Saturday, 30th November 2024

Crime News: ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಸಂಶಯಪಿಶಾಚಿ!

murder attempt

ಬೆಂಗಳೂರು: ಸಂಶಯಪಿಶಾಚಿ ಪತಿಯೊಬ್ಬ ಹೆಂಡತಿಯ ಶೀಲ ಶಂಕಿಸಿ ಜಗಳ ತೆಗೆದು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ (Murder attempt) ಬಳಿಕ ತಾನೂ ಆತ್ಮಹತ್ಯೆಗೆ (Self harming) ಯತ್ನಿಸಿರುವ ಘಟನೆ ಬೆಂಗಳೂರಿನ (Bengaluru Crime news) ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊತ್ತನೂರು ಭಾಗದ ಮಾರಮ್ಮ‌ ದೇಗುಲದ ಬಳಿ ವಾಸವಿದ್ದ ಪ್ರಭು ಜಂಗ್ಲಿ ಎಂಬಾತನೇ ಪತ್ನಿ ಪ್ರಿಯಾಂಕಾಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದವನು. ಎರಡು ವರ್ಷದ ಹಿಂದೆ ಇವರಿಗೆ ಮದುವೆಯಾಗಿತ್ತು. ಪ್ರಭುಗೆ ಪ್ರಿಯಾಂಕಾ ನಡತೆಯ ಮೇಲೆ ಅನುಮಾನ ಇತ್ತು. ಪತ್ನಿ ಮೇಲೆ ಅನುಮಾನ ಪಟ್ಟು ಪದೇ ಪದೆ ಜಗಳ ಕೂಡ ಆಡುತ್ತಿದ್ದ. ಮೊನ್ನೆ ಸಂಜೆ ಕುಡಿದ ಮತ್ತಿನಲ್ಲಿ ಪೆಟ್ರೋಲ್ ತಂದ ಪ್ರಭು ಪತ್ನಿ ಪ್ರಿಯಾಂಕ್ ಮೇಲೆ ಸುರಿದು ತಾನೂ ಸುರಿದುಕೊಂಡಿದ್ದ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಪತ್ನಿಗೂ ಬೆಂಕಿ ಹಾಕಿದ್ದ.

ಬೆಂಕಿಯ ಉರಿ ತಾಳಲಾರದೆ ಮನೆಯಿಂದ ಹೊರಗಡೆ ಓಡಿ ಬಂದಿದ್ದ ಇಬ್ಬರನ್ನೂ ಸ್ಥಳೀಯರು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಭು ಮೂಲತಃ ಬೆಳಗಾವಿಯವನು. ಪ್ರಿಯಾಂಕ ಬೆಂಗಳೂನವರು. ಎರಡು ವರ್ಷಗಳ ಹಿಂದೆ ಪ್ರಭು, ಪ್ರಿಯಾಂಕ ಲವ್ ಮ್ಯಾರೇಜ್ ಆಗಿದ್ದರು. ಮದುವೆ ಆದಾಗಿನಿಂದಲೂ ಇಬ್ಬರೂ ಪ್ರತಿ ದಿನ ಜಗಳವಾಡುತ್ತಿದ್ದರು. ಪ್ರಭು ದಿನಾ ಕುಡಿದು ಬಂದು ಪ್ರಿಯಾಂಕ ಮೇಲೆ ಹಲ್ಲೆ ಮಾಡುತ್ತಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲೂ ದೂರುಗಳು ದಾಖಲಾಗಿವೆ. ಪ್ರಭು ತನ್ನ ಅಕ್ಕಂದಿರ ಮಾತು ಕೇಳಿ ಪ್ರಿಯಾಂಕ‌ ಮೇಲೆ ಅನುಮಾನ ಪಡುತ್ತಿದ್ದ. ಒಂದೂವರೆ ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಸಂಸಾರ ಮುಂದುವರೆಸಿದ್ದರು, ಬುಧವಾರ ಸಂಜೆ ಮತ್ತೆ ಇಬ್ಬರೂ ಜಗಳ ಆಡಿದ್ದಾರೆ. ಮಾತಿಗೆ ಮಾತು ಬೆಳೆದು ಪ್ರಭು ಪ್ರಿಯಾಂಕ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಸದ್ಯ ಇಬ್ಬರಿಗೂ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಪಿ ಪತಿ ಪ್ರಭು ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Bengaluru Woman Murder: ಪ್ರೇಯಸಿಯನ್ನು ಕೊಚ್ಚಿ ಫ್ರಿಜ್‌ನಲ್ಲಿ ತುಂಬಿದ ಪಾತಕಿ ಪಶ್ಚಿಮ ಬಂಗಾಳದಲ್ಲಿ ಕಣ್ಮರೆ