Sunday, 8th September 2024

ಹವ್ಯಾಸಗಳ ಹೊಸ ಜಗತ್ತು !

ಸಂತೋಷ್ ರಾವ್ ಪೆರ್ಮುಡ

ತಂತ್ರಜ್ಞಾನವನ್ನು ಬಳಸಿ, ಆನ್‌ಲೈನ್ ಸೌಲಭ್ಯದ ಸದುಪಯೋಗ ಪಡೆದು, ವಿವಿಧ ಹವ್ಯಾಸಗಳನ್ನು ಕಲಿಯುವ ಕಾಲಮಾನ ಇದು. ಮನೆಯಲ್ಲೇ ಇದ್ದುಕೊಂಡು ಹೊಸ ಹೊಸ ಹವ್ಯಾಸಗಳನ್ನು ಕಲಿಯಲು ಇಂದು ಸಾಧ್ಯ.

ಬದುಕಿನಲ್ಲಿ ನೆಮ್ಮದಿ, ಸಂತಸ ಕಾಣಲು ಹವ್ಯಾಸಗಳು ಸಹಾಯಕ ಎಂಬುದು ಹಳೆಯ ಸಲಹೆ. ಆದರೆ, ಕಾಲ ಬದಲಾದಂತೆ ಹವ್ಯಾಸಗಳು ಸಹ ಬದಲಾಗುತ್ತಾ ಬಂದಿರುವುದನ್ನು ನೀವೂ ಸಹ ಗುರುತಿಸಿರಬಹುದು.

ಕೆಲವು ದಶಕಗಳ ಹಿಂದೆ ಜನಪ್ರಿಯವಾಗಿದ್ದ ಹವ್ಯಾಸಗಳು, ಇಂದು ಓಲ್ಡ್ ಫ್ಯಾಷನ್ ಎನಿಸಬಹುದು. ಹೊಸ ಹವ್ಯಾಸಗಳು ಸಾಕಷ್ಟು ಕುತೂಹಲವನ್ನೂ ಕೆರಳಿಸಿರಬಹುದು. ತಂತ್ರಜ್ಞಾನವು ಸಾಕಷ್ಟು ಮುಂದುವರಿದಿರುವ ಈಗಿನ ಕಾಲಮಾನದಲ್ಲಿ, ಹೊಸ ಹವ್ಯಾಸಗಳು ಪಡೆಯುತ್ತಿರುವ ಜನಪ್ರಿಯತೆ ನಿಜಕ್ಕೂ ವಿಶೇಷ. ಇಂದಿನ ತಲೆಮಾರು ಸಮಯದ ಸದುಪಯೋಗ ಮಾಡಿಕೊಳ್ಳಲು ಅನುಕೂಲ ಎನಿಸುವ ಹವ್ಯಾಸಗಳಾಗುವುವು ಎಂಬುದನ್ನು ನೋಡೋಣ.

ಜರ್ನಲ್ ಹಾಗೂ ಬ್ಲಾಗ್: ನಿಮಗೆ ಬರವಣಿಗೆಯ ಕ್ಷೇತ್ರದಲ್ಲಿ ಮತ್ತು ಛಾಯಾಚಿತ್ರಗ್ರಹಣದಲ್ಲಿ ಆಸಕ್ತಿಯಿದ್ದರೆ, ನಿಮ್ಮ ಜೀವನದ ಸವಿನೆನಪುಗಳು, ಅಜ್ಜಿ ಹೇಳಿದ ಹಳೆಯ ಕಥೆಗಳು ಮತ್ತು ವಿಶೇಷ ಸನ್ನಿವೇಶಗಳು, ವಿಶೇಷ ಸಾಧನೆಗಳು, ಬಾಲ್ಯದ ಅನುಭವಗಳು ಮತ್ತು ರೋಚಕ ಸಂದರ್ಭಗಳನ್ನು ಬರೆದು ಅವುಗಳನ್ನು ನಿಮ್ಮದೇ ಆದ ಜರ್ನಲ್ ಯಾ ಬ್ಲಾಗ್‌ಗಳಲ್ಲಿ ಆನ್‌ಲೈನ್ ಮೂಲಕ ಮತ್ತು ಕೂ ಅಪ್ಲಿಕೇಶನ್ ಮೂಲಕ ಸಂಚಿಕೆಗಳಂತೆ ಗೆಳೆಯರೊಂದಿಗೆ ಹಂಚಿಕೊಳ್ಳಬಹುದು. ಛಾಯಾಚಿತ್ರಗಳನ್ನು ಸಹ ಬ್ಲಾಗ್‌ಗೆ ಅಪ್‌ಲೋಡ್ ಮಾಡಿ, ಇಡೀ ಜಗತ್ತಿನ ಸಮಾನಾಸಕ್ತ ಜನರೊಂದಿಗೆ ಸಂಪರ್ಕ ಸಾಧಿಸ ಬಹುದು.

ಸ್ನೇಹಿತರೊಂದಿಗೆ ವೀಡಿಯೋ ಸಲ್ಲಾಪ: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಪ್ರತಿಲಿಪಿ, ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿ ವೀಡಿಯೋ ಕರೆಯ ಆಯ್ಕೆಗಳು ಜನಪ್ರಿಯವಾಗಿದ್ದು, ಗೆಳೆಯ ಗೆಳತಿಯ ರೊಂದಿಗೆ ವೀಡಿಯೋ ಮೂಲಕ ಸಚಿತ್ರ ಚರ್ಚೆಗಳು, ಸ್ಥಳ ಮತ್ತು ವಸ್ತುಗಳ ಪರಿಚಯ ಮತ್ತು ಸಲ್ಲಾಪಗಳನ್ನು ನಡೆಸುವ ಮೂಲಕ ಹೊಸ ವಿಚಾರ ಗಳನ್ನು ಕಲಿಯುವ ಕೆಲಸವನ್ನು ಮಾಡಬಹುದು. ಹೊಸ ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಲು, ಹೊಸ ಕೆಲಸವನ್ನು ಕಲಿಯಲು ವಿಡಿಯೋ ಕರೆಗಳು ಸಾಕಷ್ಟು ಸಹಾಯ ಮಾಡಬಲ್ಲವು.

ಝೂಮ್ ಮೂಲಕ ಆನ್‌ಲೈನ್ ತರಬೇತಿ: ಕೆಲವೊಂದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತರಬೇತುದಾರರು ಝೂಮ್ ಅಪ್ಲಿಕೇಶನ್ ಮೂಲಕ ಆನ್‌ಲೈನ್ ತರಬೇತಿಗಳನ್ನುಇಂದು ನೀಡುತ್ತಿದ್ದಾರೆ. ಹೊಸ ಹೊಸ ವಿಚಾರಗಳನ್ನು ಮನೆಯಲ್ಲೇ ಕುಳಿತು ಕಲಿಯಬಹುದು. ನೀವೊಬ್ಬ ಉತ್ತಮ ತರಬೇತುದಾರರಾಗಿದ್ದಲ್ಲಿ ವಿವಿಧ ತರಬೇತಿಗಳನ್ನೂ ನೀವು ಹಮ್ಮಿಕೊಳ್ಳಬಹುದು.

ಹೊಸ ಹೊಸ ಭಾಷೆಗಳನ್ನು ಕಲಿಯಿರಿ: ಇಂದು ಗೂಗಲ್ ಮೂಲಕವೇ ಹಲವು ಭಾಷೆಗಳನ್ನು ಕಲಿಯಲು ಸಾಧ್ಯವಿದೆ ಮತ್ತು ಗೂಗಲ್ ಪ್ಲೇಯಲ್ಲಿ ಇದಕ್ಕೆ ಸಂಬಂಧಿಸಿದ ಹಲವಾರು ಅಪ್ಲಿಕೇಶನ್‌ಗಳು ಲಭ್ಯವಿದ್ದು, ಅದರ ಮೂಲಕ ದೇಶ ವಿದೇಶಗಳ ವಿವಿಧ ಭಾಷೆಗಳನ್ನು ಕಲಿಯಬಹುದು.

ಚಿತ್ರಕಲೆ: ಸಮಯದ ಸದುಪಯೋಗಕ್ಕಾಗಿ ಚಿತ್ರಕಲೆಯೂ ಒಂದು ಬಹು ಮುಖ್ಯವಾದ ಹವ್ಯಾಸ. ತಂತ್ರಜ್ಞಾನದ ಮೂಲಕ ಪೆನ್ಸಿಲ್ ಶೆಡಿಂಗ್, ವಾಟರ್ ಪೈಂಟಿಂಗ್, ಆಯಿಲ್ ಪೈಂಟಿಂಗ್, ಲ್ಯಾಂಡ್‌ಸ್ಕೇಪಿಂಗ್‌ಗಳನ್ನು ಮನೆಯಲ್ಲಿಯೇ ಕುಳಿತು ಕಲಿ ಯಬಹುದಾಗಿದೆ. ಈ ಪೈಂಟಿಂಗ್ ಗಳು ಆದಾಯವನ್ನೂ ತರಬಲ್ಲವು.

ಸಂಗೀತ ಕಲಿಕೆ: ಆನ್‌ಲೈನ್‌ನಲ್ಲಿ ಸಂಗೀತ ಕಲಿಯುವ ಅವಕಾಶ ಇಂದು ದೊರಕಿರು ವುದು ಬಹಳ ವಿಶೇಷ. ಹಿಂದೆ ಗುರುಮುಖೇನ ಮಾತ್ರ ಕಲಿಯಬಹುದಾಗಿದ್ದ ಕ್ಲಿಷ್ಟ ಸಂಗೀತವನ್ನು ಇಂದು ಆನ್‌ಲೈನ್‌ನಲ್ಲಿ ಮನೆಯಲ್ಲೇ ಕುಳಿತು ಕಲಿಯ ಬಹುದು! ಜತೆಗೆ ಇತರ ಉತ್ತಮ ಹಾಡುಗಾರರ ಜತೆಗೂ ಹಾಡಿ ಅಭ್ಯಾಸ ಮಾಡಲು ಅವಕಾಶಗಳಿವೆ.

ಪುಸ್ತಕಗಳನ್ನು ಓದಿರಿ: ಇಂದು ಲಕ್ಷಗಟ್ಟಲೆ ಪುಸ್ತಕಗಳು ಆನ್‌ಲೈನ್ ಮೂಲಕವೇ ಲಭ್ಯವಿದ್ದು, ಕೆಲವನ್ನು ಉಚಿತವಾಗಿಯೂ ಓದಬಹುದು. ನಿಮ್ಮ ಇಷ್ಟದ ಕ್ಷೇತ್ರದ ಪುಸ್ತಕಗಳನ್ನು ಓದುವ ಸದವಕಾಶ ಇಂದು ಇದೆ. ವಿಜ್ಞಾನ, ಸಾಹಿತ್ಯ, ಪ್ರಾಣಿ ಶಾಸ, ಇತಿಹಾಸ – ಈ ರೀತಿ ಪುಸ್ತಕಗಳಲ್ಲಿ ದೊರೆಯುವ ಮಾಹಿತಿಗೆ ಮಿತಿಯೇ ಇಲ್ಲ.

ಛಾಯಾಗ್ರಹಣ: ಉತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆಯಲು ತಕ್ಕಮಟ್ಟಿನ ಜ್ಞಾನ, ಕೌಶಲ ಮತ್ತು ಅನುಭವವೂ ಬೇಕಾಗುತ್ತದೆ. ಛಾಯಾಚಿತ್ರಗ್ರಹಣವು ವಸ್ತು ಮತ್ತು ಬೆಳಕಿನ ನಡುವಿನ ಹೊಂದಾಣಿಕೆಯಾಗಿದೆ. ಮನೆಯೊಳಗಡೆಯೇ ಇರುವ ಕೆಲವೊಂದು ವಸ್ತುಗಳನ್ನು ವಿಭಿನ್ನ ಕೋನಗಳಲ್ಲಿ ಮತ್ತು ವಿಭಿನ್ನ ಬೆಳಕಿನ ಪರಿಣಾಮದಲ್ಲಿ ಕ್ಲಿಕ್ಕಿಸಿ ಅವುಗಳ ಪರಿಣಾಮವನ್ನು ಪರೀಕ್ಷಿಸಿ ಅಭ್ಯಾಸ ಮಾಡಬಹುದು. ಅವುಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡು, ಮಾರ್ಗದರ್ಶನ ಪಡೆಯಲು ಇಂದು ಸಾಧ್ಯ.

ಹೊಲಿಗೆ ಮತ್ತು ಕಸೂತಿ: ಮನೆಯಲ್ಲೇ ಕುಳಿತು ಹೊಸ ಹೊಸ ಶೈಲಿಯ ಹೊಲಿಗೆ ಮತ್ತು ಬಟ್ಟೆಯ ಮೌಲ್ಯವನ್ನು ಹೆಚ್ಚಿಸುವ ಕಸೂತಿಯನ್ನು ಮನೆಯಲ್ಲೇ ಕುಳಿತು ಅಭ್ಯಾಸ ಮಾಡಿದಲ್ಲಿ ಮುಂದಕ್ಕೆ ಆದಾಯವನ್ನೂ ಗಳಿಸುವಲ್ಲಿ ಸಹಾಯಕವಾಗಬಹುದು.

ಹೊಸ ರುಚಿ: ವಿವಿಧ ಶೈಲಿಯ ಅಡುಗೆಯನ್ನು ಯುಟ್ಯೂಬ್ ಮತ್ತು ವಿವಿಧ ಚಾನೆಲ್‌ಗಳಲ್ಲಿ ನೋಡಿಕೊಂಡು ಅಭ್ಯಾಸವನ್ನು ಮಾಡಬಹುದು. ಇದರಿಂದಾಗಿ ನಮ್ಮ ಇಷ್ಟದ ಸಾಂಪ್ರದಾಯಿಕ, ಹಳ್ಳಿಯ ಶೈಲಿಯ ಮತ್ತು ಆರೋಗ್ಯವರ್ಧಕ ಅಡುಗೆಯನ್ನು ಮಾಡಿ ಅವುಗಳ ಸವಿಯನ್ನು ಸವಿಯಬಹುದು ಮತ್ತು ಇತರರಿಗೆ ಕಲಿಸಿ ಅವುಗಳನ್ನು ಯುಟ್ಯೂಬ್ ಚಾನೆಲ್ ಮತ್ತು ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು.

ವ್ಯಾಯಾಮ: ನಮ್ಮ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕಠಿಣ ಪರಿಶ್ರಮದ ಕೆಲಸವೂ ಬಹಳ ಮುಖ್ಯ. ದೈಹಿಕ ವ್ಯಾಯಾಮ, ವಿವಿಧ ರೀತಿಯ ಕಸರತ್ತುಗಳು, ಸೂರ್ಯನಮಸ್ಕಾರ ಮತ್ತು ವಿವಿಧ ವ್ಯಾಯಾಮಗಳಲ್ಲಿ ತೊಡಗಿಕೊಂಡು ದೇಹ ಮತ್ತು
ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.

error: Content is protected !!