Saturday, 27th July 2024

ಮಕ್ಕಳಿಗೆ ನೈತಿಕತೆಯ ಪಾಠ ನೀಡುವುದು ಅವಶ್ಯಕ: ಅಲ್ಲಾಭಕ್ಷ ಬಿಜಾಪುರ 

ಕೊಲ್ಹಾರ: ಪಾಶ್ಚಿಮಾತ್ಯ ಶಿಕ್ಷಣದ ಜೊತೆಜೊತೆಗೆ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವುದು ಅವಶ್ಯಕವಾಗಿದೆ ಎಂದು ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಹೇಳಿದರು.

ಪಟ್ಟಣದ ಅಂಜುಮನ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಯುನೀಕ್ ಉರ್ದು ಶಾಲೆಗಳ‌ ವಾರ್ಷಿಕೋ ತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗತ್ತು ಕ್ರಾಂತಿಕಾರಿ ಆವಿಷ್ಕಾರಗಳನ್ನು ಮಾಡಿ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಪುಸ್ತಕದ ಬೋಧನೆಯ ಜೊತೆಗೆ ನೈತಿಕತೆ ಪಾಠ ನೀಡಲು ಮರೆಯಬಾರದು ಎಂದರು. ಪಾಶ್ಚಾತ್ಯ ಶಿಕ್ಷಣ ನೀಡಿ ಮಗನನ್ನು ಉನ್ನತ ಹುದ್ದೆ ಗೆರಿಸಿದ ಬಡ ತಂದೆಯ ಕಥೆಯನ್ನು ಹೇಳುವ ಮೂಲಕ ಪುಸ್ತಕದ ಜೊತೆಗೆ ಜೀವನ ಮೌಲ್ಯಗಳು ಅತ್ಯವಶ್ಯ ಎನ್ನುವುದನ್ನು ಮಾರ್ಮಿಕವಾಗಿ ಹೇಳಿದರು.

ಶೀಲವಂತ ಹಿರೇಮಠದ ಧರ್ಮರತ್ನಾಕರ ಡಾ.ಕೈಲಾಸನಾಥ ಶ್ರೀಗಳು ಆಶೀರ್ವಚನ ನೀಡುತ್ತಾ ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣದ ತತ್ವ ಅಳವಡಿ ಕೊಳ್ಳದೆ ಶಿಸ್ತು, ಕರ್ತವ್ಯಧಕ್ಷತೆ ಹಾಗೂ ಆದರ್ಶಮುಖಿ ತತ್ವಗಳನ್ನು ಅಳವಡಿಸಿಕೊಂಡು  ಉತ್ತರೋತ್ತರವಾಗಿ ಬೆಳೆಯಬೇಕು ಎಂದರು. ಕೊಲ್ಹಾರ ಪಟ್ಟಣದಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆದು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಅಲ್ಲಾಭಕ್ಷ ಬಿಜಾಪುರ ಅವರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

ದಿಗಂಬರೇಶ್ವ ಮಠದ ಯೋಗಿ ಕಲ್ಲಿನಾಥ ದೇವರು ಆಶಿರ್ವಚನ ನೀಡುತ್ತಾ ಶಿಕ್ಷಣವು ಕತ್ತಲಿನಿಂದ ಬೆಳಕಿನೆಡೆಗೆ ಕರೆದೋಯ್ಯುತ್ತದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಅಪಾರವಾಗಿದೆ. ಮಗುವಿನ ಸಂಪೂರ್ಣ ವಿಕಸನದ ಹಂತದಲ್ಲಿ ಗುರು, ಹಿರಿಯರ, ಮಾತಾ ಪಿತೃಗಳ ಬಗ್ಗೆ ಗೌರವಯುತ ಭಾವನೆ ಮೂಡುವಲ್ಲಿ ಶಿಕ್ಷಣದ ಪಾತ್ರ ಹಿರಿದಾಗಿದೆ ಎಂದರು.

ಶಿಕ್ಷಕ ಶಂಕರ ಯಂಕಂಚಿ ಮಾತನಾಡುತ್ತಾ ಮಕ್ಕಳಿಗೆ ನಾವುಗಳು ಮಾದರಿಯಾಗಿ ಬದುಕಬೇಕು, ಸದಾಕಾಲ ನಮ್ಮನ್ನು ಅನುಕರಣೆ ಮಾಡುವುದು ಮಕ್ಕಳ ಗುಣಲಕ್ಷಣವಾಗಿರುವ ಕಾರಣ ನಮ್ಮ ಬದುಕು ಮಕ್ಕಳಿಗೆ ಅನುಕರಣಿಯವಾಗಿರಬೇಕು. ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿಗೆ ಚೂಡಾಮಣಿಯಾಗು, ಜಗಕ್ಕೆ ಜ್ಯೋತಿಯೇ ಆಗು ಎನ್ನುವ ನುಡಿಯಂತೆ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯ ಮೇಲೆ ಅಲ್ ಹಾಜ್ ಹಸನಸಾಬ ಚೌಧರಿ, ಪಿ.ಕೆ ಗಿರಗಾಂವಿ, ದಾದಾ ಗೂಗಿಹಾಳ, ಇಸ್ಮಾಯಿಲ್ ಸಾಬ್ ತಹಶೀಲ್ದಾರ್, ದಸ್ತಗೀರ ಕಾಖಂಡಕಿ, ದಾದಾಪೀರ ಬೀಳಗಿ, ಬಾಬುಸಾಬ ಮುಲ್ಲಾ,  ಬಾಷಾಸಾಬ ಚೌಧರಿ, ಪ ಪಂ ಸದಸ್ಯರಾದ ತೌಸೀಫ್ ಗಿರಗಾಂವಿ, ದಸ್ತಗೀರ ಕಲಾದಗಿ, ಶ್ರೀಶೈಲ ಗೌಡರ, ಹಾಜಿಮಲಂಗ ಜಮಾದಾರ, ನಾಶೀರ ದಿಂದಾರ, ಇಕ್ಬಾಲ್ ನದಾಫ, ಅನ್ವರ ಕಂಕರಪೀರ, ದಶರಥ ಈಟಿ ಸಹಿತ ಅನೇಕರು ಉಪಸ್ಥಿತರಿದ್ದರು. ವಸೀಂ ಗಿರಗಾಂವಿ ಸ್ವಾಗತಿಸಿದರು. ರಫತ್ಉನ್ನಿಸಾ ಪಠಾಣ ಹಾಗೂ ಅರ್ಷೀಯಾ ಎಲ್ಲೂರ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!