Sunday, 8th September 2024

ಕೂಡಿ ಕಂಡ ಕೋಟಿ ಕನಸುಗಳ ಕೊನೆಯ ನಿಲ್ದಾಣ !

ಅದ್ಯಾರೋ ಒಬ್ಬರು ನನ್ನನ್ನು ಕೇಳಿದರು, ನಿನ್ನ ಪ್ರೇಯಸಿಯನ್ನ ಅದೆಷ್ಟು ಬಾರಿ ನೆನೆಯುತ್ತೀಯಾ? ಅಂತ. ಒಬ್ಬ ನಿಜವಾದ ಪ್ರೇಮಿ ಇನ್ನೊಂದು ಪ್ರೇಮದಲ್ಲಿಯೂ ಸುಖಿಸುವುದನ್ನ ಅರಿತುಕೊಳ್ಳುತ್ತಾನೆ. ಬಿಸಿಲ ಧಗೆಗೆ ಒಣಗಿ ಹೋದ ಮಣ್ಣ ಕಣಕ್ಕೆ ನೀರಿನ ಅಪ್ಪುಗೆಯೇ ವಿರಹಶಮನ.

ಅಂತಹ ಸಾವಿರ ಅನುಬಂಧಗಳ ತವರು ಈ ನೆಲ. ಅಂತಹ ಶತಕೋಟಿ ಬಂಧನಗಳು ತರಿಸುವುದು ನನಗೆ ನಿನ್ನ ನೆನಪನ್ನೇ!

ನಾನು ಹುಂಬನಂತಿದ್ದೆ. ನೀನು ಜಂಬ ಹೊತ್ತಿದ್ದೆ. ನನಗೆ ನಿಸಾರ್ ಅಹಮದ್ ಹಿಡಿಸಿ ದ್ದರು. ತಿಳಿದ ನೀನು ಕವನ ಸಂಕಲನದ ಹೊತ್ತಗೆ ನೀಡಿದ್ದೆ. ನಿನಗೆ ಬಿಚ್ಚು ಮೈಯಿಯ ಹೃತಿಕ್ ಇಷ್ಟ, ನನಗೆ ಚುಚ್ಚುಕಂಗಳ ಐಶ್ ಇಷ್ಟ. ತಿಳಿದೂ ನಾವು ಅವರೀರ್ವರ ಒಂದೇ ಸಿನೆಮಾವನ್ನೂ ನೋಡಲಿಲ್ಲ.

ಪ್ರೇಮ ಬೆಳೆದಂತೆಯೇ ಬೆಳೆದ ಕನಸದಾದರೂ ಎಂತವು!? ನಾನು ತಪ್ಪದೇ ವಾರಕ್ಕೊಂದು ಕವಿತೆ ಸೃಜಿಸಬೇಕು. ನೀನು ಅದನ್ನು ತಿದ್ದಿ ವಿಮರ್ಶಿಸಬೇಕು. ಎದೆಯೊಳಗೊಂದು ಬೆಂಕಿಯ ಕಿಡಿ ಹತ್ತಿಸುವ ಸುಂದರ ಸಿನೆಮಾಗಳನ್ನ ವಾರಕ್ಕೊಂದಾದರೂ ತಪ್ಪದೇ ನೋಡಬೇಕು. ದೇವಸ್ಥಾನಕ್ಕೆ ಪಂಚೆ- ಸೀರೆ ಗಳನ್ನುಡದೇ ಹೋಗಕೂಡದು. ಪುರಂದರ-ಕನಕರ ಹಾಡುಗಳನ್ನ ಮಕ್ಕಳಿಗೋಸ್ಕರ ವಾದರೂ ಹಾಡುವುದ ಕಲಿಯಬೇಕು.

ನಟ ರಮೇಶ್ ಜತೆ ಒಂದು ಸೆಲಿ ಬೇಕು. ನೂರು ಜನ್ಮಕೂ ಹಾಡು ಇಬ್ಬರೂ ಹಾಡಬೇಕು. ರ‍್ಯಾಪ್ ಹಾಡುಗಳಿಗೆ ಬೈಯಬೇಕು. ಒಂದೇ ಸಮನೆ ಅಣ್ಣಾವ್ರನ್ನ ಮನಸಾರೆ ಮೆಚ್ಚಬೇಕು. ಪ್ರತೀ ಮೂರು ತಿಂಗಳಿಗೆ ಸಪ್ನ ಪುಸ್ತಕ ಭಂಡಾರಕ್ಕೆ ಹೋಗಬೇಕು! ನೆನಪಿಡು, ಇವೆ ನಾವಿಬ್ಬರೂ ಪ್ರತ್ಯೇಕವಾಗಿ ಕಂಡ ಕನಸಲ್ಲ. ಇಬ್ಬರೂ ಸೇರಿ ಕೂಡಿ ಕಂಡ ಕನಸುಗಳಿವು.

ಗುಣ ಮೆಚ್ಚಿ ವರಿಸುವ ಗಂಡು, ರೂಪ ಮೆಚ್ಚಿ ವರಿಸುವ ಹೆಣ್ಣು ಭೂಮಿಯ ಮೇಲೆ ಹುಟ್ಟಿಲ್ಲವಂತೆ. ಅದಕ್ಕೆ ಇತಿಹಾಸವೇ ಸಾಕ್ಷಿ. ನಮ್ಮ ವರ್ತಮಾನವೂ ಸಾಕ್ಷಿ. ಯಾವುದೋ ಒಂದು ಮುರಳಿಯು ನಿನ್ನನ್ನು ದೂರದ ತೀರಕ್ಕೆ ಸೆಳೆಯಿತು. ಈ ನನ್ನ ಮನಸ್ಸೆಂಬ
ಸುಪ್ತಸಾಗರದ ಮೂಕ ಮರ್ಮರ ಮೊರೆತಗಳು ನಿನ್ನನ್ನ ತಟ್ಟದಾದವು. ನಮ್ಮ ಪ್ರೇಮ ನಿನ್ನಿಂದ ವಿವಶವಾಗಿತ್ತು. ಇರುವದನ್ನೇ ಬಿಟ್ಟು ನೀನು ದೂರ ಸರಿದು ಬಿಟ್ಟೆ!

ಬಾರದ ದಿನಗಳ ಮಣಿಗಳ ಪೋಣಿಸು ನೆನಪಿನ ದಾರದಲಿ ಒಲವಿನ ಜಪದೊಳೆ ಬಾಳುವ ಬಾಳಿನ ಕಾರಾಗಾರದಲಿ ಹಾಗಂತ ಬರೆದವರು ಅಡಿಗರು. ಒಲವಿನ ಮಾಲೆಯ ತುಂಬೆಲ್ಲ ನೆನಪಿನ ಮಣಿ ಗಳಿವೆ. ಬಾಳಿನ ಕಾರಾಗಾರಕ್ಕೆ ಇದಕ್ಕಿಂತ ಒಳ್ಳೆ ಮಾಲೆ ನನಗೆ ಸಿಕ್ಕೀತಾದರೂ ಹೇಗೆ? ನೋ ಚಾನ್ಸ್! ಅಷ್ಟರ ಮಟ್ಟಿಗೆ ನಾನು ಋಣಿ. ಮುಗಿಸುವ ಮುನ್ನ ಕೊನೆಯ ಕೋರಿಕೆ.. ನಾಳೆ ನಿನಗೆ ಮಕ್ಕಳಾಗುತ್ತೆ. ಮದುವೆಯಾದರೆ ನನಗೂ ಆದೀತು. ಆ ಪುಟ್ಟ ಮಗುವು ನನ್ನ ಬಳಿ ಬಂದು ನಿನ್ನ ಮೊದಲ ಪ್ರೇಯಸಿ ಯಾರು ಅಂತ ಕೇಳಿದರೆ ಬಿಚ್ಚುಮನಸಿ ನಲ್ಲಿ ನಿನ್ನ ನೆನೆಯುತ್ತೇನೆ.

ನೀನೂ ಅದನ್ನೇ ಮಾಡುತ್ತೀಯಾ ಅಂತ ನಂಗೆ ಖಾತ್ರಿಯಿದೆ. ಯಾಕೆಂದರೆ ನಾನು ನಿಸಾರರ ಹಾಡುಗಳಲ್ಲಿ, ರಮೇಶನ ತ್ಯಾಗ ಗಳಲ್ಲಿ, ಸಪ್ನ ಬುಕ್ ಹೌಸಿನ ಬುಕ್ ರಾಕ್ ನಲ್ಲಿ, ಅಣ್ಣಾವ್ರ ಸಿನಿಮಾಗಳ ಹಾಡುಗಳಲ್ಲಿ ನಿನಗೊಂದು ನೆನಪಿನ ಕೊಂಡಿಯಾಗಿಯೇ ಬದುಕಿರುತ್ತೇನೆ..

ಇಂತಿ ನಿನ್ನವ

ಪರವಶನಾದವ
-ಜೆ. ಪ್ರೇಮ್ ಎಸ್

error: Content is protected !!