ಜೊಹೊರ್ ಬಹ್ರು (ಮಲೇಶ್ಯ): ಶನಿವಾರ ರಾತ್ರಿ ಇಲ್ಲಿ ನಡೆದ ʼಸುಲ್ತಾನ್ ಆಫ್ ಜೊಹೊರ್ ಕಪ್ʼ ಜೂನಿಯರ್ ಪುರುಷರ ಹಾಕಿ(Sultan Of Johor Hockey Cup) ಪಂದ್ಯಾವಳಿಯಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್(India holds NZ) ವಿರುದ್ಧ ಶೂಟೌಟ್ನಲ್ಲಿ 3-2 ಗೋಲುಗಳಿಂದ ಗೆದ್ದು ಕಂಚಿನ ಪದಕ ಜಯಿಸಿದೆ. ಕ್ರಿಕೆಟ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೋಲು ಕಂಡು ನಿರಾಸೆಯಲ್ಲಿದ್ದ ಭಾರತೀಯರಿಗೆ ಹಾಕಿ ಆಟಗಾರರು ದಿನಾಂತ್ಯದಲ್ಲಿ ಕಂಚು ಗೆದ್ದು ಸಿಹಿ ಸುದ್ದಿ ನೀಡಿದರು.
ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳ ಬಲಿಷ್ಠ ಕ್ಷೇತ್ರ ರಕ್ಷಣೆಯಿಂದ ನಿಗದಿತ ಅವಧಿಯಲ್ಲಿ 2-2ರ ಸಮಬಲ ಕಂಡಿತು. ಫಲಿತಾಂಶಕ್ಕಾಗಿ ಶೂಟೌಟ್ ಮೊರೆಹೋಗಲಾಯಿತು. ಗುರ್ಜೋತ್ ಸಿಂಗ್, ಮನ್ಮೀತ್ ಸಿಂಗ್ ಮತ್ತು ಸೌರಭ್ ಆನಂದ್ ಕುಶ್ವಾಹ ಶೂಟೌಟ್ನಲ್ಲಿ ಯಶಸ್ವಿಯಾಗಿ ಗೋಲು ಬಾರಿಸಿದರೆ, ಗೋಲ್ ಕೀಪರ್ ಬಿಕ್ರಮ್ ಜಿತ್ ಸಿಂಗ್ ಮೂರು ಗೋಲುಗಳನ್ನು ತಡೆಯುವ ಮೂಲಕ ಅಮೋಘ ಪ್ರದರ್ಶನವನ್ನು ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ Rohit Sharma: ಸೋಲಿನೊಂದಿಗೆ ಅನಪೇಕ್ಷಿತ ದಾಖಲೆ ಬರೆದ ರೋಹಿತ್
ನಿಗದಿತ ಅವಧಿಯ ಆಟದ ವೇಳೆ, ಭಾರತದ ಪರವಾಗಿ ದಿಲ್ರಾಜ್ ಸಿಂಗ್ 11ನೇ ನಿಮಿಷದಲ್ಲಿ ಮತ್ತು ಮನ್ಮೀತ್ ಸಿಂಗ್ 20 ನೇ ನಿಮಿಷದಲ್ಲಿ ಗೋಲು ಬಾರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, ಪಂದ್ಯದದ ಅಂತಿಮ ಕ್ವಾರ್ಟರ್ ನಲ್ಲಿ ನ್ಯೂಝಿಲ್ಯಾಂಡ್ ಆಟಗಾರರು ಪ್ರತಿಹೋರಾಟ ನೀಡಿದರು. ಓವನ್ ಬ್ರೌನ್ 51ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಜಾಂಟಿ ಎಲ್ಮ್ಸ್ 57ನೇ ನಿಮಿಷದಲ್ಲಿ ಗೋಲು ದಾಖಲಿಸಿ ಪಂದ್ಯವನ್ನು ಸಮಬಲಗೊಳಿಸಿದರು.
ಮಾಜಿ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಅವರ ಚೊಚ್ಚಲ ಕೋಚಿಂಗ್ನಲ್ಲಿ ಜೂನಿಯರ್ ತಂಡ ಕಣಕ್ಕಿಳಿದಿತ್ತು. ಅವರ ಮಾರ್ಗದರ್ಶನದ ಮೊದಲ ಪ್ರಯತ್ನದಲ್ಲೇ ತಂಡ ಪದಕ ಗೆದ್ದಿರುವ ಬಗ್ಗೆ ಹಾಕಿ ಇಂಡಿಯಾ ಸಂತಸ ವ್ಯಕ್ತಪಡಿಸಿದೆ. ಚಾಂಪಿಯನ್ ಆಟಗಾರ ಯಾವಾಗಲೂ ತಂಡವನ್ನು ಚಾಂಪಿಯನ್ ಹಾದಿಯಲ್ಲೇ ಕೊಂಡೊಯ್ಯುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದೆ.