ದುಬೈ: ಮುಂದಿನ ವರ್ಷ ನಡೆಯಲಿರುವ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC 2025) ಪಂದ್ಯದ ದಿನಾಂಕವನ್ನು ಐಸಿಸಿ(ICC) ಮಂಗಳವಾರ ಪ್ರಕಟಿಸಿದೆ. ಫೈನಲ್ ಪಂದ್ಯ ಜೂನ್ 11 ರಿಂದ 15 ರವರೆಗೆ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಜೂನ್ 16 ಮೀಸಲು ದಿನವಾಗಿದೆ. ಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಅಥವಾ ಇನ್ನಿತರ ಕಾರಣಗಳಿಂದ ದಿನದಾಟದ ನಷ್ಟವಾದರೆ, ಆಗ ಈ ವ್ಯರ್ಥವಾದ ಆಟವನ್ನು ಮೀಸಲು ದಿನದ ಮೂಲಕ ಪೂರ್ಣಗೊಳಿಸಲಾಗುತ್ತದೆ.
“ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ದಿನಾಂಕವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಇದು ಟೆಸ್ಟ್ ಕ್ರಿಕೆಟ್‌ನ ನಿರಂತರ ಆಕರ್ಷಣೆಗೆ ಸಾಕ್ಷಿಯಾಗಲಿದೆ” ಎಂದು ಐಸಿಸಿ ಸಿಇಒ ಜೆಫ್ ಅಲ್ಲಾರ್ಡೈಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
https://x.com/ICC/status/1830893697342341297
ಕಳೆದ ಬಾರಿಯ ಫೈನಲ್‌ಲಿಸ್ಟ್‌ಗಳಾದ ಭಾರತ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳೇ ಮತ್ತೊಮ್ಮೆ ಫೈನಲ್ ಮುಖಾಮುಖಿಯಾಗುವ ಸಾಧ್ಯತೆ ಇದೆ. ಸದ್ಯ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಭಾರತ ಸತತವಾಗಿ 2 ಬಾರಿ ಫೈನಲ್ ಪ್ರವೇಶಿಸಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಮೊದಲ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್, ಬಳಿಕ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.
ಇದನ್ನೂ ಓದಿ US Open: ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಬೋಪಣ್ಣ ಜೋಡಿ
https://x.com/CricCrazyJohns/status/1830897594962157760
10 ಪಂದ್ಯ ಆಡಲಿದೆ ಭಾರತ
ಪೂರ್ವ ವೇಳಾಪಟ್ಟಿಯ ಪ್ರಕಾರ ಭಾರತ ಇನ್ನು 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರಲ್ಲಿ ತವರಿನಲ್ಲಿ ಬಾಂಗ್ಲಾ ವಿರುದ್ಧ 2, ನ್ಯೂಜಿಲ್ಯಾಂಡ್ ವಿರುದ್ಧ 3, ಆಸ್ಟ್ರೇಲಿಯಾ ಪ್ರವಾಸದಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಈ 10 ಟೆಸ್ಟ್ ಪಂದ್ಯಗಳ ಪೈಕಿ ಭಾರತ ಕನಿಷ್ಠ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಈವರೆಗೆ ಭಾರತ ಆಡಿದ 9 ಪಂದ್ಯಗಲ್ಲಿ 6 ಜಯ, 2 ಸೋಲು, 1 ಡ್ರಾ ಸಾಧಿಸಿ 68.51 ಗೆಲುವಿನ ಸರಾಸರಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಜಯ ದಾಖಲಿಸಿ, 62.5 ಗೆಲುವಿನ ಸರಾಸರಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಉಳಿದ ಏಳು ಪಂದ್ಯಗಳಲ್ಲಿ 4 ಪಂದ್ಯ ಗೆದ್ದರೂ ಫೈನಲ್ ಪ್ರವೇಶಿಸಲಿದೆ. ಮೂರನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 36 ಅಂಕ ಗಳಿಸಿದೆ. ಪಾಕಿಸ್ತಾನವನ್ನು ಅವರದ್ದೇ ತವರಿನಲ್ಲಿ ಮಣಿಸಿ ಟೆಸ್ಟ್ ಸರಣಿ ಗೆದ್ದುವ ಬಾಂಗ್ಲಾದೇಶ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.