Saturday, 7th September 2024

ಸೂಪರ್ ಓವರ್‌ನಲ್ಲಿ ಗೆದ್ದ ಜಿಂಬಾಬ್ವೆ: ಕ್ಲೀನ್ ಸ್ವೀಪ್’ನಿಂದ ಪಾಕ್ ವಂಚಿತ

ರಾವಲ್ಪಿಂಡಿ: ಸೂಪರ್ ಓವರ್‌ನಲ್ಲಿ ಮುಜರಾಬನಿ ತೋರಿದ ಕೈಚಳಕಿದಿಂದ ಜಿಂಬಾಬ್ವೆ ತಂಡ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವನ್ನು ಸೋಲಿಸಿತು.

ನಿಗದಿತ ಓವರ್‌ಗಳ ಅಂತ್ಯಕ್ಕೆ ಉಭಯ ತಂಡಗಳ ಟೈ ಸಾಧಿಸಿದ ಪರಿಣಾಮ ಫಲಿತಾಂಶ ನಿರ್ಣಾಯಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ಮುಜರಾಬನಿ ಪಾಕಿಸ್ತಾನದ 2 ವಿಕೆಟ್ ಕಬಳಿಸಿದರು. ಕೇವಲ 3 ರನ್ ಗುರಿ ಪಡೆದ ಜಿಂಬಾಬ್ವೆ ವಿಕೆಟ್ ನಷ್ಟವಿಲ್ಲದೆ ಜಯದ ನಗೆ ಬೀರಿತು. 3 ಪಂದ್ಯಗಳ ಸರಣಿಯನ್ನು ಈಗಾಗಲೇ ಜಯಿಸಿದ್ದ ಪಾಕಿಸ್ತಾನ, ಕ್ಲೀನ್ ಸ್ವೀಪ್ ಮಾಡುವ ಅವಕಾಶದಿಂದ ವಂಚಿತವಾಯಿತು. 2015ರ ಬಳಿಕ ಪಾಕಿಸ್ತಾನದ ಎದುರು ಜಿಂಬಾಬ್ವೆ ತಂಡಕ್ಕೆ ಮೊದಲ ಗೆಲುವು ಇದಾಗಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಸೀನ್ ವಿಲಿಯಮ್ಸ್ (118ರನ್, 135 ಎಸೆತ, 13 ಬೌಂಡರಿ, 1ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 278 ರನ್ ಪೇರಿಸಿತು. ಪ್ರತಿಯಾಗಿ ನಾಯಕ ಬಾಬರ್ ಅಜಮ್ (125ರನ್, 125 ಎಸೆತ, 13 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 9 ವಿಕೆಟ್‌ಗೆ 278 ರನ್ ಕಲೆ ಹಾಕಿತು. ಮುಜರಾಬನಿ 5 ವಿಕೆಟ್ ಕಬಳಿಸಿ ಪಾಕಿಸ್ತಾನಕ್ಕೆ ಕಡಿವಾಣ ಹಾಕಿದ್ದರು.

ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಶನಿವಾರದಿಂದ ಆರಂಭವಾಗಲಿದೆ. ಮುಜರಬಾನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಪಾಕಿಸ್ತಾನ ಆಟಗಾರ ಬಾಬರ್‌ ಅಜಂ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Leave a Reply

Your email address will not be published. Required fields are marked *

error: Content is protected !!