Thursday, 28th November 2024

ಎಲ್ಲಿದೆ ಜೀವನ ಪ್ರೀತಿ ?

ಮನುಷ್ಯನಿಗೆ ತನ್ನ ಜೀವನದ ನೆಮ್ಮದಿಯ ಕ್ಷಣಗಳು ಯಾವುವು? ಅತಿ ಹೆಚ್ಚು ಹಣ ಗಳಿಸಿದ ಕ್ಷಣವೆ? ಅಥವಾ ಮನಸ್ಸು ನಿರಾಳವಾಗಿದ್ದ ಗಳಿಗೆಯೆ?

ಮಂಜುಳಾ ಡಿ.

ಜೀವನಕ್ಕೆ ಸಿಗದಷ್ಟು ವೇಗದ ಬದುಕು, ಧಾವಂತಗಳಲ್ಲಿ ಮುಳುಗೇಳುವ ಗಳಿಗೆಗಳು ಗಂಟೆಗಳೂ, ಯಾರಿಗೂ ಯಾರಿಗಾಗಿಯೂ ಸಮಯವಿಲ್ಲ. ಎಲ್ಲಾ ಗುಡ್ಡೆ ಹಾಕಿ ಲೆಕ್ಕಕ್ಕೆ ಕೂತರೆ ಕಳೆದುಕೊಂಡ ನಮ್ಮದೇ ಮುಗ್ಧತೆಗಾಗಿ ಹುಡುಕಾಡುತ್ತೇವೇನೋ. ಲೆಕ್ಕಾ ಚಾರಗಳ ಹಂಗಿಲ್ಲದ ಆ ಚಿಕ್ಕ ಚಿಕ್ಕ ಖುಷಿಗಳು ಮತ್ತೆೆ ನೆನಪಾಗಿ ಈಗಷ್ಟೇ ಬದುಕಿ ಬಂದತೆ ತೇಲುತ್ತವೆ.

ಕಾರು, ಮನೆ, ಎಲೆಕ್ಟ್ರಾನಿಕ್ ಉಪಕರಣ, ರೆಸಾರ್ಟಗಳಲ್ಲಿ ವಿಶ್ರಾಂತಿ ಇಂಥ ಐಹಿಕ ಶ್ರೀಮಂತಿಕೆ ಹೊಂದಿದ ನಂತರ ಖುಷಿ
ಪಡುತ್ತೇವೆ ಎನ್ನುವುದು ಎಂದಿಗೂ ಪಡೆದದ್ದನ್ನು ಆಸ್ವಾದಿಸಲಾರೆವು ಎನ್ನುವುದಕ್ಕೆ ಪರ್ಯಾಯ. ಇವು ನೆಮ್ಮದಿಯ ಸಂಕೇತ ಗಳಲ್ಲ. ಇಷ್ಟಕ್ಕೂ ಸಣ್ಣ ಸಂಗತಿಗಳಲ್ಲಿ ಅಡಗಿರುವ ಸಮಾಧಾನಕ್ಕೆ ಎಣೆಯೇ ಅವು ನಮ್ಮೊಳಗೆ ಮೂಡಿಸುವ ಚೈತನ್ಯದ ಸೆಲೆ
ಆಳವಾದುದು.

ಗಿಡಗಳಿಗೆ ನೀರು ಉಣಿಸುವುದು, ಭರತನಾಟ್ಯದಲ್ಲಿ ತಲ್ಲೀನವಾಗುವುದಿರಬಹುದು, ನಮ್ಮಿಷ್ಟದ ಸಂಗೀತ ಆಲಿಸುವುದಿರಬಹುದು, ಸೋನೆಯೊಂದರ ನಂತರದ ಮಣ್ಣಿನ ವಾಸನೆ, ಮಿಂಚಿನ ಲಾಸ್ಯ, ಗಗನದ ಚಿತ್ತಾರ, ನವಿಲು ಗರಿಯ ಸೃಷ್ಟಿ ಇವುಗಳನ್ನು ನೋಡಿ ವಿಸ್ಮಯಗೊಳ್ಳದಿದ್ದರೆ ಬದುಕನ್ನು ಧೇನಿಸುವುದಾದರೂ ಹೇಗೆ? ಪದೇ ಪದೇ ಸ್ಮತಿಪಟಲದಲ್ಲಿ ಉಳಿಯುವುದು ಮನಸಿಂದ ಬದುಕಿದ ಆಸ್ವಾದಿಸಿದ ಚಿಕ್ಕ ಚಿಕ್ಕ ಗಳಿಗೆಗಳು ಸಂಗತಿಗಳು ಮಾತ್ರವೇ.

ಅಬ್ದುಲ್ ಕಲಾಂ ರಾಷ್ಟ್ರಪತಿ ಭವನದಿಂದ ಹೊರನಡೆದ ಸಮಯ. ನಿಜಕ್ಕೂ ಅವರು ರಾಷ್ಟ್ರಪತಿಯಾಗಿ ದೇಶದ ವ್ಯವಸ್ಥೆೆ ಕುರಿ ತಂತೆ ಮಾತಾಡಬೇಕಿತ್ತು. ಆದರೆ ಅವರು ದೇಶವನ್ನು ಉದ್ದೇಶಿಸಿ ಮತಾಡಿದ ಭಾಷಣದಲ್ಲಿ ಇದ್ದ ಸಂಗತಿಗಳು ಎಂಥವ ರನ್ನೂ ಚಕಿತಗೊಳಿಸಿದವು.

ಹರ್ಯಾಣಾದಿಂದ ಸತ್ಯ ಸಾಯಿ ಮಂದಿರದ ವಿದ್ಯಾರ್ಥಿಗಳೂ ರಾಷ್ಟ್ರಪತಿ ಭವನಕ್ಕೆ ಬಂದಾಗ ಒಬ್ಬ ವಿದ್ಯಾರ್ಥಿನಿ ಕೇಳಿದ
ಪ್ರಶ್ನೆ ಅರ್ಥಪೂರ್ಣ. ‘ಭಾರತ ಆಭಿವೃದ್ಧಿ ಹೊಂದಿದ ದೇಶವಾಗಲು ಏಕೆ ಸಾಧ್ಯವಾಗುತ್ತಿಲ್ಲ?’ ನಾನು ಭೇಟಿ ಮಾಡಿದ ಲಕ್ಷಾನು ಗಟ್ಟಲೇ ವಿದ್ಯಾರ್ಥಿಗಳಲ್ಲಿ ಇದೇ ಪ್ರಶ್ನೆಯಿರುವುದು ಮತ್ತು ಯುವ ಜನತೆ ಈ ಕುರಿತು ಯೋಚಿಸುತ್ತಿರುವುದು ನನಗೆ ಬಹುವಾಗಿ
ಸಮಾಧಾನ ಮೂಡಿಸಿದೆ ಎಂದರು.

ಅವರ ಭಾಷಣದಲ್ಲಿ ಉಲ್ಲೇಖವಾದ ಇನ್ನೊಂದು ಮುಖ್ಯ ಸಂಗತಿ ಎಂದರೆ, ಕೊಯಮತ್ತೂರಿನಲ್ಲಿ ಕಲಾಂ ಅವರನ್ನು ಭೇಟಿಯಾ ಗಲೆಂದು ಕಾಯುತ್ತಿದ್ದ 50-60 ವರ್ಷದ ವಯೋಮಾನದವ, ಗಾಲಿ ಖುರ್ಚಿಯಲ್ಲಿ ಕೂತಿದ್ದ. ಅವನ ಚಹರೆಯಲ್ಲಿ ಒಂದು ನೆಮ್ಮದಿ ಸಮಾಧಾನವಿದ್ದದು ಎಂಥವರಿಗೂ ಗೋಚರಿಸುವಂತಿದ್ದುದು ಕಲಾಂ ಅವರ ಗಮನಕ್ಕೆ ಬಂತು. ಆತ ತನ್ನನ್ನು ವಿದ್ವಾನ್ ಕೃಷ್ಣಮೂರ್ತಿ ಎಂದು ಪರಿಚಯಿಸಿಕೊಳ್ಳುತ್ತಾ, ಹುಟ್ಟಿ ನಿಂದಲೇ ತಾನು ಹೀಗೇ ಇದ್ದು, ತನ್ನ ಬದುಕಿಗೆ ಪ್ರೇರಣೆ ನೀಡಿದ ಎಲ್ಲರನ್ನೂ ಸ್ಮರಿಸಿ ದೇವರು ದೊಡ್ಡವನು ಎಂದ. ಆತನ ಜೀವನ ಪ್ರೀತಿ ಕಂಡು ದಂಗಾದ ಕಲಾಂ ಇವರು ‘ನಾನು
ನಿಮಗೆ ಏನು ಮಾಡಬಲ್ಲೇ’ ದಯವಿಟ್ಟು ತಿಳಿಸಿ ಎಂದು ಕೇಳಿದರು.

ಆತ ‘ನಿಮ್ಮಿಂದ ನನಗೆ ಯಾವ ಅಪೇಕ್ಷೆ ಇಲ್ಲ, ನಿಮ್ಮ ಮುಂದೆ ನಾನು ಒಂದು ಹಾಡು ಹಾಡುತ್ತೇನೆ’ ಎಂದು ತ್ಯಾಗರಾಜರ ‘ಎಂದರೋ ಮಹಾನುಭಾವಲು’  ಹಾಡು ಹಾಡಿದರು. ಕಲಾಂ ಅವರು ಈ ಘಟನೆ ನೆನಪಿಸಿಕೊಳ್ಳುತ್ತಾ ‘ಆತನ ಜೀವನ ಪ್ರೀತಿ ನನಗೆ ಸದಾ ಮಾದರಿ, ಪ್ರೇರಣೆ’ ಎಂದರು.

ಹೊರದೇಶಗಳಲ್ಲೂ ಹೋಟೇಲ್ ಉದ್ಯಮ ವಿಸ್ತರಿಸಿದರು ಒಬೆರಾಯ್. ಹೋಟೆಲ್ ಉದ್ಘಾಟನೆಗಾಗಿ ಬೆಂಗಳೂರಿಗೆ ಬಂದಾಗ ಅವರ ಸಂದರ್ಶನದ ಚಿಕ್ಕ ಭಾಗ ಹೀಗಿದೆ … ‘ನೀವೆಲ್ಲಾ ತಿಳಿದಿರುವಂತೆ ನಾನು ಶ್ರೀಮಂತನಿರಬಹುದು. ಆದರೆ ಸಮಾಧಾನ
ನೆಮ್ಮದಿಗಳು ನನ್ನಿಂದ ಬಹುದೂರ. ಶಿಮ್ಲಾದಲ್ಲಿ ಅತೀ ಚಿಕ್ಕ ಮನೆಯಲ್ಲಿ ಏನೂ ಇಲ್ಲದಾಗ ಬದುಕಿದ ಬದುಕಷ್ಟೇ ನನ್ನ ಪಾಲಿನ
ಜೀವಂತ ಕ್ಷಣಗಳು.’

ಮೇಲಿನ ಕಲಾಂರವರು, ಭಾರತದಂತ ಬೃಹತ್ ದೇಶದ ರಾಷ್ಟ್ರಪತಿಯಾಗಿಯೂ, ಅವರ ಸ್ಮತಿಯಲ್ಲಿ ಉಳಿದುದು ಜೀವನದಲ್ಲಿ
ಆಸ್ವಾದಿಸಿದ ಚಿಕ್ಕ ಚಿಕ್ಕ ಕ್ಷಣಗಳೇ. ವಿಶ್ವದಗಲ ಹೋಟೆಲ್ ವಿಸ್ತರಿಸಿದ ಒಬೆರಾಯ್ ಸದಾ ಸ್ಮರಿಸುವುದು ಅವರಲ್ಲಿ ಏನೂ ಇಲ್ಲ ದಾಗ ಮನಃಪೂರ್ವಕವಾಗಿ ಬದುಕಿದ ಆ ಗಳಿಗೆಗಳು. ನಾವು ಯಾರೊಂದಿಗೆ ಇದ್ದಾಗ ಜೀವಂತಿಕೆ ಭಾವ ಮೂಡುತ್ತದೆಯೋ ಅವರೊಂದಿಗೆ ಸಮಯ ಕಳೆಯುವುದು, ಎದುರಿಗಿರುವವರಿಗೆ ಅಗತ್ಯವಿದ್ದಾಗ ಕೈಲಾದ ಸಹಾಯ ಮಾಡುವುದು ಇದರಿಂದ ಮನಕ್ಕೆ ನೆಮ್ಮದಿ ಸಿಗುತ್ತದೆ, ಜೀವನ ಅರ್ಥಪೂರ್ಣ ಎನಿಸುತ್ತದೆ.