ಚೆನ್ನೈ: ರಾಯಲ್ ಚಾಲೆಂಜರ್ ಬೆಂಗಳೂರು ಹ್ಯಾಟ್ರಿಕ್ ಸಂಭ್ರಮವನ್ನಾಚರಿಸಿದೆ. ಭಾನುವಾರದ ರನ್ ಪ್ರವಾಹದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು 38 ರನ್ನುಗಳ ಕೊರತೆಯಿಂದ ಕೊಚ್ಚಿ ಹೋಗುವಂತೆ ಮಾಡಿತು.
ಸಾಮಾನ್ಯವಾಗಿ ಬೌಲರ್‌ಗಳಿಗೆ ನೆರವಾಗುತ್ತಿದ್ದ ಚೆನ್ನೈ ಟ್ರ್ಯಾಕ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಿತು. ಟಾಸ್ ಗೆದ್ದ ಕೊಹ್ಲಿ ಮೊದಲೇ ನಿರ್ಧರಿಸಿದಂತೆ ಬ್ಯಾಟಿಂಗ್ ಆಯ್ದುಕೊಂಡರು. ಆರ್‌ಸಿಬಿ 4ಕ್ಕೆ 204 ರನ್ ಪೇರಿಸಿ ಸವಾಲೊಡ್ಡಿತು. ಕೆಕೆಆರ್ 8 ವಿಕೆಟಿಗೆ 166 ರನ್ ಗಳಿಸಿ ಸತತ ಎರಡನೇ ಸೋಲನುಭವಿಸಿತು.
ಕೆಕೆಆರ್ ಪ್ರತಿರೋಧ ಹೇಳಿಕೊಳ್ಳುವಂತಿರಲಿಲ್ಲ. ಯಾರಿಂದಲೂ ಕ್ರೀಸ್ ಆಕ್ರಮಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಕನಿಷ್ಠ ಅರ್ಧ ಶತಕೂ ಹೊರಹೊಮ್ಮಲಿಲ್ಲ. ಅಗ್ರ ಕ್ರಮಾಂಕದಲ್ಲಿ ರಾಣಾ, ಗಿಲ್, ತ್ರಿಪಾಠಿ, ಮಾರ್ಗನ್ ಅವರಿಂದ ದೊಡ್ಡ ಜತೆಯಾಟ ದಾಖಲಾಗಲೇ ಇಲ್ಲ. ಪರಿಣಾಮ ಕೆಳಕ್ರಮಾಂಕದ ಸ್ಫೋಟಕ ಆಟಗಾರ ರಸೆಲ್ ಅವರ ಮೇಲೆ ಭಾರ ಬಿದ್ದಂತಿತ್ತು.
ಎರಡು ವರ್ಷಗಳ ಹಿಂದೆ ಇದೇ ಆರ್‌ಸಿಬಿಯನ್ನು ವಿಸ್ಫೋಟಕ ಬ್ಯಾಟಿಂಗ್ ಮೂಲಕ ಬೆಚ್ಚಿಬೀಳಿಸಿದ ಆಯಂಡ್ರೆ ರಸೆಲ್ ಕ್ರೀಸ್‌ನಲ್ಲಿದ್ದಷ್ಟೂ ಹೊತ್ತು ಕೆಕೆಆರ್ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಈ ಬಾರಿ ಕೆರಿಬಿಯನ್ ಕ್ರಿಕೆಟಿಗನ ಮ್ಯಾಜಿಕ್ ನಡೆಯಲಿಲ್ಲ. ವೇಗಿ ಜಾಮೀಸನ್ ದುಬಾರಿಯಾದರೂ ಪಟೇಲ್, ಸಿರಾಜ್, ಸುಂದರ್ ಉತ್ತಮ ನಿಯಂತ್ರಣ ಸಾಧಿಸಿ ತಂಡಕ್ಕೆ ಮೇಲುಗೈ ಒದಗಿಸಿದರು.
ಅಂತಿಮವಾಗಿ ಎಬಿಡಿ ವಿಲಿಯರ‍್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.