ಚೆನ್ನೈ: ಪ್ರವಾಸಿ ಬಾಂಗ್ಲಾದೇಶ(IND vs BNG) ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಕ್ರಿಕೆಟಿಗರು ಚೆನ್ನೈಯಲ್ಲಿ ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಶುಕ್ರವಾರ ಲಘು ಅಭ್ಯಾಸ ನಡೆಸಿದ್ದ ಭಾರತೀಯ(Team India) ಆಟಗಾರರು ಇಂದು(ಶನಿವಾರ) ನೂತನ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಸಹಾಯಕ ಕೋಚ್ ಅಭಿಷೇಕ್ ನಾಯರ್ ಮಾರ್ಗದರ್ಶನದಲ್ಲಿ ನೆಟ್ಸ್‌ನಲ್ಲಿ ಬೆವರಿಳಿಸಿದರು. ಅಭ್ಯಾಸದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿಸಿಐ ಬಿಡುಗಡೆ ಮಾಡಿದೆ.
ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಸೇರಿದಂತೆ, ಬಹುತೇಕ ಎಲ್ಲ ಆಟಗಾರರು ಬ್ಯಾಟಿಂಗ್ ಅಭ್ಯಾಸ ನಡೆಸಿದರೆ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆರ್.ಅಶ್ವಿನ್, ಕುಲ್‌ದೀಪ್ ಪೂರ್ತಿ ಫಿಟ್‌ನೆಸ್‌ನೊಂದಿಗೆ ಬೌಲಿಂಗ್ ನಡೆಸಿ ಗಮನ ಸೆಳೆದರು. ಆಟಗಾರರು 6 ದಿನಗಳ ಕಾಲ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಆಟಗಾರರ ಅಭ್ಯಾಸವನ್ನು ಪ್ರಧಾನ ಕೋಚ್ ಗೌತಮ್ ಗಂಭೀರ್ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಜತೆಗೆ ಕೆಲ ಸಲಹೆಯನ್ನು ಕೂಡ ನೀಡುತ್ತಿದ್ದರು. ಗಂಭೀರ್ ಕೋಚಿಂಗ್‌ನಲ್ಲಿ ಆಡುತ್ತಿರುವ ಮೊದಲ ತವರು ಸರಣಿ ಇದಾಗಿದೆ. ಕಳೆದ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಸೋಲು ಕಂಡು ಅವಮಾನ ಎದುರಿಸಿತ್ತು. ಹೀಗಾಗಿ ಗಂಭೀರ್ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅದರಲ್ಲೂ ಬಾಂಗ್ಲಾ ತಂಡ ಪಾಕ್ ತಂಡವನ್ನು ಅವರದ್ದೇ ನೆಲದಲ್ಲಿ ಕ್ಲೀನ್ ಸ್ವೀಪ್ ಮಾಡಿ ಬಂದಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.
ಇದನ್ನೂ ಓದಿ Viral News: ತಂದೆ ಹುಲಿ ಬೇಟೆಯಾಡಿ ರಕ್ತ ಮುಖಕ್ಕೆ ಹಚ್ಚಿದ್ದರು ಎಂದ ಟೀಮ್ ಇಂಡಿಯಾದ ಮಾಜಿ ವೇಗಿ
ವಿಶ್ವ ದಾಖಲೆ ಸನಿಹ ಕೊಹ್ಲಿ
ಬಾಂಗ್ಲಾ ವಿರುದ್ಧ ಕೊಹ್ಲಿ 58ರನ್ ಬಾರಿಸಿದರೆ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ದಾಖಲೆಯನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಜತೆಗೆ 147 ವರ್ಷಗಳ(147 Years) ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ಕೊಹ್ಲಿ 58 ರನ್ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಪೂರೈಸಲಿದ್ದಾರೆ. ಈ ಮೂಲಕ ಅತಿ ವೇಗವಾಗಿ ಈ ಸಾಧನೆಗೈದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಈ ದಾಖಲೆ ಸಚಿನ್ ಹೆಸರಿನಲ್ಲಿದೆ. ಸದ್ಯ ವಿರಾಟ್ 591 ಇನ್ನಿಂಗ್ಸ್‌ಗಳಲ್ಲಿ 26,942 ರನ್ ಗಳಿಸಿದ್ದಾರೆ. ಕೊಹ್ಲಿ ಬಾಂಗ್ಲಾ ವಿರುದ್ಧ 58 ರನ್ ಗಳಿಸಿದರೆ 147 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27,000 ರನ್‌ಗಳನ್ನು ತಲುಪಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ, ಸಚಿನ್ ಹೊರತುಪಡಿಸಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.