Sunday, 8th September 2024

ನನ್ನೊಲವಿನ ಉಸಿರೇ…

ಲಕ್ಷ್ಮೀಕಾಂತ್ ಎಲ್.

ಪ್ರೀತಿಯ ನಾವೆಯು ಸಾಗಿದೆ ಪ್ರಶಾಂತ ತೊರೆಯಲ್ಲಿ. ಅದು ದಡ ಸೇರಲು ನೀನು ಹುಟ್ಟು ಹಾಕಬೇಕು ಗೆಳತಿ.

ಕಾರ್ಮೋಡದ ಕತ್ತಲಿಗೊಂದು ಹೆಸರು ಇಟ್ಟು ಕುಳಿತವನಿಗೆ ಅದೆಲ್ಲಿಂದಲೋ ಸಿಡಿಲು ಬಡಿದು ಮೂಡಿದ ಬೆಳಕಲ್ಲಿ ಕಂಡ ಚೆಲುವೊಂದು ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ಇಳಿಸಂಜೆಯ ಕನಸಿನೊಳಗೆ ಚಿತ್ತಾರ ಬರೆಯಲು ಶುರುಮಾಡಿದ್ದೇ ಅಂದು ಕಂಡ ನಿನ್ನ ಅಂತರಂಗದ ಅನುರಾಗ. ಮುಗಿಯದ ಈ ಮೌನದಲ್ಲಿ ಸಾಗುತ್ತಿದ್ದ ಒಲವಿನ ಯಾನಕ್ಕೆ ಬಳ್ಳಿಯಂತೆ ಆವರಿಸಿ ಬರಸೆಳೆದವಳು ನೀನು ಕಣೆ.

ಕಾರಿರುಳ ಬಿಸಿಯುಸಿರು ತಾಗುವ ಮುನ್ನವೇ ಬದುಕಿಗೆ ತಂಗಾಳಿಯಾಗಿ ಬಂದು ಹೆಗಲು ಕೊಟ್ಟವಳು ನೀನು. ಮುರಿ ಮನಸಿನೊಳಗೆ ಮರೆಯಲಾರದ ನೆನಪಿಟ್ಟುಕೊಂಡು ಕಣ್ಣೀರಿನ ಹನಿಗಳನ್ನು ಜಾರಿಸುತ್ತಿದ್ದ ಜೀವನಕ್ಕೆ ನಲಿವು ಸುರಿದು ಮುಂಗಾರಿನ ಅಭಿಷೇಕ ನೀಡಿದವಳು ನೀನು. ಬೆಳದಿಂಗಳ ಹೊಂಗಿರಣವೊಂದು ಕತ್ತಲೆಯ ಎದೆಗೂಡಿಗೆ ಬೆಳಕು ಚೆಲ್ಲಿ ರಂಗವಲ್ಲಿ ಹಾಕಿದ ನಿನ್ನೊಂದಿಗೆ ಅನುಗಾಲಕೂ ಅನುರಾಗವಾಗಿ ಜೊತೆಯಾಗಿ ಇರುವಾಸೆ ಗೆಳತಿ.

ಮೋಡದ ಮರೆಯಿಂದ ಚಂದಿರನು ನಾಚುತ್ತಾ ಇಣುಕುವಾಗ ಬಾನಾಡಿಗಳು ಸ್ವಾಗತ ಕೋರುವಂತೆ ಮನಸಿನೊಳಗೆ ಮೂಡಿದ ಅನುರಾಗವು ನಾಚಿ ನಿನ್ನ ಒಲವನ್ನು ಈ ಹೃದಯ ಸ್ವಾಗತಿಸಿ ಸಂಭ್ರಮಿಸುತ್ತಿದೆ ಕಣೆ. ಸುತ್ತಲಿನ ಪರಿಲ್ಲದೆಯೇ ತಲ್ಲಣದ ಮನಸ್ಸು ನನ್ನೊಳಗೇ ಏನೇನೋ ಪಿಸುಗುಡುತ್ತಾ ನಿನ್ನ ಬಿಸಿ ಅಪ್ಪುಗೆಗಾಗಿ ಮನಸ್ಸು ಕಾತರದಿಂದ ಕಾಯುತ್ತಿದೆ. ಬಯಲು ಹರಡಿದ ಬದುಕಿನಲ್ಲಿ ಬಿರುಗಾಳಿ ಬೀಸುವ ಮುನ್ನ ದಾರಿ ಕಾಣದೆ ದಿಕ್ಕೆಟ್ಟು ಅಲೆಯುವ ಮುನ್ನ ಈ ಒಲಗೊಂದು ಶಾಶ್ವತ ನೆಲೆ  ನೀಡಬೇಕಿದೆ.

ನಿನ್ನ ನೆನಪುಗಳು ನೆಪವಾಗಿ ಕಾಡುವಾಗ ನಾಳೆಯ ಕನಸುಗಳು ಕೂಡಿಡುತ್ತಾ ಜೊತೆಯಾಗಿ ಸಾಗುವ ಭರವಸೆಯು ಗಟ್ಟಿ ಯಾಗ ಬೇಕಿದೆ. ಮುಸುಕು ಮುಚ್ಚಿದ ಮಬ್ಬಿನೊಳಗೆ ಕದ ಇಬ್ಬನಿಯ ಮುತ್ತಿನಲ್ಲಿ ನಿನ್ನ ನೆನಪನ್ನು ಅಡಗಿಸಿಟ್ಟು ಸ್ವಾತಿ ಮುತ್ತಾಗಿಸುವ ಆಸೆ ಇನ್ನೂ ಹೆಚ್ಚಾಗಿದೆ ಕಣೆ. ಆತಂಕಲ್ಲದೆ ಮರೆತು ಮರೆಯಲಾಗದ ನಿನ್ನ ನೆನಪುಗಳ ಜೊತೆಯಲ್ಲಿ ಬದುಕು ಸಾಗಿಸುತ್ತಿರುವ ನನಗೆ ಕಿರುಬೆರಳು ಹಿಡಿದು ಜೊತೆಯಾಗಿ ನಡೆಯುವ ಆಶಯ ಮತ್ತಷ್ಟು ಹೆಚ್ಚಿದೆ ಕಣೆ.

ಇತ್ತೀಚಿಗೆ ಮುಗಿಯದ ಮಾತೊಂದು ಮೌನ ತಳೆದು ಕನವರಿಕೆ ಹೆಚ್ಚಾಗಿಬಿಟ್ಟಿದೆ. ಕನಸುಗಳು ಅರಳುತ್ತಿವೆ; ಅವುಗಳು ಬಾಡಿ ಹೋಗದಂತೆ ಕಾಪಿಡುವ ಕೆಲಸ ನಿನ್ನದು ಕಣೆ. ನೀನೊಮ್ಮೆ ಈ ಒಲವಿನ ಅರಮನೆಗೆ ಬಂದುಬಿಡು; ಪ್ರೀತಿಯ ಸವಿಯುಂಡು ಬದುಕು ಬಂಗಾರದಂತೆ ಸಾಗಿಸೋಣ. ಕಾಣದ ದೇವರಲ್ಲಿ ಮೊರೆಟ್ಟು ಕೇಳುವ ಭಕ್ತಿಗೆ ಶಕ್ತಿಯಾಗಿ ನೀನು ಬರಬಾರದೆ? ನಿನ್ನ ಸನಿಹವಿಂದು ಹಳೆಯ ಹಾಡು ಮನದಿ ಗುನುಗುವಾಗ ಹೃದಯ ಮಿಡಿದು ಕಂಬನಿ ಮುತ್ತಾಗಬೇಕಿದೆ.

ಬಡವಾಗದ ನನ್ನೆದೆಯ ಭಾವಕುಸುರಿ ನಿನ್ನ ಒಲನ ಉಸಿರಲ್ಲಿ ಅರಳಿಬಿಟ್ಟಿದೆ. ಪ್ರತಿದಿನವು ಮನಸ್ಸು ಸೆಳೆತದ ವಿರಹದ ತಾಪದಲ್ಲಿ ಸೋಲುತ್ತಿದೆ. ಒಲವಿನ ಮನಸ್ಸು ಜಾರದಿರಲಿ ಗೆಳತಿ. ಪದಗಳಿಗೆ ಸಿಲುಕದ ಒಲುಮೆಗಿಂದು ಹೆಸರಿಟ್ಟು ಬಣ್ಣಿಸುತ್ತಾ ಕನವರಿಸು ತ್ತಿರುವೆ. ಜೀವಭಾವ ಬೆಸೆದು ಅಮರ ಪ್ರೇಮ ಮೂಡಿ ಕೆನ್ನೆ ಮೇಲೆ ಗುರುತೊಂದನ್ನು ಮೂಡಿಸಲು ನೀನೊಮ್ಮೆ ಬರುವೆಯಾ ಗೆಳತಿ? ಈ ಬಾಳ ದೋಣಿಯಲ್ಲಿ ಒಟ್ಟಿಗೆ ಸೇರಿ ಸಾಗುವ ಜೀವದು, ಸೋನೆ ಮಳೆಯಲ್ಲಿ ಹನಿಯಾಗಿ ನಿನ್ನ ಜೊತೆಯಾಗಿ ನಡೆಯುವ ಆಸೆಯೊಳಗೆ ಬೊಗಸೆ ಹಿಡಿದು ಕಾದಿರುವೆ. ಹಣೆಬರಹ ಬರೆದ ದೇವರಿಗೂ ಸವಾಲು ಹಾಕಿ ಜೊತೆಯಾಗಿ ಬದುಕೋಣ. ಪ್ರೀತಿ
ಸುಧೆಯ ಸಿಂಚನವನ್ನು ಜಗತ್ತಿನ ತುಂಬೆಲ್ಲಾ ಹರಡಿ ಪ್ರೀತಿ ಲೋಕವನ್ನು ಸೃಷ್ಟಿ ಮಾಡೋಣ. ಒಲವಿನ ತೋಟದಲ್ಲಿ ಅರಳುವ ಹೂಗಳನ್ನು ಬಾಡದಂತೆ ನೋಡಿಕೊಳ್ಳೋಣ.

error: Content is protected !!