Sunday, 8th September 2024

ಬದುಕಿನಲ್ಲಿ ತಾಳ್ಮೆ ಬಲು ಮುಖ್ಯ

ರಂಗನಾಥ ಎನ್.ವಾಲ್ಮೀಕಿ

ತಾಳ್ಮೆ ಎಂದರೆ ಒಂದು ಮನಸ್ಸಿನ ಸ್ಥಿತಿ – ಭಾವ. ಜೀವನದಲ್ಲಿ ಅನೇಕ ಸಂಕಷ್ಟ, ಸುಖ, ದುಃಖ, ನೋವು ನಲಿವು ಬರುವುದು ಸಹಜ. ನಾವಂದುಕೊಂಡಂತೆ ಎಲ್ಲವೂ ಬದುಕಿನಲ್ಲಿ ಘಟಿಸುವದಿಲ್ಲ. ನಾವು ಒಂದು ಬಯಸಿದರೆ ದೈವ ಮತ್ತೊಂದು ಬಗೆದೀತು ಎಂಬಂತೆ ನಾವೂ ನಿರೀಕ್ಷಿಸದ ಅನೇಕ ಘಟನೆಗಳು ಜರುಗುತ್ತವೆ. ಕಷ್ಟ, ಸುಖ ಒಂದಾದ ಮೇಲೆ ಒಂದರಂತೆ ಬರುತ್ತವೆ.

ಅಂತಹ ಸಂದರ್ಭಗಳಲ್ಲಿ ನಾವೂ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಬಲು ಮುಖ್ಯ. ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೇ ಅವೆರಡನ್ನೂ ಸಮಾನ ವಾಗಿ ಸ್ವೀಕರಿಸುವ ಸ್ಥಿತ ಪ್ರಜ್ಞ ನಮ್ಮಲ್ಲಿ ಇರಬೇಕು. ಯಾರೋ ಒಂದು ಮಾತು ಹೇಳಿದರೆಂದು, ನಾನು ಬಯಸಿದ್ದು ಆಗಲಿಲ್ಲ ಎಂದು, ಕಷ್ಟವೇ ನನಗೆ ಶಾಶ್ವತ ವೆಂದು ನಮ್ಮ ಮನಸ್ಸಿನ ಹತೋಟಿ ಕಳೆದುಕೊಳ್ಳದೇ ಧನಾತ್ಮಕ ವಾಗಿ ಆ ರೀತಿಯ ವ್ಯಕ್ತಿರಿತ್ತ ಸಂದರ್ಭಗಳನ್ನು ಎದುರಿಸ ಬೇಕು.

ಏಕೆಂದರೆ ನಮ್ಮ ಸಮಾಜದಲ್ಲಿ ವಿಭಿನ್ನ ಮನೋಧರ್ಮದ ಜನರು ವಾಸ ಮಾಡುವರು. ಅವರ ಮಾತು, ಚಿಂತನೆ, ಆಲೋಚನೆ ಭಿನ್ನ ವಾಗಿರುತ್ತವೆ. ಗುಣ ಸ್ವಭಾವ ಕೂಡಾ. ಹೀಗಿರುವಾಗ ಎಲ್ಲರೂ ನಮ್ಮ ತರಹ ಇರಲಿ ಎಂದು ನಾವು. ನಾವು ಎದುರುಗಡೆ ವ್ಯಕ್ತಿಯ ತರಹ ಇರಲಿ ಎಂದು ಅವರು ಬಯಸಲೇ ಬಾರದು. ಬದುಕಿನಲ್ಲಿ ತಾಳ್ಮೆ ಬಲು ಮುಖ್ಯ. ಅನೇಕರು ಸಣ್ಣ ಪುಟ್ಟ ವಿಷಯಗಳಿಗೂ ಕೋಪಗೊಂಡು ಕೂಗಾಡುವದನ್ನು ನಾವೂ ಕಾಣುತ್ತೇವೆ.ನಮಗೆ ಅತಿ ಕೋಪ ಬರುತ್ತೆ ಎಂದು ಅವರು ಹೇಳುವರು.

ಆದ್ರೆ ಅವರ ಕೋಪ ಇತರರ ಮಾನಸಿಕ ಸಂತಸಕ್ಕೆ ಅಡ್ಡಿಯಾಗುತ್ತೆ ಎಂಬುದು ತಿಳಿದಿರಬೇಕು. ಒಂದು ನಿಮಿಷದ ಕೋಪ ಅರವತ್ತು ನಿಮಿಷದ ಸಂತಸವನ್ನು ಹಾಳು ಮಾಡುತ್ತದೆ ಎಂದು ಹೇಳುತ್ತಾರೆ. ನಿಜ.ಒಂದು ಕ್ಷಣದ ಕೋಪ ಅನೇಕ ಅನಾಹುತ ಗಳಿಗೆ ಎಡೆ ಮಾಡಿಕೊಡುವುದು.ಯಾರೋ ಒಂದು ಮಾತು ಬೈದ ರೆಂದು ಜಗಳವಾಡುತ್ತಾ ಕೈ ಕೈ ಮೀಲಾಯಿಸುವುದು ಒಳ್ಳೆಯದಲ್ಲ.

ಎಷ್ಡೋ ಜನ ಅಪರಾಧಿಗಳು ಮೂಲತ ಕೆಟ್ಟವರಾಗಿರಲ್ಲ. ಆದರೆ ಯಾವುದೋ ಒಂದು ಕಹಿ ಗಳಿಕೆಯಲ್ಲಿ ಬುದ್ದಿ ಮತ್ತೆ ಕಳೆದು ಕೊಂಡು ಒಂದು ತಪ್ಪು ಕೆಲಸ ಮಾಡಿ ಪಶ್ಚಾತ್ತಾಪ ಪಡುವರು. ಈ ಎ ಘಟನೆ ಗಮನಿಸಿದಾಗ ಬದುಕಿನಲ್ಲಿ ತಾಳ್ಮೆಯ ಮಹತ್ವ ತಿಳಿಯುವುದು. ಜೀವನದ ಪ್ರತಿ ಕ್ಷಣವನ್ನು ತಾಳ್ಮೆಯಿಂದ ಕಳೆಯಬೇಕು. ನಿತ್ಯ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಾ ವಿನಯತೆ , ವಿಧೇಯತೆ ಹೊಂದಿ ಕಷ್ಟ ಸುಖ ಸಮಾನವಾಗಿ ಸ್ವೀಕರಿಸುತ್ತಾ ಕೋಪದ ಕೈಗೆ ಬುದ್ದಿ ಕೊಡದೇ ಮುನ್ನಡೆಯಬೇಕು.

ನಮ್ಮ ಚಿಂತನೆಗಳು ವಿಶಾಲವಾಗಿರಬೇಕು. ವಿಶಾಲ ಮನೋಭಾವದ ವ್ಯಕ್ತಿಗಳ ಜೊತೆ ನಮ್ಮ ಒಡನಾಟ ಇರಬೇಕು. ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಈ ಎಲ್ಲಾ ಆಶಾದಾಯಕ ಬೆಳವಣಿಗೆಗೆ ತಾಳ್ಮೆ ಬಲುಮುಖ್ಯ.

error: Content is protected !!