನಿಖಿಲ್
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಕೂಡ ಬಿಡದಿಯ ಬಳಿಯಿರುವ ತಮ್ಮ ತೋಟದ ಮನೆಯಲ್ಲಿ ತಂಗಿ ದ್ದಾರೆ. ಈ ಹಿಂದೆ ನಿಖಿಲ್‌ಗೂ ಕರೋನಾ ಸೋಂಕು ತಗುಲಿತ್ತು. ಕರೋನದಿಂದ ಗುಣಮುಖರಾದ ನಿಖಿಲ್, ಈಗ ಕುಟುಂಬ ಸಮೇತ ತೋಟದ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಕೃಷಿಯತ್ತ ಒಲವು ತಾಳಿರುವ ನಿಖಿಲ್, ಜಮೀನಿನಲ್ಲಿ ರಾಗಿ ಬೆಳೆಗೆ ಗೊಬ್ಬರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರ ಜತೆಗೆ ಪಶು ಸಂಗೋಪನೆಯಲ್ಲಿಯೂ ನಿಖಿಲ್ ನಿರತ ವಾಗಿದ್ದು, ಗಿರ್ ತಳಿಯ ಹಸುವನ್ನು ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ, ನಿಖಿಲ್ ಅವರ ತಾತಾ ದೇವೇಗೌಡರು, ಇದೇ ತೋಟದ ಜಮೀನಿ ನಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ, ತೆಂಗಿನ ಗಿಡಗಳನ್ನು ನೆಟ್ಟಿದ್ದರು. ಆ ಗಿಡಗಳ ಆರೈಕೆಯನ್ನು ಕೂಡ ನಿಖಿಲ್ ಮಾಡುತ್ತಿದ್ದಾರೆ. ನಿಖಿಲ್ ರೈಡರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಳ್ಳಿ ಸೇರಿದ ಡಾಲಿ ಧನಂಜಯ ಕನ್ನಡ ಚಿತ್ರರಂಗದಲ್ಲಿ ಸದ್ಯ ಪ್ರಸಿದ್ಧ ಖಳನಾಯಕರಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ.

ಹಾಗಾಗಿ ಚಿತ್ರೀಕರಣಕ್ಕಾಗಿ ಹೈದಾರಾಬಾದ್, ಚೆನ್ನೈಗೆ ತೆರಳುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಬೆಂಗಳೂರಿಗೆ ಮರಳಿದ್ದ ಡಾಲಿ
ಧನಂಜಯ, ಕರೋನಾ ಸಂಕಷ್ಟದಲ್ಲಿ ಸಿಲುಕಿದ್ದ ಬಡವರ ನೆರವಿಗೆ ಧಾವಿಸಿದ್ದರು. ಈಗ ತಮ್ಮ ಹುಟ್ಟೂರು ಕಾಳೇನಹಳ್ಳಿಗೆ
ಮರಳಿದ್ದಾರೆ. ಅಲ್ಲಿ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಿನನಿತ್ಯ ತಮ್ಮ ತೋಟಕ್ಕೆ ತೆರಳಿ ಅಲ್ಲಿನ ಕೆಲಸ
ಕಾರ್ಯಗಳನ್ನು ನೊಡಿಕೊಳ್ಳುತ್ತಿದ್ದಾರೆ. ಮನೆಯವರೊಂದಿಗೆ ತಾವು ಕೈಜೋಡಿಸುತ್ತಿದ್ದಾರೆ.

ಬಹು ದಿನಗಳಿಂದ ಸಿನಿಮಾ ಚಿತ್ರೀಕರಣ ಎಂದು ಬ್ಯುಸಿಯಾಗಿದ್ದೆ. ಹಾಗಾಗಿ ನನ್ನ ಕುಟುಂಬದವರೊಂದಿಗೆ ಕಾಲ ಕಳೆಯಲು ಸಮಯ ಸಿಕ್ಕಿರಲಿಲ್ಲ. ಆದರೆ ಈಗ ಸಮಯ ಸಿಕ್ಕಿದೆ. ಎಲ್ಲರೂ ಒಟ್ಟಾಗಿರುವುದು ಸಂತಸ ತಂದಿದೆ. ಕರೋನಾದಿಂದಾಗಿ ನಾವೆ ಲ್ಲರೂ ಗಂಭಿರವಾದ ಸ್ಥಿತಿಯನ್ನು ಎದುರಿಸುವಂತಾಗಿದೆ. ಹಾಗಾಗಿ ನಾನು ಕುಟುಂಬದವರೊಂದಿಗಿದ್ದು ಧೈರ್ಯ ತುಂಬು ತ್ತಿದ್ದೇನೆ. ಚಿತ್ರೀಕರಣ ಆರಂಭವಾಗುವವರೆಗೂ ನಮ್ಮ ಹಳ್ಳಿಯಲ್ಲಿಯೇ ಇದ್ದು, ಮನೆಯವರೊಂದಿಗೆ ಕಾಲಕಳೆಯುತ್ತೇನೆ ಎನ್ನು ತ್ತಾರೆ ಡಾಲಿ ಧನಂಜಯ.

Leave a Reply

Your email address will not be published. Required fields are marked *

error: Content is protected !!