Saturday, 14th December 2024

ದೇಶದ ಹಿತ ಕಾಪಾಡುವಲ್ಲಿ ಬಿಜೆಪಿ ಸಂಪೂರ್ಣ ವಿಫಲ: ಸಚಿವ ಶಿವಾನಂದ ಪಾಟೀಲ್

*ಪ್ರಚಾರ ಸಭೆಯಲ್ಲಿ ಯತ್ನಾಳ ಕುಟುಕಿದೆ ಶಿವಾನಂದ ಪಾಟೀಲ್

ಕೊಲ್ಹಾರ: ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು ದೇಶದ ಅಭಿವೃದ್ಧಿಯ ಬಗ್ಗೆ, ದೇಶದ ಹಿತಾಸಕ್ತಿಯ ಬಗ್ಗೆ ಚಿಂತನೆ ನಡೆಸಬೇಕಾದ ಬಿಜೆಪಿ ದೇಶದಲ್ಲಿ ಜಾತಿ ಜಾತಿಗಳ ಮದ್ಯ, ಧರ್ಮ ಧರ್ಮಗಳ ಮದ್ಯ ಒಡೆದು ಆಳುವ ಮೂಲಕ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಹರಿಹಾಯ್ದರು.

ತನಿಖಾ ಸಂಸ್ಥೆಗಳಾದ ಈಡಿ, ಐಟಿ, ಸಿಬಿಐಗಳನ್ನ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ರಾಜಕೀಯವಾಗಿ ವಿರೋಧಿ ಗಳನ್ನ ತನಿಖಾ ಸಂಸ್ಥೆಗಳ ಮೂಲಕ ಹಣಿಯುವ ಕೆಲಸ ಮಾಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾದ ದುರಾಡಳಿತದಿಂದ ದೇಶದಲ್ಲಿ ತುರ್ತು ಪರಿಸ್ಥಿತಿಯಂತ ವಾತಾವರಣ ನಿರ್ಮಾಣವಾಗಿದೆ, ವಿರೋಧ ಪಕ್ಷದ ಹಾಲಿ ಮುಖ್ಯಮಂತ್ರಿಗಳನ್ನ ಬಂಧನದಲ್ಲಿಟ್ಟು ಚುನಾವಣೆ ನಡೆಸಿದ ಕರಾಳ ಇತಿಹಾಸ ಕೇಂದ್ರದ ಬಿಜೆಪಿ ಸರ್ಕಾರ ನಿರ್ಮಿಸಿದೆ ಎಂದು ದೇಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜಾರ್ಖಂಡ ಮುಖ್ಯಮಂತ್ರಿ ಹೇಮಂತ ಸೋರೆನ್ ಬಂಧನದ ಕುರಿತು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರ ಖಾತೆಗೆ 10 ಲಕ್ಷ ರೂಪಾಯಿ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸಹಿತ ವಿವಿಧ ಭರವಸೆ ಗಳನ್ನ ನೀಡಿದ್ದ ಬಿಜೆಪಿ ಸರ್ಕಾರ 10 ವರ್ಷಗಳ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ, ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೆರಿಸುವ ಮೂಲಕ ದೇಶದ ಜನರ ಜೀವನ ಬಿಜೆಪಿ ದುಸ್ಥರಗೊಳಿಸಿದೆ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲು ದುಡ್ಡಿಲ್ಲ ಎನ್ನುವ ಕೇಂದ್ರ ಸರ್ಕಾರ ಉದ್ಯಮಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿ ರೈತರ ಹಿತವನ್ನು ಕಡೆಗಣಿಸಿದೆ, 6 ಸಾವಿರ ಕೋಟಿ ರೂಪಾಯಿ ಚುನಾವಣಾ ಬಾಂಡ ಹಗರಣದ ಮೂಲಕ ಬಿಜೆಪಿ ದೇಶದ ಜನರ ಮುಂದೆ ಬೆತ್ತಲಾಗಿದೆ ಎಂದರು.

ಜಿಲ್ಲೆಗೆ ಸಂಸದ ರಮೇಶ ಜಿಗಜಿಣಗಿಯ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮತ ಕೇಳುವ ಬದಲು ಸಂಸದ ರಮೇಶ ಜಿಗಜಿಣಗಿ ಹಣೆಬರಹದ ಮೂಲಕ ಮತ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅನುದಾನ ತರುವಲ್ಲಿ, ಅಭಿವೃದ್ಧಿ ಕಾರ್ಯಗಳು ಮಾಡುವಲ್ಲಿ ಜಿಗಜಿಣಗಿ ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲೆಗೆ ಬ್ರಾಡಗೇಜ್ ಮಂಜೂರು ಮಾಡಿರುವ ಕುರಿತು ಜಿಗಜಿಣಗಿ ಹೇಳಿಕೆ ಅಪ್ರಸ್ತುತ, ಸುಶಿಲಕುಮಾರ ಶಿಂಧೆಯವರ ಶ್ರಮದಿಂದ ಜಿಲ್ಲೆಗೆ ಎನ್.ಟಿ.ಪಿ.ಸಿ ಮಂಜೂರಾ ಗಿದ್ದು ಎನ್.ಟಿ.ಪಿ.ಸಿ ಅನುದಾನದಿಂದ ಬ್ರಾಡಗೇಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ಹೇಳಿದರು.

ದೇಶದ ಹಿತ ಕಾಪಾಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಅವರು ಮನವಿ ಮಾಡಿದರು.

ಯತ್ನಾಳ ಕುಟುಕಿದ ಶಿವಾನಂದ ಪಾಟೀಲ್: ಅಭಿವೃದ್ಧಿ ಕೆಲಸ ಮಾಡಿ ಮತ ಕೇಳಿ ಎಂದರೆ ಕೆಲವರು ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡುವ ಚಾಳಿ ಬೆಳೆಸಿಕೊಂಡಿದ್ದಾರೆ ಎಂದು ನಗರ ಶಾಸಕ ಯತ್ನಾಳ ಹೆಸರು ಪ್ರಸ್ತಾಪಿಸದೆ ಸಚಿವ ಶಿವಾನಂದ ಪಾಟೀಲ್ ಕುಟುಕಿದರು.

ಅದು ಕಚ್ಚುವುದು ಇಲ್ಲ, ಬೋಗಳುವುದಂತೂ ಬಿಡುವುದಿಲ್ಲ ಎಂದ ಅವರು ಆ ವ್ಯಕ್ತಿ ಸಂಸದನಾಗಲು ನಾನು ಕೂಡ ಕಾರಣಿ ಭೂತ ಅನ್ನುವುದು ಅವನು ಮರೆತಿದ್ದಾನೆ, ತಿಕೋಟ ಶಾಸಕನಿದ್ದ ಸಂದರ್ಭ ಆ ವ್ಯಕ್ತಿ ಸಂಸದನಾಗಲು ಬಾಗಿಲು ತೆಗೆದದ್ದೆ ನಾನು, ಅದೆಲ್ಲವನ್ನು ಮರೆತು ಅವನು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಸಮಯ ಬರುವುದಿದೆ ಆ ಸಮಯಕ್ಕಾಗಿ ನಾನು ಕಾಯುತ್ತಿದ್ದೆನೆ, ಎದುರಿಸಲು ನಾನು ಸಿದ್ಧನಿದ್ದೆನೆ ಎಂದು ಯತ್ನಾಳ ಹೆಸರು ಪ್ರಸ್ತಾಪಿಸಿದೆ ಅವರು ಹರಿಹಾಯ್ದರು.

ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ ದೇಶದ ಹಿತಾಸಕ್ತಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಕಳೆದ 10 ವರ್ಷಗಳಲ್ಲಿ ಬಿಜೆಪಿ ನೀಡಿರುವ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ ಅಚ್ಛೆ ದಿನ್, ಕಪ್ಪು ಹಣ, ಎರಡು ಕೋಟಿ ಸೇರಿದಂತೆ ಯಾವ ಭರವಸೆಗಳು ಕೂಡ ಈಡೇರಿಲ್ಲ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರಿಸಿದ್ದೆ ಬಿಜೆಪಿಯ ಸಾಧನೆಯಾಗಿದೆ ಎಂದು ವ್ಯಂಗ್ಯ ವಾಡಿದರು, ದೇಶದ ಹಿತಾಸಕ್ತಿಗಾಗಿ ಸರ್ವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಕರೆನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಎಸ್.ಬಿ ಪತಂಗಿ, ಉಸ್ಮಾನಪಟೇಲ್ ಖಾನ್ ಹಾಗೂ ಇತರರು ಮಾತನಾಡಿದರು.

ಪುಟ್ಟು ಪಾಟೀಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ, ತಾನಾಜಿ ನಾಗರಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಸುರೇಶ ಹಾರಿವಾಳ, ಆಯ್.ಸಿ ಪಟ್ಟಣಶೆಟ್ಟಿ, ಸಿ.ಎಸ್ ಗಿಡ್ಡಪ್ಪಗೋಳ, ಪ.ಪಂ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ವೇದಿಕೆಯ ಮೇಲಿದ್ದರು.