Virat Kohli: ಪಾಕ್‌ನ ಬಾಬರ್ ಅಜಂ ದಾಖಲೆ ಮುರಿದ ವಿರಾಟ್ ಕೊಹ್ಲಿ
IPL 2025: ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಒಟ್ಟಾರೆ ಈ ಆವೃತ್ತಿಯಲ್ಲಿ 392* ರನ್ ಬಾರಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 417 ರನ್ ಬಾರಿಸಿದ ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್ ಮೊದಲ ಸ್ಥಾನದಲ್ಲಿದ್ದಾರೆ.


ಬೆಂಗಳೂರು: ರಾಜಸ್ಥಾನ್ ರಾಯಲ್ಸ್(RCB vs RR) ವಿರುದ್ಧದ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಈ ಅರ್ಧಶತಕ ಮೂಲಕ ಪಾಕಿಸ್ತಾನದ ಬಾಬರ್ ಅಜಂ(Babar Azam) ದಾಖಲೆಯೊಂದನ್ನು ಮುರಿದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ಬಾರಿ ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಬಾಬರ್ ಅಜಂ ಹಿಂದಿಕ್ಕಿ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಬಾಬರ್ 61 ಬಾರಿ ಈ ಸಾಧನೆ ಮಾಡಿದ್ದು, ಕೊಹ್ಲಿ 62 ಅರ್ಧಶತಕ ಬಾರಿಸಿದ್ದಾರೆ. ಉಳಿದಂತೆ ಕ್ರಿಸ್ ಗೇಲ್ 57, ಡೇವಿಡ್ ವಾರ್ನರ್ 55, ಜೋಸ್ ಬಟ್ಲರ್ 52, ಫಾಫ್ ಡು ಪ್ಲೆಸಿ 52 ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ್ದಾರೆ.
ಪಂದ್ಯದಲ್ಲಿ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್‌ನೊಂದಿಗೆ ಕೊಹ್ಲಿ 70 ರನ್ ಬಾರಿಸಿದರು. ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ20 ಕ್ರಿಕೆಟ್‌ನಲ್ಲಿ 3500 ರನ್‌ಗಳನ್ನು ಕಲೆಹಾಕಿದ ವಿಶೇಷ ಸಾಧನೆ ಮಾಡಿದರು. 3ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಅವರು ಈ ಮೈಲುಗಲ್ಲು ತಲುಪಿದರು. ಇದರೊಂದಿಗೆ ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ 3500 ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಒಟ್ಟಾರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ 3556* ರನ್ ಬಾರಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಕ್ರೀಡಾಂಗಣದಲ್ಲಿ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಬಾಂಗ್ಲಾದೇಶದ ಮುಷ್ಫಿಕರ್ ರಹೀಂ 2ನೇ ಸ್ಥಾನದಲ್ಲಿದ್ದಾರೆ. ಅವರು ಢಾಕಾ ಕ್ರೀಡಾಂಗಣದಲ್ಲಿ 3373 ರನ್ ಗಳಿಸಿದ್ದಾರೆ.
ಇದನ್ನೂ ಓದಿ IPL 2025: ಆರ್‌ಸಿಬಿ ವಿರುದ್ಧ ದಾಖಲೆ ಬರೆದ ಜೈಸ್ವಾಲ್; ಈ ಸಾಧನೆ ಮಾಡಿದ ಮೊದಲಿಗ
ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಆರಂಭಿಕ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ 59 ರನ್ ಗಳಿಸಿದ್ದ ಕೊಹ್ಲಿ, ಮುಂಬೈ ವಿರುದ್ಧ ವಾಂಖೆಡೆಯಲ್ಲಿ 67 ರನ್ ಬಾರಿಸಿದ್ದರು. ಬಳಿಕ ರಾಜಸ್ಥಾನ ವಿರುದ್ಧ ಜೈಪುರಲ್ಲಿ ಔಟಾಗದೆ 62, ಪಂಜಾಬ್ ವಿರುದ್ಧ ಚಂಡೀಗಢದಲ್ಲಿ ಔಟಾಗದೆ 73 ರನ್ ಗಳಿಸಿದ್ದರು. ಒಟ್ಟಾರೆ ಈ ಆವೃತ್ತಿಯಲ್ಲಿ 392* ರನ್ ಬಾರಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.