Sunday, 8th September 2024

ಚಹಾದ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಯುಪಿಎಸ್‌ಸಿ ಪರೀಕ್ಷೆ ಪಾಸಾದ ಯುವಕ

ಸುರೇಶ ಗುದಗನವರ

ಯು.ಪಿ.ಎಸ್.ಸಿ. ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಕಡು ಬಡತನದ ಕಷ್ಟದಲ್ಲಿಯೂ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಸ್ವ ಪ್ರಯತ್ನದಿಂದ ಮೊದಲ ಎರಡು ಪ್ರಯತ್ನಗಳಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ವಿಫಲರಾದರೂ, ಭರವಸೆ ಕಳೆದುಕೊಳ್ಳದೇ ಮೂರನೇ ಪ್ರಯತ್ನದಲ್ಲಿ 2020ರಲ್ಲಿ 139 ನೇ ರ‍್ಯಾಂಕ್ ಗಳಿಸಿ ಐ.ಎ.ಎಸ್. ಅಧಿಕಾರಿಯಾಗಿ ಇತರರಿಗೆ ಸ್ಫೂರ್ತಿಯಾದವರು ಉತ್ತರ ಪ್ರದೇಶದ ಯುವಕ ಹಿಮಾಂಶು ಗುಪ್ತಾ.

ಉತ್ತರ ಪ್ರದೇಶದ ಬರೇಲಿಯ ಸಣ್ಣ ಹಳ್ಳಿ ಸಿರೋಲಿಯವರಾದ ಹಿಮಾಂಶು ಗುಪ್ತಾ ತಂದೆಯವರ ಸಣ್ಣ ಚಹಾದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬಿಡುವಿನ ವೇಳೆಯಲ್ಲಿ ದಿನಪತ್ರಿಕೆಗಳನ್ನು ಓದಲು ಇಷ್ಟ ಪಡುತ್ತಿದ್ದರು. ಅವರು ಅತ್ಯಂತ ಬಡತನದಲ್ಲಿ ದಿನಗಳನ್ನು ಕಳೆದರು. ನಂತರ ಅವರ ತಂದೆಯವರು ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿದರು. ಹಿಮಾಂಶು ಮೂಲ ಭೂತ ಶಿಕ್ಷಣವನ್ನು ಪಡೆಯಲು ಪ್ರತಿದಿನವು 70 ಕಿ.ಮೀ. ಪ್ರಯಾಣಿಸಿ ದರು.

12ನೇ ತರಗತಿಯವರೆಗೆ ಅವರ ಪ್ರಯಾಣ ಹೀಗೆಯೇ ಸಾಗಿತ್ತು. ಹಿಮಾಂಶು ಬಹಳ ಚುರುಕಾಗಿದ್ದರು. ಅವರು ಇತರ ವಿದ್ಯಾರ್ಥಿಗಳಿಗಿಂತ ಕಡಿಮೆ ಸಮಯದಲ್ಲಿ ಅಧ್ಯಯನ ಮಾಡಿ ವಿಷಯಗಳನ್ನು ತ್ವರಿತವಾಗಿ ಕಲಿತರು. 12ನೇ ತರಗತಿಯ ನಂತರ ದೆಹಲಿ ಹಿಂದೂ ಕಾಲೇಜಿಗೆ ಬಂದಾಗ ಮೊದಲ ಸಲ ಮೆಟ್ರೊ ಸಿಟಿಗೆ ಕಾಲಿಟ್ಟರು. ಹಿಮಾಂಶು ಸ್ಕಾಲರ್‌ಶಿಪ್ ಮತ್ತು ಟ್ಯೂಷನ್ ಕಲಿಸುವ ಮೂಲಕ ಪದವಿಯವರೆಗೂ ಅಧ್ಯಯನವನ್ನು
ಪೂರ್ಣ ಗೊಳಿಸಿದರು.

ಅವರು ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಿಂದ ತಮ್ಮ ಪದವಿಯನ್ನು ಪಡೆದರು. ಪದವಿಯ ನಂತರ ಅವರು ಸ್ನಾತಕೋತ್ತರ ಪದವಿ ಯನ್ನು ಪೂರ್ಣಗೊಳಿಸಿದರು. ಅವರು ಯು.ಜಿ.ಸಿ.ಯ ನೆಟ್ ಪರೀಕ್ಷೆ ಯಲ್ಲಿ ಮೂರು ಬಾರಿ ಉತ್ತೀರ್ಣರಾಗಿ, ಗೇಟ್ ಪರೀಕ್ಷೆಯಲ್ಲಿಯೂ ಸಹ ರ‍್ಯಾಂಕ್ ಗಳಿಸಿ ಕಾಲೇಜಿಗೂ ಕೀರ್ತಿ ತಂದಿದ್ದಾರೆ. ಹೀಗಾಗಿ ಅವರಲ್ಲಿ ಆತ್ಮವಿಶ್ವಾಸ ಇಮ್ಮಡಿಯಾಯಿತು. ಅಲ್ಲದೇ ಪಿಎಚ್.ಡಿ. ಮಾಡಲು ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆದರು. ಆದರೆ ಅವರು ವಿದೇಶಕ್ಕೆ ಹೋಗದೇ ತಮ್ಮ ದೇಶವನ್ನು ಮತ್ತು ವಿಶೇಷವಾಗಿ ತನಗೆ ಕಷ್ಟಪಟ್ಟು ಕಲಿಸಿದ ಪೋಷಕರೊಂದಿಗೆ ಇರಲು ನಿರ್ಧರಿಸಿದರು.

ಹೀಗಾಗಿ ಹಿಮಾಂಶು ನಾಗರಿಕ ಸೇವೆಗಳ ಪರೀಕ್ಷೆಗಳ ಬಗ್ಗೆ ಗಂಭೀರವಾಗಿ ಯೋಚಿಸಿ ಕಾರ‍್ಯಪ್ರವರ್ತರಾದರು. ಹಿಮಾಂಶು ಡಿಜಿಟಲ್ ಟಿಪ್ಪಣಿಗಳು ಮತ್ತು ವೀಡಿಯೋಗಳ ಮೂಲಕ ಸ್ವಯಂ ಅಧ್ಯಯನ ಮಾಡಲು ನಿರ್ಧರಿಸಿದರು. ಅವರು ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ನಿರಂತರವಾಗಿ ಅಧ್ಯಯನ ಮಾಡಿದರು. ಇಂಟರ್‌ನೆಟ್‌ನಲ್ಲಿ ಏನೇ ಅಧ್ಯಯನ ಸಾಮಾಗ್ರಿ ಸಿಕ್ಕರೂ ಹಾರ್ಡ್‌ಕಾಪಿ ತೆಗೆದು ಅಧ್ಯಯನ ಮಾಡುತ್ತಿದ್ದರು. ಅವರು ಯಾವುದೇ ತರಬೇತಿಯ ಸಹಾಯವಿಲ್ಲದೇ ಅಂತಹ ಕಠಿಣ ಪರೀಕ್ಷೆಯನ್ನು ಮೂರು ಬಾರಿ ಪ್ರಯತ್ನಿಸಿರುವುದು ಸುಲಭದ ಕೆಲಸವಲ್ಲ.

2018ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ರೇಲ್ವೆ ಸೇವೆಯನ್ನು ಪಡೆದರು. ನಂತರ 2019ರಲ್ಲಿ 304ನೇ ರ‍್ಯಾಂಕ್ ಗಳಿಸಿ ಅವರು ಭಾರತೀಯ ಪೋಲಿಸ್ ಸೇವೆಯನ್ನು ಪಡೆದರು. ಅಂತಿಮವಾಗಿ ೨೦೨೦ರಲ್ಲಿ ಅವರು ಮೂರನೇ ಬಾರಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 139ನೇ ರ‍್ಯಾಂಕ್ ಗಳಿಸಿ ಭಾರತೀಯ ಆಡಳಿತ ಸೇವೆಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಸ್ವಯಂ ಅಧ್ಯಯನದಿಂದ ಹಿಮಾಂಶು ಯಶಸ್ಸು ಸಾಧಿಸಿದರು.

ಯು.ಪಿ.ಎಸ್.ಸಿ. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ “ನೀವು ಹಳ್ಳಿಯಲ್ಲಿ ಅಥವಾ ಪಟ್ಟಣದಲ್ಲಿ ಉಳಿದುಕೊಂಡರೂ ಯು.ಪಿ.ಎಸ್.ಸಿ.ಗೆ ತಯಾರಿ ನಡೆಸಬಹುದು. ನೀವು ಮನೆಯಲ್ಲಿ ಕುಳಿತು ಇಂಟರ್ನೆಟ್ ಸಹಾಯದಿಂದ ಉತ್ತಮ ತಂತ್ರವನ್ನು ಮಾಡಿ ಮತ್ತು ತಯಾರಿಗಾಗಿ ನಿಮ್ಮನ್ನು ಬಲಪಡಿಸಿಕೊಳ್ಳಿ, ನಿಮ್ಮ ಕನಸು ದೊಡ್ಡದಾಗಿಸದ್ದರೆ ನೀವು ಜೀವನದಲ್ಲಿ ಎಲ್ಲಿ ಬೇಕಾದರೂ ತಲುಪಬಹುದು. ಆದ್ದರಿಂದ ಕಷ್ಟಪಟ್ಟು ಕೆಲಸ ಮಾಡಿ ಮತ್ತು ನಿಮ್ಮನ್ನು ನಂಬಿರಿ ಯಾಕೆಂದರೆ ಕನಸುಗಳು ನಿಜವಾಗಿಯೂ ನನಸಾಗುತ್ತವೆ” ಎಂದು ಐ.ಎ.ಎಸ್ ಅಽಕಾರಿ ಹಿಮಾಂಶು ಗುಪ್ತಾ ಹೇಳುತ್ತಾರೆ.

ಸತತ ಮೂರು ಬಾರಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿಮಾಂಶು ಗುಪ್ತಾ ಯಾವುದೇ ಕೋಚಿಂಗ್ ತೆಗೆದುಕೊಳ್ಳದೇ ಡಿಜಿಟಲ್ ಮಾಧ್ಯಮದಲ್ಲಿ ಓದುವ ಮೂಲಕ ಅಪೂರ್ವ ಸಾಧನೆ ಮಾಡಿ, ಗ್ರಾಮೀಣ ಯುವ ಮನಸ್ಸುಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು.

error: Content is protected !!