Thursday, 19th September 2024

ರಾಜತಂತ್ರ ಹೆಣೆದ ರಾಜಣ್ಣ – ಹೊಸ ಗೆಟಪ್‌ನಲ್ಲಿ ದೊಡ್ಮನೆ ಮಗ

ಪ್ರಶಾಂತ್‌ ಟಿ.ಆರ್‌

ಇಷ್ಟು ದಿನ ಸ್ಟಾರ್ ನಟರ ಚಿತ್ರಗಳನ್ನು ಎದಿರು ನೋಡುತ್ತಿದ್ದ ಸಿನಿಪ್ರಿಯರಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ಸಿಕ್ಕಿದೆ.

ರಾಜ್ಯ ಪ್ರಶಸ್ತಿ ವಿಜೇತ ನಟ, ದೊಡ್ಮನೆ ಮಗ ರಾಘವೇಂದ್ರ ರಾಜ್‌ಕುಮಾರ್ ಅಭಿನಯದ ‘ರಾಜ ತಂತ್ರ’ ಹೊಸ ವರ್ಷದಂದೆ ಬೆಳ್ಳಿತೆರೆಗೆ ಬಂದಿದೆ. ರಾಘವೇಂದ್ರ ರಾಜ್ ಕುಮಾರ್ ಈಗ ವಿಶೇಷ ಗೆಟಪ್‌ನಲ್ಲಿ, ವಿಭಿನ್ನ ಪಾತ್ರದಲ್ಲಿ ತೆರೆಯಲ್ಲಿ ಮಿಂಚುತ್ತಿದ್ದಾರೆ. ಸೆಂಟಿಮೆಂಟ್ ಪಾತ್ರಗಳಲ್ಲಿ ಕರು ನಾಡಿನ ಮನೆ ಮಗನಾಗಿ ಸ್ಥಾನ ಪಡೆದಿದ್ದ ರಾಘಣ್ಣ, ಈಗ ಮೊದಲ ಬಾರಿಗೆ ವೀರ ಯೋಧ ನಾಗಿ ಬಣ್ಣ ಹಚ್ಚಿದ್ದಾರೆ.

ನಿವೃತ್ತ ಕ್ಯಾಪ್ಟನ್ ಆಗಿ ಸಮಾಜ, ದೇಶದ ಹಿತರಕ್ಷಣೆಗೆ ಶ್ರಮಿಸುವ ರಾಜಾರಾಮ್ ಅವತಾರದಲ್ಲಿ ನಮ್ಮ ಮುಂದೆ ಬಂದಿದ್ದಾರೆ. ‘ರಾಜತಂತ್ರ’ ಚಿತ್ರದ ಶೀರ್ಷಿಕೆಯಲ್ಲೇ ಸಸ್ಪೆನ್ಸ್‌ ಇದೆ. ಥ್ರಿಲ್ಲರ್ ಕಥೆಯೂ ಚಿತ್ರದಲ್ಲಿದೆ. ದುಷ್ಟಶಕ್ತಿಗಳ ಹುಟ್ಟಡಗಿಸಲು ಹೆಣೆಯುವ ಪ್ಲಾನ್ ‘ರಾಜತಂತ್ರ’. ಇಲ್ಲಿ ನಿವೃತ್ತ ವೀರ ಯೋಧರೊಬ್ಬರು ಸಮಾಜದ ಹಿತಕಾಯಲು ಯಾವ ತಂತ್ರ ಹೆಣೆಯುತ್ತಾರೆ, ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ.

ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ದುಷ್ಟಶಕ್ತಿಗಳನ್ನು ಮಣಿಸುವ ನಿವೃತ್ತ ಕ್ಯಾಪ್ಟನ್ ಆಗಿ ರಾಘವೇಂದ್ರ ರಾಜ್‌ಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾದರೆ ಚಿತ್ರದಲ್ಲಿ ಯೋಧನ ಯಶೋಗಾಥೆಯೂ ಇರಲಿದೆಯೆ? ಕ್ಯಾಪ್ಟನ್ ಆದ ರಾಘಣ್ಣ, ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಎಂಬ ಕುತೂಹಲ ನಮ್ಮನ್ನು ಕಾಡುತ್ತದೆ. ಇವೆಲ್ಲಕ್ಕೂ ತೆರೆಯಲ್ಲಿಯೇ ಉತ್ತರ ಸಿಗಲಿದೆ
ಎನ್ನುತ್ತಾರೆ ನಿರ್ದೇಶಕರು.

ತೃಪ್ತಿತಂದ ಯೋಧನ ಪಾತ್ರ
ಈ ಹಿಂದೆ ಎಂದು ಕಂಡಿರದ ಪಾತ್ರದಲ್ಲಿ ರಾಘಣ್ಣ ಬಣ್ಣಹಚ್ಚಿದ್ದಾರೆ. ನಿವೃತ್ತ ಯೋಧನ ಪಾತ್ರಕ್ಕೆ ತಕ್ಕಂತೆ ದೊಡ್ಮನೆ ಮಗ ಹೊಂದಿಕೊಳ್ಳುತ್ತಾರೆ. ‘ರಾಜತಂತ್ರ’ ಹೆಣೆಯಲಿರುವ ರಾಘಣ್ಣ ಅವರಿಗೆ ಈ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆಯಂತೆ.
ನಿರ್ದೇಶಕ ಸ್ವಾಮಿ, ‘ಅಮ್ಮನ ಮನೆ’ ಚಿತ್ರಕ್ಕೆ ಡಿಓಪಿ ಆಗಿದ್ದರು. ಆ ಸಂದರ್ಭದಲ್ಲಿಯೇ ಈ ಕಥೆಯನ್ನು ಹೇಳಿದ್ದರು. ನನಗೂ ಕಥೆ ಹಿಡಿಸಿತ್ತು. ಚಿತ್ರವೂ ಸೆಟ್ಟೇರಿತು. ಈಗ ಅಂದುಕೊಂಡಂತೆ ಚಿತ್ರೀಕರಣ ಮುಗಿದಿದೆ.

ಇಲ್ಲಿ ನಾನೊಬ್ಬ ನಿವೃತ್ತ ಮಿಲಿಟರಿ ಕ್ಯಾಪ್ಟನ್ ಆಗಿ ನಟಿಸುತ್ತಿದ್ದೇನೆ. ಹೊರಗಿನಿಂದ ಬರುವ ಶತ್ರುಗಳಿಂದ ದೇಶವನ್ನು ರಕ್ಷಿಸು ತ್ತಿದ್ದ ಆತ, ನಿವೃತ್ತಿಯ ಬಳಿಕವೂ ತನ್ನ ಸಮಾಜ, ದೇಶದ ಹಿತರಕ್ಷಣೆಗೆ ಹೇಗೆ ಕಟಿಬದ್ಧನಾಗಿರುತ್ತಾನೆ ಎಂಬುದನ್ನು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ. ಇದೇ ಮೊದಲ ಬಾರಿಗೆ ನಾನಿಂಥ ಪಾತ್ರ ಮಾಡುತ್ತಿದ್ದೇನೆ.

ಇಲ್ಲಿ ಕ್ಯಾಪ್ಟನ್, ರಾಜನೂ ಹೌದು, ರಾಮನೂ ಹೌದು. ಸೈನ್ಯದಿಂದ ಹೊರಬಂದ ಮೇಲೂ ತನ್ನ ಕರ್ತವ್ಯ ಮುಗಿದಿಲ್ಲವೆಂದು ಕೊಂಡು ಜವಾಬ್ದಾರಿ ನಿಭಾಯಿಸುವ ವ್ಯಕ್ತಿ. ಇಲ್ಲಿ ಕೆಲಸ ಮಾಡುವುದು ತಂತ್ರವೋ, ಮಂತ್ರವೋ ಅನ್ನುವುದನ್ನು ಚಿತ್ರ ನೋಡಿ ದಾಗ ತಿಳಿಯುತ್ತದೆ. ಚಿತ್ರದಲ್ಲಿ ನಾನು ಫೈಟಿಂಗ್ ಕೂಡ ಮಾಡಿದ್ದೇನೆ. ಮಾಡಿದ್ದೇನೆ ಅನ್ನುವುದಕ್ಕಿಂತ ಇವರೆಲ್ಲಾ ಸೇರಿ ನನ್ನಿಂದ ಮಾಡಿಸಿದ್ದಾರೆ.

ಯಾವುದೂ ಅಸಾಧ್ಯವಲ್ಲ, ಮನಸ್ಸಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎನ್ನುತ್ತಾರೆ ರಾಘಣ್ಣ. ನನಸಾದ ಬಹುದಿನಗಳ ಕನಸು ರಾಘವೇಂದ್ರ ರಾಜ್‌ಕುಮಾರ್ ‘ಅಮ್ಮನಮನೆ’ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠನಟ ಪ್ರಶಸ್ತಿ ಪಡೆದರು. ಈ ಚಿತ್ರಕ್ಕೆ ಛಾಯಾ ಗ್ರಾಹಕರಾಗಿದ್ದ ಪಿವಿಆರ್.ಸ್ವಾಮಿ ಅಂದೇ ಚಿತ್ರ ನಿರ್ದೇಶನದ ಕನಸು ಕಂಡಿದ್ದರು. ಅವರ ಕನಸು ಈಗ ನನಸಾಗಿದ್ದು, ಕ್ಯಾಮೆರಾ ಹಿಡಿಯುವ ಜತೆಗೆ, ಮೊದಲ ಬಾರಿಗೆ ನಿರ್ದೇಶಕರ ಸ್ಥಾನ ಅಲಂಕರಿಸಿದ್ದಾರೆ.

ಸ್ವಾಮಿ ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ದೊಡ್ಮನೆಯ ಬಗ್ಗೆ ಅಪಾರ ಗೌರವ. ಅದರಲ್ಲೂ ರಾಘಣ್ಣ ಎಂದರೆ ಇವರಿಗೆ ಬಲು ಪ್ರೀತಿ. ಮುಂದೊಂದು ದಿನ ನಿರ್ದೇಶಕನಾದರೆ, ರಾಘವೇಂದ್ರ ರಾಜ್‌ಕುಮಾರ್ ಅವರ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಎಂಬುದು ಇವರ ಬಹು ದಿನಗಳ ಬಯಕೆಯಾಗಿತ್ತು. ಅಂತು ಅದಕ್ಕೆ ಕಾಲ ಕೂಡಿಬಂದಿದೆ. ತಾವಂದುಕೊಂಡಂತೆ ಸ್ವಾಮಿ, ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಎರಡು ದಶಕಗಳಿಂದ ಕನ್ನಡ ಚಿತ್ರರಂದಲ್ಲಿ ತೊಡಗಿಸಿ ಕೊಂಡಿರುವ ಪಿವಿಆರ್ ಸ್ವಾಮಿ, ‘ರಾಜತಂತ್ರ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆ ಮೂಲಕ ತಮ್ಮ ಕನಸನ್ನು ನನಸು
ಮಾಡಿಕೊಂಡಿದ್ದಾರೆ.

ಹಿರಿಯ ಕಲಾವಿದರ ಬಳಗ
‘ರಾಜತಂತ್ರ’ದಲ್ಲಿ ಹಿರಿಯ ಕಲಾದರ ಬಳಗವೇ ಇದೆ. ದೊಡ್ಡಣ್ಣ, ಭವ್ಯಾ, ಶ್ರೀನಿವಾಸಮೂರ್ತಿ, ಶಂಕರ್‌ಅಶ್ವಥ್, ರಂಜನ್ ಹಾಸನ್, ಮುನಿರಾಜು, ನೀನಾಸಂ ಅಶ್ವಥ್ ಹೀಗೆ ಹಲವಾರು ಪ್ರಸಿದ್ಧ ನಟ, ನಟಿಯರು ಅಭಿನಯಿಸುತ್ತಿದ್ದಾರೆ.

ನಾಲ್ಕು ಸಾಹಸ ದೃಶ್ಯಗಳು ಈ ಚಿತ್ರದಲ್ಲಿವೆ. ವೈಲೆಂಟ್ ವೇಲು ಹಾಗೂ ರಾಮ್‌ದೇವ್ ಅವರ ಸಾಹಸ ನಿರ್ದೇಶನವಿದೆ. ಚಿತ್ರದ ಹಾಡುಗಳಿಗೆ ಸುರೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದಲ್ಲಿ ಒಂದು ಮಾಸ್ ಹಾಗೂ ಎರಡು ಬಿಟ್ ಸಾಂಗ್ ಇದೆ. ವಿಶ್ವ ಡಿಜಿಟಲ್ ಮೀಡಿಯಾ ಮೂಲಕ ವಿಜಯಭಾಸ್ಕರ್ ಹರಪನಹಳ್ಳಿ, ಜೆ.ಎಂ.ಪ್ರಹ್ಲಾದ್ ಹಾಗೂ ಪಿ.ಆರ್.ಶ್ರೀಧರ್ ಒಟ್ಟಾಗಿ ‘ರಾಜತಂತ್ರ’ಕ್ಕೆ ಬಂಡವಾಳ ಹೂಡಿದ್ದು, ನಿರ್ಮಾಣದ ಜವಬ್ಧಾರಿ ಹೊತ್ತುಕೊಂಡಿದ್ದಾರೆ. ಹಿರಿಯ ಸಾಹಿತಿ ಜೆ.ಎಂ. ಪ್ರಹ್ಲಾದ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ.

ಕೋಟ್ಸ್

‘ನಾನು ಇಪ್ಪತ್ತು ವರ್ಷಗಳ ಹಿಂದೆ ಪುಟ್ಟ ಹಳ್ಳಿಯಿಂದ ಬಂದೆ. ನನ್ನ ಈ ಪ್ರಯತ್ನದ ಹಿಂದೆ ಹಲವರ ಪ್ರೋತ್ಸಾಹವಿದೆ.
ಶ್ರಮವಿದೆ. ಅಮ್ಮನ ಮನೆ ನಂತರ ರಾಘಣ್ಣ ಅವರ ಜತೆ ಎರಡನೇ ಚಿತ್ರವಿದು. ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇದೆ. ಕನ್ನಡ ಸಿನಿಪ್ರಿಯರು ನಮ್ಮ ಕೈಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ.

– ಪಿವಿಆರ್ ಸ್ವಾಮಿ ನಿರ್ದೇಶಕ