Saturday, 27th July 2024

ಇದು ಕರುಣೆಯ ಗೋಡೆ

ರಂಗನಾಥ್ ಎನ್‌.ವಾಲ್ಮೀಖಿ

ಕರುಣೆ ಎಂದರೆ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣ. ತೊಂದರೆಯಲ್ಲಿದ್ದವರಿಗೆ ಸಹಾನುಭೂತಿ ತೋರುವ ಗುಣ. ಆದರೆ ಇಂದು ಒತ್ತಡದ ಬದುಕಿನ ನಿರ್ವಹಣೆಯಲ್ಲಿ ಕರುಣೆ ಹಲವರ ಬದುಕಿನಲ್ಲಿ ಕಣ್ಣು ಮುಚ್ಚಿಕೊಂಡು ಕುಳಿತಿದೆ. ತಾಯಿಯ ಕರುಣೆಗೆ ಬೆಲೆ ಕಟ್ಟಲಾಗದು.

ಒಮ್ಮೆ ಕೆಲಸದ ನಿಮಿತ್ತ ಪೇಡಾ ನಗರಿ ಧಾರವಾಡಕ್ಕೆ ಹೋಗಿದ್ದೆ. ಜುಬಲಿ ಸರ್ಕಲ್ ಬಳಿ ಬಸ್ಸು ನಿಂತಾಗ ಒಂದೆರಡೂ ಹೆಜ್ಜೆ ನಡೆದುಕೊಂಡು ಹೋಗುವಾಗ ಅಲ್ಲಿರುವ ಒಂದು ಗೋಡೆ ನನ್ನ ಮನ ಸೆಳೆಯಿತು. ಹಾಗಂತ ಆ ಗೋಡೆ ಚೀನಾ ಮಹಾಗೋಡೆ ತರಹ ದೊಡ್ಡ ದಲ್ಲ. ವಿವಿಧ ಬಣ್ಣಗಳಿಂದ ಅಲಂಕಾರವೂ ಆಗಿಲ್ಲ. ಅದ್ದೂರಿ ವೈಭವದಿಂದಲೂ ಕೂಡಿಲ್ಲ. ಯಾವುದೋ ಮಹಾನ್ ವ್ಯಕ್ತಿಯ ಮನೆಯ ಗೋಡೆಯು ಅಲ್ಲ. ಅದೊಂದು ಸಾಮಾನ್ಯ ಗೋಡೆ.

ಆದರೆ ಆ ಗೋಡೆ ಮೇಲಿನ ಬರಹ ಅದರ ಉಪಯೋಗ, ಸಾರ್ಥಕತೆ ಒಂದು ಕ್ಷಣ ನಮ್ಮನ್ನು ಚಕಿತಗೊಳಿಸುತ್ತದೆ. ಈ ಗೋಡೆ ಮನಸ್ಸು ಬೆಸೆಯುವ ಕೆಲಸ ಮಾಡುತ್ತದೆ. ತೊಂದರೆಯಲ್ಲಿ ಇದ್ದವರಿಗೆ ನೆರವು ನೀಡುವ ಕೆಲಸ ಮಾಡುವುದು. ನಿರ್ಗತಿಕರಿಗೆ ಮಾನ ಮರ್ಯಾದೆ ಉಳಿಸಿಕೊಳ್ಳಲು ಬಟ್ಟೆ ಇನ್ನಿತರ ವಸ್ತು ಪೂರೈಸುವ ಕೆಲಸ ಮಾಡುವುದು. ಹಾಗಾದರೆ ಈ ಗೋಡೆಯಾದರೂ ಯಾವುದು ? ಇತರ ಗೋಡೆಗಳಿಗಿಂತ ಇದು ಹೇಗೆ ಭಿನ್ನ ? ಎಂಬ ಸಹಜ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಇದು ಕರುಣೆಯ ಗೋಡೆ.

ಕರುಣೆ ತುಂಬಿದ ವ್ಯಕ್ತಿಗಳು ತಮಗೆ ಅಗತ್ಯ ಇಲ್ಲದ ವಸ್ತುಗಳನ್ನು, ಬಟ್ಟೆಗಳನ್ನು ತಂದು ಇಲ್ಲಿ ಇಡಬಹುದು. ಅದನ್ನು ಯಾರೋ
ಅಗತ್ಯ ಇರುವುದೋ ಅವರು ಪಡೆದುಕೊಂಡು ಹೋಗಬಹುದು. ಕರುಣೆಯ ಗೋಡೆಯ ಅಡಿಬರಹ ಹೀಗಿದೆ. ನಿಮಗೆ ಅಗತ್ಯ ವಿಲ್ಲದಿದ್ದರೆ ಇಲ್ಲಿ ಬಿಡಿ. ಅಗತ್ಯವಿದ್ದವರು ತೆಗೆದುಕೊಳ್ಳಿ ಎಂದಿದೆ. ಅದೆಂತ ಸಾರ್ಥಕ ಚಿಂತನೆ ಅಲ್ವಾ? ಬಹುತೇಕರು ಅದೆಷ್ಟೋ ವಸ್ತುಗಳನ್ನು ಬಳಸಿ ಹಳೆಯದಾಗಿದೆ ಎಂದು ಎಸೆಯುತ್ತಾರೆ.

ಅದೇ ಹಳೆಯ ವಸ್ತುಗಳಿಗಾಗಿ ಹಲವರು ಕಾಯುತ್ತಾ ಕುಳಿತಿರುತ್ತಾರೆ. ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ವಿಶಾಲ ಚಿಂತನೆ ಈ ಗೋಡೆಯಲ್ಲಿ ಅಡಗಿದೆ. ಹಾಗಂತ ಇಲ್ಲಿ ಯಾರೂ ನಿರ್ವಾಹಕರು ಇಲ್ಲ. ಇವರ ಅಗತ್ಯವೂ ಇಲ್ಲ. ವಸ್ತುಗಳನ್ನು ತಂದು ಇಡಲೇಬೇಕೆಂಬ ತೆಗೆದುಕೊಂಡು ಹೋ ಗಲೇಬೇಕೆಂಬ ಒತ್ತಾಯನೂ ಇಲ್ಲ. ಇಲ್ಲಿ ಎಲ್ಲವೂ ಮುಕ್ತ ಮುಕ್ತ. ಪರಸ್ಪರರ ನೋವಿಗೆ ಸ್ಪಂದಿಸಬೇಕು. ಅನಿವಾರ್ಯತೆ ಇದ್ದಾಗ ಸಹಾಯ ಸಹಕಾರ ಮಾಡಬೇಕೆನ್ನುವ ವಿಚಾರ ಈ ಗೋಡೆ ಒಳಗೊಂಡಿದೆ.

ಇಲ್ಲಿ ವಸ್ತುಗಳನ್ನು ತಂದಿಡಲು ಮುಜುಗರ ಬೇಡ. ಒಯ್ಯಲು ಮುಜುಗರ ಬೇಡ. ಯಾವುದೇ ಸ್ವಾರ್ಥ, ಅಪೇಕ್ಷೆ , ನಿರೀಕ್ಷೆ ಇಲ್ಲದ ಪರಸ್ಪರ ಸಹಾಯ ಮಾಡುವ ಕ್ರಿಯೆ ಈ ಕರುಣೆಯ ಗೋಡೆ ಮಾಡುವುದು. ಆ ವಸ್ತುಗಳನ್ನು ಪಡೆಯುವವರು ಸಾಮಾನ್ಯವಾಗಿ ಬಡಬಗ್ಗರು, ನಿರ್ಗತಿಕರು ,ಅನಾಥರು ,ಭಿಕ್ಷುಕರು, ಅಸಹಾಯಕರು ಆಗಿರುವರು. ಎಲ್ಲಾ ವ್ಯರ್ಥವಾಗುವ ವಸ್ತುಗಳು ಇಂತಹ ಅಸಹಾಯಕರಿಗೆ ತಲುಪಿ ಸಾರ್ಥಕವಾದರೆ ಒಳ್ಳೆಯದು ಅಲ್ವೇ… ಇಂತಹ ಸಾರ್ಥಕ ಕೆಲಸದ ಸೇತುವೆ ಈ ಕರುಣೆಯ ಗೋಡೆ. ಈ ಕರುಣೆಯ ಗೋಡೆಯ ಕಲ್ಪನೆಯೇ ವಿಶಿಷ್ಟ ವಿಭಿನ್ನ.

ಪಾದಚಾರಿಗಳ ಗೋಡೆಯೇ ಈ ಕರುಣೆಯ ಗೋಡೆ. ಪುಣ್ಯದ ಕೆಲಸ ಮಾಡಲು ಸಂವಹನ ಪಾತ್ರ ಈ ಗೋಡೆಯದು. ಪರಸ್ಪರರಿಗೆ ಸಹಾಯ ಸಹಕಾರ ನೀಡುವಲ್ಲಿ ಈ ಗೊಡೆಯದು ಅಳಿಲು ಸೇವೆ. ಇಂತಹ ಕರುಣೆಯ ಗೋಡೆಗಳು ಎಂದರಲ್ಲಿ ಸ್ಥಾಪನೆಯಾಗ ಬೇಕು. ಈ ಗೋಡೆ ಸಾಪಿಸಲು ಹೆಚ್ಚೆನೂ ಹಣ ಖರ್ಚಾಗದು. ಒಂದಿಷ್ಟು ಬರಹ. ಒಂದಿಷ್ಟು ವಸ್ತು ಇತರೆ ಸಾಮಗ್ರಿ ತಂದಿಡಲು ಮೊಳೆ ಬಡಿತ.

ಇಷ್ಟೇ…ಇದು ವ್ಯವಹಾರವಲ್ಲ. ಮನುಷ್ಯ ಸಂಬಂಧಗಳನ್ನು ಎಚ್ಚರಿಸುವ ದಿಕ್ಸೂಚಿ. ಆಪತ್ತಿನಲ್ಲಿ ಇರುವವರಿಗೆ ನೆರವಾಗುವ
ದಾರಿದೀಪ ಈ ಗೋಡೆ. ಉಳ್ಳವರು ಈ ಕರುಣೆಯ ಗೋಡೆಯ ಕಡೆ ಒಂದು ಸಾರಿ ಮುಖ ಹಾಕಿ. ನಿಮಗೆ ಅನುಪಯುಕ್ತ, ಅನಗತ್ಯ ಎನಿಸಿದ ವಸ್ತುಗಳನ್ನು ಇಲ್ಲಿ ತಂದಿಡಿ. ಅಗತ್ಯವಿದ್ದವರು ಬಂದು ಅದನ್ನು ಒಯ್ಯುವರು. ಸಹಾಯ ಮಾಡಿದ ತೃಪ್ತಿ ನಿಮ್ಮದಾದರೆ ಅಗತ್ಯ ಇದ್ದಾಗ ಅಗತ್ಯ ವಸ್ತು ಪಡೆದ ಆತ್ಮತೃಪ್ತಿ ಅದನ್ನು ಪಡೆದವರದು. ಕೊಡು ಕೊಳ್ಳುವಿಕೆ ಈ ಕ್ರಿಯೆಯಲ್ಲಿ ತನ್ನದು ಚೂರು ಪಾತ್ರ ಇದೆ ಎಂಬ ಅಭಿಮಾನ ಈ ಕರುಣೆಯ ಗೋಡೆಯದು. ಕರುಣಾವಂತರು ಕರುಣೆಯ ಗೋಡೆ ನೋಡಿ.

ಸಹಾಯ ಮಾಡಿ. ಕರುಣೆ ಗುಣ ಬೆಳೆಸುವ ಉಳಿಸುವ ಗೋಡೆ ಇದು. ಸಹಾಯ ಸಹಕಾರ ಗುಣ ಹೆಚ್ಚಿಸುವ ಗೋಡೆ ಈ ಕರುಣೆಯ ಗೋಡೆ.

error: Content is protected !!