ಸಿಡ್ನಿ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಸೋತಿರುವ ಆಸ್ಟ್ರೇಲಿಯಾ(IND vs AUS) ತಂಡಕ್ಕೆ ದ್ವಿತೀಯ ಪಂದ್ಯಕ್ಕೂ ಮುನ್ನ ಆಘಾತವೊಂದು ಎದುರಾಗಿದೆ. ಆಲ್ರೌಂಡರ್ ಮಿಚೆಲ್ ಮಾರ್ಷ್(Mitchell Marsh) ಗಾಯದಿಂದ ಫಿಟ್ನೆಸ್ ಹೊಂದಿಲ್ಲದ ಕಾರಣ ಅವರ ಸ್ಥಾನಕ್ಕೆ ಆಲ್ರೌಂಡರ್ ಬ್ಯೂ ವೆಬ್ಸ್ಟರ್ ಅವರನ್ನು ಬ್ಯಾಕಪ್ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ದ್ವಿತೀಯ ಪಂದ್ಯ ಡಿ.6 ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿದೆ. ಈ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಪಂದ್ಯ ಆರಂಭಕ್ಕೆ ಇನ್ನೂ ಒಂದು ವಾರಗಳ ಸಮಯ ಬಾಕಿ ಇದೆ. ಒಂದು ವೇಳೆ ಮಿಚೆಲ್ ಮಾರ್ಷ್ ಈ ಹೊತ್ತಿಗೆ ಸರಿಯಾಗಿ ಚೇತರಿಸದೇ ಹೋದರೆ ಬ್ಯೂ ವೆಬ್ಸ್ಟರ್ ಚೊಚ್ಚಲ ಟೆಸ್ಟ್ ಆಡುವ ಸಾಧ್ಯತೆ ಇದೆ.
ಆಸ್ಟ್ರೇಲಿಯ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ನಥನ್ ಮೆಕ್ಸ್ವೀನಿ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ನಥನ್ ಲಿಯಾನ್, ಜೋಶ್ ಹೇಝಲ್ವುಡ್, ಜೋಶ್ ಇಂಗ್ಲಿಸ್, ಸ್ಕಾಟ್ ಬೋಲ್ಯಾಂಡ್, ಬ್ಯೂ ವೆಬ್ಸ್ಟರ್.
ಇದನ್ನೂ ಓದಿ Urvil Patel: ಸ್ಫೋಟಕ ಶತಕ ಸಿಡಿಸಿ ಪಂತ್ ದಾಖಲೆ ಮುರಿದ ಉರ್ವಿಲ್ ಪಟೇಲ್
ಆಡುವ ಬಳಗದ ಆಯ್ಕೆ ಗೊಂದಲದಲ್ಲಿ ಭಾರತ
ಭಾರತ ತಂಡ ಇದೀಗ ದ್ವಿತೀಯ ಪಂದ್ಯವನ್ನಾಡಲು(ind vs aus 2nd test) ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೆ ಆಡುವ ಬಳಗದ ಆಯ್ಕೆಗೊಂದಲ ಉಂಟು ಮಾಡಿದೆ. ಇದಕ್ಕೆ ಕಾರಣ ಖಾಯಂ ನಾಯಕ ರೋಹಿತ್ ಶರ್ಮ ಮತ್ತೆ ತಂಡ ಸೇರಿರುವುದು.
ಈಗಾಗಲೇ ರೋಹಿತ್ ಶರ್ಮ ಅಭ್ಯಾಸ ಆರಂಭಿಸಿದ್ದಾರೆ. ಡಿಸೆಂಬರ್ 6ರಂದು ಅಡಿಲೇಡ್ನಲ್ಲಿ ಅಹರ್ನಿಶಿ ಪಿಂಕ್ಬಾಲ್ ಟೆಸ್ಟ್ ನಡೆಯಲಿದೆ. ರೋಹಿತ್ ಆರಂಭಿಕರಾಗಿ ಕಣಕ್ಕಿಯುತ್ತಾರೆಯೇ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡುವರೇ ಎಂಬುದು ಸದ್ಯ ತೀವ್ರ ಕುತೂಹಲ ಕೆರಳಿಸಿದೆ. ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಬದಲಿಗೆ ರೋಹಿತ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಾತ್ರಿ ಎನಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿನಾಗಿ ಕಣಕ್ಕಿಳಿದ ಕೆ.ಎಲ್ ರಾಹುಲ್ ಇದೇ ಕ್ರಮಾಂಕದಲ್ಲಿ ಮುಂದುವರಿಯಲಿದ್ದಾರಾ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರಾ ಎಂಬ ಬಗ್ಗೆ ಕುತೂಹಲವಿದೆ.
ಎಡಗೈ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಶುಭಮಾನ್ ಗಿಲ್ ದ್ವಿತೀಯ ಪಂದ್ಯ ಆಡುವ ಬಗ್ಗೆ ಬಿಸಿಸಿಐ ಕಡೆಯಿಂದ ಯಾವುದೇ ಅಪ್ಡೆಟ್ ಇಲ್ಲ. ಮೂಲಗಳ ಪ್ರಕಾರ ಗಿಲ್ ದ್ವಿತೀಯ ಪಂದ್ಯ ಆಡುವುದು ಕೂಡ ಅನುಮಾನ ಎನ್ನಲಾಗಿದೆ. ಗಿಲ್ ಆಡದಿದ್ದರೆ. ಮೂರನೇ ಕ್ರಮಾಂಕದಲ್ಲಿ ರಾಹುಲ್ ಅಥವಾ ರೋಹಿತ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಪರ್ತ್ ಟೆಸ್ಟ್ನಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದ ರಾಹುಲ್, ಎರಡೂ ಇನಿಂಗ್ಸ್ಗಳಲ್ಲಿ ಕ್ರಮವಾಗಿ 26 ಮತ್ತು 77 ಸ್ಕೋರ್ನೊಂದಿಗೆ ಇತರ ಬ್ಯಾಟರ್ಗಳಿಗಿಂತ ಹೆಚ್ಚು ಸ್ಥಿರ ನಿರ್ವಹಣೆ ತೋರಿದ್ದರು.