Friday, 13th December 2024

ತವರಿಗೆ ಮರಳಿದ ವಿಲ್ ಜ್ಯಾಕ್ಸ್, ರೀಸ್ ಟಾಪ್ಲಿ

ವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ವಿಲ್ ಜ್ಯಾಕ್ಸ್ ಮತ್ತು ರೀಸ್ ಟಾಪ್ಲಿ ಅವರು ಇಂಗ್ಲೆಂಡ್‌ಗೆ ಮರಳಿದ್ದಾರೆ.

ಮೇ 22ರಿಂದ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿರುವ ತಮ್ಮ ತವರು ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ವಿಲ್ ಜ್ಯಾಕ್ಸ್‌ ಈ ಬಾರಿಯ ಟೂರ್ನಿಯಲ್ಲಿ ಎಂಟು ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಒಂದು ಶತಕ ಸೇರಿದಂತೆ 230 ರನ್ ಗಳಿಸಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್, ಗಾಯಗೊಂಡಿರುವ ಪಂಜಾಬ್ ಕಿಂಗ್ಸ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಇಂಗ್ಲೆಂಡ್‌ಗೆ ಮರಳಿದ್ದಾರೆ. ಪಂಜಾಬ್ ತಂಡವು ಈಗಾಗಲೇ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿದೆ.

ಐಪಿಎಲ್‌ನಲ್ಲಿ ಆಡುತ್ತಿರುವ ಇಂಗ್ಲೆಂಡ್ ತಂಡದ ಮೋಯಿನ್ ಅಲಿ (ಚೆನ್ನೈ ಸೂಪರ್ ಕಿಂಗ್ಸ್), ಸ್ಯಾಮ್‌ ಕರನ್, ಜಾನಿ ಬೆಸ್ಟೊ (ಪಂಜಾಬ್ ಕಿಂಗ್ಸ್) ಮತ್ತು ಫಿಲ್ ಸಾಲ್ಟ್ (ಕೋಲ್ಕತ್ತ ನೈಟ್ ರೈಡರ್ಸ್) ಅವರು ಕೂಡ ಶೀಘ್ರದಲ್ಲಿಯೇ ತಮ್ಮ ತವರಿಗೆ ಮರಳುವ ಸಾಧ್ಯತೆ ಇದೆ.